ಮೈಸೂರು: ಮಹಾಮಾರಿ ಕೋವಿಡ್ ವೈರಸ್‌ನಿಂದಾಗಿ ಬೀದಿ ಬದಿ ವ್ಯಾಪಾರ ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಬಡ ವ್ಯಾಪಾರಿಗಳ ಬದುಕು ಅತಂತ್ರವಾಗಿದೆ. ಕೋವಿಡ್ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ಲಾಕ್‌ಡೌನ್ ಜಾರಿಮಾಡಿರುವುದು ಹಾಗೂ ಕೇಂದ್ರ, ರಾಜ್ಯ ಸರ್ಕಾರ ಎಲ್ಲೆಡೆ ಬೀದಿ ಬದಿ ವ್ಯಾಪಾರ ನಿಷೇಧಿಸಿರುವ ಪರಿಣಾಮ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳು ದುಡಿಮೆಯಿಲ್ಲದೆ, ನಿತ್ಯ ಜೀವನ ನಡೆಸಲು ಪರದಾಡುವಂತಾಗಿದೆ.
ವ್ಯಾಪಾರವಿಲ್ಲದೆ ಕಂಗಾಲು: ನಗರದಲ್ಲಿ 6 ಸಾವಿರಕ್ಕೂ ಹೆಚ್ಚಿನ ಬೀದಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ವಿವಿಧ ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದು, ಇದರಲ್ಲಿ 4 ಸಾವಿರ ವ್ಯಾಪಾರಿಗಳು ಬೀದಿ ಬದಿ ಆಹಾರ ಮಾರಾಟ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದಾಗಿ ನಗರದ ಎಲ್ಲ ಬೀದಿ ಬದಿ ಆಹಾರ ಮಾರಾಟವನ್ನು ನಗರಪಾಲಿಕೆ ಅಧಿಕಾರಿಗಳು ನಿಲ್ಲಿಸಿದ್ದಾರೆ. ಇನ್ನು ತರಕಾರಿ ವ್ಯಾಪಾರವೂ ನಿಗಧಿತ ಸ್ಥಳದಲ್ಲಿ ನಡೆಯುತ್ತಿದ್ದರೂ, ವ್ಯಾಪಾರವಿಲ್ಲದೆ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಪರಿಣಾಮ ಕಳೆದ ಒಂದು ತಿಂಗಳಿಂದ ಯಾವುದೇ ವ್ಯಾಪಾರ, ವಹಿವಾಟು ಇಲ್ಲದೆ ಬದಿ ವ್ಯಾಪಾರ ನಂಬಿ ಜೀವನ ಸಾಗಿಸುತ್ತಿರುವವರ ಕುಟುಂಬ ತೊಂದರೆ ಅನುಭವಿಸುತ್ತಿದ್ದಾರೆ.
ಎಲ್ಲಾ ಅಂಗಡಿಗಳು ಬಂದ್: ನಗರದಲ್ಲಿ ಎರಡನೇ ಕೊರೊನಾ ಪ್ರಕರಣದ ಪತ್ತೆಯಾದ ಮಾರ್ಚ್ ಎರಡನೇ ವಾರದಿಂದಲೇ ನಗರದ ಬಹುತೇಕ ಭಾಗದ ಬೀದಿ ವ್ಯಾಪಾರ ಬಂದ್ ಆಗಿದ್ದವು. ಇನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಲಾಕ್‌ಡೌನ್ ಘೋಷಿಸಿದ ನಂತರ ಎಲ್ಲ ಬೀದಿ ಬದಿ ವ್ಯಾಪಾರ ಬಂದ್ ಆಗಿದ್ದು, ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಕುಟುಂಬಗಳು ಪರದಾಡುವಂತಾಗಿವೆ.
