Advertisement

ರೈತರಿಂದ ನೇರ ವ್ಯಾಪಾರಕೆ ಮುಕ್ತ ಅವಕಾಶ

02:30 PM Apr 16, 2020 | mahesh |

ದೊಡ್ಡಬಳ್ಳಾಪುರ: ಲಾಕ್‌ಡೌನ್‌ನಿಂದಾಗಿ ರೈತರ ಉತ್ಪನ್ನಗಳಿಗೆ ಬೆಲೆಯಿಲ್ಲದೇ ಕಂಗಾಲಾಗಿರುವ ಹಿನ್ನಲೆಯಲ್ಲಿ ಉತ್ಪನ್ನಗಳ ಮಾರಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಜ್ಯೂಸ್‌ ಮತ್ತು ವೈನ್‌ ಕಾರ್ಖಾನೆ ತೆರೆಯುವ ಕುರಿತು ಹಾಗೂ ಹೂ ಬೆಳೆಗಾರರ ಬಡ್ಡಿ ಮನ್ನಾ ಮಾಡುವ ಕುರಿತು ಮುಖ್ಯಮಂತ್ರಿಗಳೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌. ಅಶೋಕ್‌ ತಿಳಿಸಿದ್ದಾರೆ.

Advertisement

ನಗರದ ಎಪಿಎಂಸಿ ಸಭಾಂಗಣದಲ್ಲಿ ಮಧುರೆ ಹೋಬಳಿ ತರಕಾರಿ ಬೆಳೆಯುವ ಪ್ರಮುಖ ರೈತರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ರೈತರ ಸಮಸ್ಯೆ ಆಲಿಸಿ ಮಾತನಾಡಿದರು. ಸಭೆಯಲ್ಲಿ ಮಾತನಾಡಿದ ರೈತರು, ವರ್ತಕರು ಕೇಳಿದ ಬೆಲೆಗೆ ನೀಡಬೇಕಾದ ಸ್ಥಿತಿಯಿದೆ. ಚಿಲ್ಲರೆ ಮಾರಾಟಕ್ಕೂ ಅವಕಾಶವಿಲ್ಲ. ತಾಲೂಕಿನಲ್ಲಿ ಬೆಳೆದ ದ್ರಾಕ್ಷಿ ಮಾರಾಟಕ್ಕೆ ಜ್ಯೂಸ್‌ ಮತ್ತು ವೈನ್‌ ಕಾರ್ಖಾನೆ ತೆರೆದರೆ ಅನುಕೂಲ ಸೇರಿದಂತೆ ಹಲವು ಸಮಸ್ಯೆಗಳನ್ನು ತೋಡಿಕೊಂಡರು. ದೊಡ್ಡಬಳ್ಳಾಪುರದಲ್ಲಿ 25 ಸಾವಿರಕ್ಕೂ ಹೆಚ್ಚು ನೇಕಾರರಿದ್ದು , ಲಾಕ್‌ಡೌನ್‌ನಿಂದ ಉಂಟಾಗಿರುವ ತೊಂದರೆಯಿಂದ ನೇಕಾರರಿಗೆ ಸರ್ಕಾರದ ನೆರವುನೀಡ ಬೇಕು ಎಂದು ಶಾಸಕ ಟಿ.ವೆಂಕಟರಮಣಯ್ಯ ಮನವಿ ಮಾಡಿದರು.

ಸೀಲ್‌ಡೌನ್‌ ಪ್ರದೇಶದಲ್ಲಿ ಕರ್ಫ್ಯೂ ವಿಧಿಸಿ: ವ್ಯಕ್ತಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ತಾಲೂಕಿನ ಕೋಡಿ ಪಾಳ್ಯ ಗ್ರಾಮಕ್ಕೆ ಸಂಪೂರ್ಣ ನಿರ್ಬಂಧ ಹೇರಿ, ಜನರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಡೀಸಿ ರವೀಂದ್ರ ಹಾಗೂ ಎಸ್‌ಪಿ ರವಿ ಡಿ. ಚನ್ನಣ್ಣನವರ್‌ಗೆ ಸಚಿವರು
ಸೂಚನೆ ನೀಡಿದರು.

