Advertisement

ಬಾಡಿಗೆ ಮೊತ್ತಕ್ಕೆ ಟ್ರ್ಯಾಕ್ಟರ್‌ಗಳೇ ಬರುತ್ತವೆ!

01:06 AM Aug 28, 2019 | Team Udayavani |

ಬೆಂಗಳೂರು: ಗಣೇಶ ವಿಸರ್ಜನೆಯ ಮೊಬೈಲ್‌ ಟ್ಯಾಂಕರ್‌ಗಳಿಗೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಪ್ರತಿ ವರ್ಷ ಪಾವತಿಸುವ ಬಾಡಿಗೆ ಮೊತ್ತದಲ್ಲಿ ಹತ್ತಾರು ಹೊಸ ಟ್ರ್ಯಾಕ್ಟರ್‌ಗಳೇ ಬರುತ್ತವೆ!

Advertisement

ಹೌದು, ಕಳೆದ ವರ್ಷ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 14 ಟ್ಯಾಂಕರ್‌ಗಳು ಸೇರಿ 174 ಟ್ರ್ಯಾಕ್ಟರ್‌ ಚಾಲಿತ ಮೊಬೈಲ್‌ ಟ್ಯಾಂಕರ್‌ಗಳನ್ನು ವಾರದ ಮಟ್ಟಿಗೆ ಬಾಡಿಗೆ ರೂಪದಲ್ಲಿ ಪಡೆಯಲಾಗಿತ್ತು. ಅವುಗಳ ಮೊತ್ತ ಅಂದಾಜು 2.80ರಿಂದ 3 ಕೋಟಿ ರೂ. ಆಗುತ್ತದೆ. ಅಂದರೆ, ಪ್ರಸ್ತುತ ಮಾರುಕಟ್ಟೆ ದರದ ಪ್ರಕಾರ ಹೆಚ್ಚು-ಕಡಿಮೆ 40 ಹೊಸ ಟ್ರ್ಯಾಕ್ಟರ್‌ಗಳನ್ನೇ ಖರೀದಿಸಬಹುದಿತ್ತು.

ಗಣೇಶ ಉತ್ಸವದ ವೇಳೆ ಮೂರ್ತಿಗಳ ವಿಸರ್ಜನೆಗಾಗಿ ನಗರದ ವಿವಿಧೆಡೆ ನೂರಾರು ಟ್ರ್ಯಾಕ್ಟರ್‌ ಚಾಲಿತ ಮೊಬೈಲ್‌ ಟ್ಯಾಂಕರ್‌ಗಳನ್ನು ನಿರ್ಮಿಸಲಾಗುತ್ತದೆ. ಟ್ರ್ಯಾಕ್ಟರ್‌ ಜತೆಗೆ ಇಬ್ಬರು ಕಾರ್ಮಿಕರು ಹಾಗೂ ಅದಕ್ಕೆ ನೀರು ಆಯಾ ಟ್ಯಾಂಕರ್‌ ಮಾಲಿಕರ ಜವಾಬ್ದಾರಿ. ಇದೆಲ್ಲವೂ ಸೇರಿ ಕಳೆದ ವರ್ಷ ಒಂದು ದಿನಕ್ಕೆ ಸರಾಸರಿ 25 ಸಾವಿರ ರೂ. ನಿಗದಿಪಡಿಸಲಾಗಿತ್ತು. ವಾರದ ಲೆಕ್ಕಹಾಕಿದರೆ, ಇವುಗಳನ್ನು ಬಾಡಿಗೆ ಸರಾಸರಿ 1.75- 1.80 ಲಕ್ಷ ಆಗುತ್ತದೆ.