ಆಹಾರ ಮಾರಾಟ ಮಾಡುವ ವೇಳೆ ಹೆಚ್ಚು ಜನರು ಜಮಾಯಿಸುವುದರಿಂದ ಕೋವಿಡ್ ಹರಡಬಹುದು ಎಂಬ ನೆಪವೊಡ್ಡಿರುವ ಅಧಿಕಾರಿಗಳು ಲಾಕ್‌ಡೌನ್ ಘೋಷಣೆಗೂ ಒಂದು ವಾರದ ಮೊದಲೆ ಬೀದಿ ಬದಿ, ರಸ್ತೆ ಇಕ್ಕೆಲ, ಪಾದಚಾರಿ ಮಾರ್ಗ, ಮಾರುಕಟ್ಟೆ, ಬಸ್ ನಿಲ್ದಾಣಗಳ ಬಳಿ ವ್ಯಾಪಾರ ಮಾಡುತ್ತಿದ್ದ ತಿಂಡಿ-ತಿನಿಸು, ಟೀ ಅಂಗಡಿ, ಗೋಬಿ, ಪಾನೀಪುರಿ, ಚಾಟ್ಸ್, ಬಿಡಿ ಹಣ್ಣು ಮಾರಾಟ ಸೇರಿದಂತೆ ಮತ್ತಿತರ ಅಂಗಡಿಗಳ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದರು.
ವ್ಯಾಪಾರ ಕುಟುಂಬಕ್ಕೆ ಆಧಾರ: ಮೈಸೂರು ನಗರದಲ್ಲಿ ಪ್ರತಿನಿತ್ಯ ಬೀದಿ ಬದಿ ವ್ಯಾಪಾರದಲ್ಲೇ ಕನಿಷ್ಠ 30ರಿಂದ 50 ಲಕ್ಷ ರೂ. ವ್ಯಾಪಾರ ವಹಿವಾಟು ನಡೆಯುತ್ತದೆ. ಪ್ರತಿ ವ್ಯಾಪಾರಿಯೂ ನಿತ್ಯ ಕನಿಷ್ಠ 500 ರೂ.ನಿಂದ ಎರಡು ಸಾವಿರದವರೆಗೂ ಸಂಪಾದನೆ ಮಾಡುತ್ತಾರೆ. ಇದೇ ಅವರ ಕುಟುಂಬಕ್ಕೆ ಆಧಾರ ಮತ್ತು ಆದಾಯ ಮೂಲವಾಗಿದೆ. ಆದರೆ ಲಾಕ್‌ಡೌನ್ ಪರಿಣಾಮ ವ್ಯಾಪಾರಿಗಳು ಕಣ್ಣು ಬಾಯಿ ಬಿಡುವಂತಾಗಿದೆ. ಒಟ್ಟಾರೆ ಒಂದು ತಿಂಗಳಲ್ಲಿ ಬಿದಿ ಬದಿ ವ್ಯಾಪರದಲ್ಲಿ ಒಟ್ಟಾರೆ 10ರಿಂದ 15 ಕೋಟಿ ರೂ. ನಷ್ಟ ಉಂಟಾಗಿದೆ.
ಕಳೆದ 20 ವರ್ಷಗಳಿಂದ ಬೆಳಗ್ಗೆ ಮತ್ತು ಸಂಜೆ ಎರಡು ತಾಸು ಫುಟ್‌ಪಾತ್ ಮೇಲೆ ವ್ಯಾಪಾರ ಮಾಡುತ್ತಿದ್ದೆ. ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಬದಲಿಗೆ ಜನರಿಗೂ ಕಡಿಮೆ, ಸುಲಭವಾಗಿ ತರಕಾರಿಗಳು ಸಿಗುತ್ತಿದ್ದವು. ಕೋವಿಡ್ ಮಹಾಮಾರಿ ನಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯಾಕಿದೆ.
● ನಂಜುಂಡ, ಬೀದಿಬದಿ ವ್ಯಾಪಾರಿ
ಸತೀಶ್ ದೇಪುರ