ಕಾರ್ಮಿಕರನ್ನು ಮನೆಗೆ ಕಳುಹಿಸಿದರೆ ಕ್ರಮ:
ಕೊರೊನಾ ಹಿನ್ನಲೆಯಲ್ಲಿ ಕಾರ್ಖಾನೆಗಳ ಆಶ್ರಯದಲ್ಲಿ ನೆಲೆಸಿರುವ ಕಾರ್ಮಿಕರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಕಾರ್ಖಾನೆಯ ಮಾಲೀಕರದ್ದಾಗಿದೆ.  ಮಾಲಿಕರು ಕಾರ್ಮಿಕರನ್ನು ಕೆಲಸದಿಂದ ತೆಗೆದರೆ ಅಥವಾ ಹೊರದೂಡಿದರೆ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದ ರು. ಸಂಸದ ತೇಜಸ್ವಿ ಸೂರ್ಯ, ಶಾಸಕ ಟಿ. ವೆಂಕಟರಮಣಯ್ಯ, ಜಿಪಂ ಅಧ್ಯಕ್ಷೆ ಜಯಮ್ಮ ಲಕ್ಷ್ಮೀನಾರಾಯಣ…, ಉಪ ವಿಭಾಗಾಧಿಕಾರಿ ಸಿ.ಮಂಜುನಾಥ್‌, ತಹಶೀ ಲ್ದಾರ್‌ ಟಿ.ಎಸ್‌.ಶಿವರಾಜ್‌, ಎಪಿಎಂಸಿ ಅಧ್ಯಕ್ಷ ಮಂಜುನಾಥ್‌, ಜಿಲ್ಲಾ ಪೊಲೀಸ್‌ ಅಧೀಕ್ಷಕ ರವಿ.ಡಿ.ಚನ್ನಣ್ಣನವರ್‌, ಡಿವೈಎಸ್‌ಪಿ ಟಿ. ರಂಗಪ್ಪ, ಜಿಲ್ಲಾ ಹಾಗೂ ತಾಲೂಕು ಅಧಿಕಾರಿ ಗಳು, ರೈತ ಮುಖಂಡರು ಭಾಗವಹಿಸಿದ್ದರು.

ಮೈದಾನಗಳಲ್ಲಿ ಮಾರಾಟಕ್ಕೆ ಅವಕಾಶ
ರೈತರ ಉತ್ಪನ್ನಗಳ ವಾಹನಗಳು ಸಂಚಾರಕ್ಕೆ ನಿರ್ಬಂಧವಿಲ್ಲ. ಬೆಂಗಳೂರಿನಲ್ಲಿ ತರಕಾರಿ ಹಾಗೂ ಹಣ್ಣುಗಳ ಮಾರಾಟಕ್ಕೆ 28 ವಿಧಾನ ಸಭಾ ಕ್ಷೇತ್ರಗಳ 60 ಮೈದಾನ ಗುರುತಿಸಲಾಗಿದ್ದು, ತಳ್ಳುವ ಗಾಡಿಗಳಲ್ಲಿ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ್ಟ್‌ಮೆಂಟ್‌ಗಳಲ್ಲಿ ರೈತರು ನೇರವಾಗಿ ಮಾರಾಟ ಮಾಡಬಹುದಾಗಿದೆ. ರೈತರು ಒಗ್ಗೂಡಿ ಅಗತ್ಯಕ್ಕನುಸಾರವಾಗಿ ವಾಹನಗಳ ವ್ಯವಸ್ಥೆ ಮಾಡಿಕೊಂಡು ಬೆಳಿಗ್ಗೆ 3 ಗಂಟೆ ವೇಳೆಗೆ ಮಾರಾಟದ ಸ್ಥಳಕ್ಕೆ ಬಂದರೆ ಅಲ್ಲಿ ರೈತರಿಗೆ ನೀರು, ಶೌಚಾಲಯಗಳ ವ್ಯವಸ್ಥೆ ಮಾಡಿ, ಪೊಲೀಸ್‌ ಬಂದೋಬಸ್ತ್ ಮಾಡಲಾಗಿರುತ್ತದೆ. ಮೊದಲು ಪದ್ಮನಾಭನಗರದಿಂದ ಆರಂಭಿಸಿ ನಂತರ ಎಲ್ಲೆಡೆ ವಿಸ್ತರಿಸಲಾಗುವುದು. ಪಾಸ್‌ ಪಡೆದ ಮಾರಾಟಗಾರರು ರೈತರಿಂದ ನೇರವಾಗಿ ಖರೀದಿ ಮಾಡುವುದರಿಂದ ರೈತರಿಗೆ ಉತ್ತಮ ಬೆಲೆ ದೊರೆಯಲಿದೆ. ಇದಕ್ಕಾಗಿ ರೈತರ ವ್ಯಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಲಾಗಿದೆ. ಹಾಪ್‌ಕಾಮ್ಸ್‌ ಸಹ ಇದಕ್ಕೆ ಸಹಕಾರ ನೀಡಲಿದೆ. ರೈತರ ಕೃಷಿಗೆ ಪೂರಕವಾಗಿ ರಸಗೊಬ್ಬರ ಮಾರಾಟ, ಕೃಷಿ ಪರಿಕರಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಎಲ್ಲಾ ಕಸುಬುಗಳಲ್ಲಿಯೂ ಇಂದು ಸಂಕಷ್ಟ ಎದುರಾಗಿದ್ದು, ಆದ್ಯತೆಯ ಮೇರೆಗೆ ಸರ್ಕಾರ ನೆರವು ನೀಡುತ್ತಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next