2018ರಲ್ಲಿ ಪಡೆದ ಒಟ್ಟಾರೆ 174 ಟ್ಯಾಂಕರ್‌ಗಳಿಗೆ ಲೆಕ್ಕಹಾಕಿದರೆ, ಪಾವತಿಸಿದ ಮೊತ್ತ (ಇನ್ನೂ ಕೆಲವೆಡೆ ಪಾವತಿ ಬಾಕಿ ಇದೆ) 2.80ರಿಂದ 3 ಕೋಟಿ ರೂ. ಆಗುತ್ತದೆ. ಇನ್ನು ಹೊಸ ಟ್ರ್ಯಾಕ್ಟರ್‌ಗಳ ಬೆಲೆಯೇ 6.5ರಿಂದ 7 ಲಕ್ಷ ರೂ. ಇದೆ. ಇದೇ ಮೊತ್ತದಲ್ಲಿ ಕನಿಷ್ಠ 40 ಟ್ರ್ಯಾಕ್ಟರ್‌ಗಳು ಶಾಶ್ವತವಾಗಿ ಪಾಲಿಕೆ ಖರೀದಿಸಬಹುದಿತ್ತು. ಆಗ, ಪ್ರತಿ ವರ್ಷ ಹೀಗೆ ಹೆಚ್ಚಿನ ದರದಲ್ಲಿ ಬಾಡಿಗೆ ಪಡೆಯುವ ಪ್ರಮೇಯ ಬರುತ್ತಿರಲಿಲ್ಲ. ಪಾಲಿಕೆಗೆ ಇದರಿಂದ ಉಳಿತಾಯವೂ ಆಗುತ್ತಿತ್ತು ಎಂದು ತಜ್ಞರು ಹೇಳುತ್ತಾರೆ.

ದುಂದುವೆಚ್ಚ ಯಾಕೆ?: ಕಳೆದ ವರ್ಷ ಗಣೇಶ ವಿಸರ್ಜನೆಗೆ ಅತಿ ಹೆಚ್ಚು ಮೊಬೈಲ್‌ ಟ್ಯಾಂಕರ್‌ಗಳನ್ನು ಬಾಡಿಗೆ ಪಡೆದಿದ್ದು, ರಾಜರಾಜೇಶ್ವರಿ ನಗರದಲ್ಲಿ. ಪಾಲಿಕೆ ನಿಯೋಜಿಸಿದ್ದ ಒಟ್ಟಾರೆ 160ರಲ್ಲಿ 70 ಟ್ಯಾಂಕರ್‌ಗಳನ್ನು ಇಲ್ಲಿ ನೀಡಲಾಗಿತ್ತು. ಅದೇ ರೀತಿ, ಬೊಮ್ಮನಹಳ್ಳಿಯಲ್ಲಿ 43 ಟ್ಯಾಂಕರ್‌ಗಳನ್ನು ಬಾಡಿಗೆ ಪಡೆಯಲಾಗಿತ್ತು.

Advertisement

2017ರಲ್ಲಿ ಮೊಬೈಲ್‌ ಟ್ಯಾಂಕರ್‌ಗಳ ಸಂಖ್ಯೆ ಮಾಲಿನ್ಯ ನಿಯಂತ್ರಣ ಮಂಡಳಿಯ 42 ಸೇರಿ ಒಟ್ಟಾರೆ 216 ಇತ್ತು. ಬಾಡಿಗೆ ಕೂಡ 20 ಸಾವಿರಕ್ಕಿಂತ ಹೆಚ್ಚಿತ್ತು ಎನ್ನಲಾಗಿದೆ. ಕೆರೆಗಳ ಹುಳು ತೆಗೆಯಲು ಮತ್ತಿತರ ಉದ್ದೇಶಗಳಿಗೆ ಗುತ್ತಿಗೆ ಪಡೆಯುವ ಟ್ರ್ಯಾಕ್ಟರ್‌ಗಳಿಗೆ ಹೆಚ್ಚೆಂದರೆ ದಿನಕ್ಕೆ 2,500ರಿಂದ 3 ಸಾವಿರ ರೂ. ಬಾಡಿಗೆ ಇರುತ್ತದೆ. ಗಣೇಶ ಉತ್ಸವ ಸಂದರ್ಭದಲ್ಲಿ ಕಾರ್ಮಿಕರು ಮತ್ತಿತರೆ ಖರ್ಚು ಸೇರಿ 10 ಸಾವಿರ ಪಡೆಯಲಿ.

ಅದು ಬಿಟ್ಟು ಹಲವುಪಟ್ಟು ಹೆಚ್ಚು ಪಡೆಯುವುದು ಎಷ್ಟು ಸರಿ ಆರ್ಥಿಕ ಸಂಕಷ್ಟದಲ್ಲಿರುವ ಬಿಬಿಎಂಪಿಗೆ ಇಷ್ಟೊಂದು ದುಂದುವೆಚ್ಚದ ಅವಶ್ಯಕತೆ ಇದೆಯೇ? ಮನಸ್ಸು ಮಾಡಿದ್ದರೆ, ಇದಕ್ಕೆ ಕಡಿವಾಣ ಹಾಕಬಹುದು. ಆದರೆ, ಕೆಲವರ ಲಾಬಿಯಿಂದ ಟ್ಯಾಂಕರ್‌ಗಳನ್ನು ಹೆಚ್ಚಿನ ಬಾಡಿಗೆಗೆ ನಿರ್ದಿಷ್ಟ ಗುತ್ತಿಗೆದಾರರಿಂದ ಪಡೆಯಲಾಗುತ್ತಿದೆ ಎಂದೂ ತಜ್ಞರು ಆರೋಪಿಸುತ್ತಾರೆ.

ನಿರ್ವಹಣೆಗೂ ಬಾಡಿಗೆ ಪಾವತಿ: ಮೊಬೈಲ್‌ ಟ್ಯಾಂಕರ್‌ಗಳಲ್ಲದೆ ತಾತ್ಕಾಲಿಕ ಕಲ್ಯಾಣಿಗಳು, ಶಾಶ್ವತ ಕಲ್ಯಾಣಿ, ಕೆರೆಗಳಲ್ಲೂ ಗಣೇಶ ಮೂರ್ತಿಗಳ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ. ಅವುಗಳ ನಿರ್ವಹಣೆಗೂ ಸಾವಿರಾರು ರೂ. ಬಾಡಿಗೆ ಪಾವತಿಸಲಾಗುತ್ತಿದೆ. ಆದರೆ, ಇಂತಹ ಕಲ್ಯಾಣಿ ಅಥವಾ ಕೆರೆಗಳಲ್ಲಿ ಇಂತಿಷ್ಟೇ ಗಾತ್ರದ ಮೂರ್ತಿ ವಿಸರ್ಜನೆ ಮಾಡಬೇಕು ಎಂದು ನಿಯಮ ವಿಧಿಸಿಲ್ಲ.

ಇದರಿಂದ ವೈಟ್‌ಫೀಲ್ಡ್‌ನ ದೊಡ್ಡ ಗಣೇಶನ ಮೂರ್ತಿಗಳು ಈ ಹಿಂದಿನ ವರ್ಷಗಳಲ್ಲಿ ಹಲಸೂರು ಕೆರೆಗೆ ಬಂದ ಉದಾಹರಣೆಗಳೂ ಇವೆ. ಹಾಗಾಗಿ, ಮೂರ್ತಿಗಳ ಗಾತ್ರಗಳನ್ನು ನಿಗದಿಪಡಿಸಬೇಕು. ಅವುಗಳಿಗೆ ನಿಗದಿಪಡಿಸಿದ ಕೆರೆ ಅಥವಾ ಕಲ್ಯಾಣಿಗಳಲ್ಲೇ ವಿಸರ್ಜನೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಫ್ರೆಂಡ್‌ ಆಫ್ ಲೇಕ್‌ ಸಂಸ್ಥೆಯ ರಾಮಪ್ರಸಾದ್‌ ಸಲಹೆ ನೀಡುತ್ತಾರೆ.

ಮೊಬೈಲ್‌ ಟ್ಯಾಂಕರ್‌ ಎಂದರೆ ಬರೀ ಟ್ಯಾಂಕರ್‌ ಬರುವುದಿಲ್ಲ. ಅದರೊಂದಿಗೆ ನೀರು, ಆ ನೀರನ್ನು ಹಿಡಿದಿಡುವ ಕವರ್‌, ಇಬ್ಬರು ಕಾರ್ಮಿಕರು, ಡೀಸೆಲ್‌ ಮತ್ತಿತರ ಖರ್ಚು ಬರುತ್ತದೆ. ಹಲವು ಟ್ರಿಪ್‌ಗಳನ್ನೂ ಇವು ಪೂರೈಸುತ್ತವೆ. ಇದೆಲ್ಲ ಸೇರಿ ಒಂದು ಘಟಕ ಆಗುತ್ತದೆ. ಅದೆಲ್ಲವನ್ನೂ ಪರಿಗಣಿಸಿ ಆಯಾ ವಲಯಮಟ್ಟದಲ್ಲಿ ಸೂಕ್ತ ದರ ನಿಗದಿಪಡಿಸಿ ಬಾಡಿಗೆ ನೀಡಲಾಗುವುದು. ಇದೆಲ್ಲವನ್ನೂ ವಲಯಗಳ ಜಂಟಿ ನಿರ್ದೇಶಕರು ಮತ್ತು ಮುಖ್ಯ ಎಂಜಿನಿಯರ್‌ಗಳು ನಿರ್ವಹಿಸುತ್ತಾರೆ.
-ರವೀಂದ್ರ ಸುರಪುರ, ಅಪರ ಆಯುಕ್ತರು, ಬಿಬಿಎಂಪಿ

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next