Advertisement

ಜಮೀನಿನಲ್ಲೂ ಟ್ರ್ಯಾಕ್ಟರ್‌ ವಿಮಾನದ ಉಳುಮೆ

03:45 AM Feb 16, 2017 | |

ಬೆಂಗಳೂರು: ಸಾಮಾನ್ಯ ಟ್ರ್ಯಾಕ್ಟರ್‌ಗಳನ್ನು ಬಳಿಸಿ ಬೇಸಾಯ ಮಾಡುವ ವಿಧಾನ ಈಗ ಹಳೆಯದಾಯ್ತು. ಆ ಟ್ರ್ಯಾಕ್ಟರ್‌ ಮಾಡುವ ಬಹುತೇಕ ಎಲ್ಲ ಚಟುವಟಿಕೆಗಳನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಪ್ರದೇಶಗಳಲ್ಲಿ ಕೆಲಸವನ್ನು ಮಾಡಿಮುಗಿಸಲು  ಏರ್‌ ಟ್ರ್ಯಾಕ್ಟರ್‌ ಅನ್ನು ಪರಿಚಯಿಸಲಾಗಿದೆ. 

Advertisement

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ-2017ರಲ್ಲಿ ಕಾಣಬಹುದಾಗಿದ್ದು ಇದನ್ನು ಆಸ್ಟ್ರೇಲಿಯದ ಕಂಪೆನಿಯೊಂದು ಅಭಿವೃದ್ಧಿಪಡಿಸಿದೆ.ಈ ವಿಮಾನದ ಸಹಾಯದಿಂದ ಬಿತ್ತನೆ, ರಸಗೊಬ್ಬರ ಸಿಂಪರಣೆ, ಬೆಂಕಿ ನಂದಿಸುವುದು, ಕೃಷಿ ಉತ್ಪನ್ನಗಳ ಸಾಗಣೆ ಸೇರಿದಂತೆ ಹಲವು ಕೆಲಸಗಳನ್ನು ಮಾಡಬಹುದು. ಕೃಷಿ ಉದ್ದೇಶಗಳಿಗೆ ಪೂರಕವಾಗಿ ವಿಮಾನದ ವಿನ್ಯಾಸ ರೂಪಿಸಲಾಗಿದೆ. ಅಗಲವಾದ ರೆಕ್ಕೆಗಳು, ಅದರ ಒಂದು ಭಾಗದಲ್ಲಿ ಟ್ಯಾಂಕರ್‌ ಹಾಗೂ ತಳಭಾಗದಲ್ಲಿ ಸಿಂಪರಣೆ ಮಾಡುವ ಚಿಕ್ಕ ರಂಧ್ರಗಳಿರುವ ಪೈಪ್‌ಗ್ಳನ್ನು ಅಳವಡಿಸಲಾಗಿದೆ. ಎಲ್ಲೆಂದರಲ್ಲಿ ಲ್ಯಾಂಡ್‌ ಮಾಡಬಹುದು. ಒಬ್ಬ ಪೈಲಟ್‌ ಮತ್ತೂಬ್ಬ ಸಹಾಯಕ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಇದರಲ್ಲಿದೆ. 

ಸಣ್ಣ ರೈತರಿಗೆ ಸೂಕ್ತವಲ್ಲ
ಆದರೆ, ಇದು ಸಣ್ಣ-ಮಧ್ಯಮ ರೈತರಿಗೆ ಅಷ್ಟು ಅನುಕೂಲ ಆಗುವುದಿಲ್ಲ. ನೂರಾರು ಎಕರೆ ಭೂಮಿ ಹೊಂದಿರುವ ರೈತರು ಅಥವಾ ಸರ್ಕಾರದ ಜಮೀನುಗಳಿಗೆ ಹೆಚ್ಚು ನೆರವಾಗಲಿದೆ. ಅದರಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿರುವ ಜಮೀನುಗಳು, ಉಪ ಅರಣ್ಯ ಪ್ರದೇಶಗಳಲ್ಲಿ ಅದರಲ್ಲೂ ಹತ್ತಾರು ರೈತರು ಸೇರಿಕೊಂಡು ಒಂದು ಸೊಸೈಟಿ ಅಥವಾ ಸಂಘದಡಿ ಈ ಮಾದರಿಯ ವಿಮಾನಗಳ ಮೂಲಕ ಕೃಷಿ ಚಟುವಟಿಕೆಗಳನ್ನು ಮಾಡಬಹುದು. ಕನಿಷ್ಠ ಸಾವಿರ ಎಕರೆ ಭೂಮಿ ಇರುವ ಪ್ರದೇಶದಲ್ಲಿ ಏರ್‌ ಟ್ರ್ಯಾಕ್ಟರ್‌ ಹೇಳಿಮಾಡಿಸಿದ್ದಾಗಿದೆ ಎಂದು ಆಸ್ಟ್ರೇಲಿಯದ ಫೀಲ್ಡ್‌ ಏರ್‌ ಗ್ರೂಪ್‌ ಕಂಪೆನಿಗಳ ವಿಮಾನ ಮಾರುಕಟ್ಟೆ ವ್ಯವಸ್ಥಾಪಕ ಜೇಮ್ಸ್‌ ಒಬ್ರಿಯನ್‌ ತಿಳಿಸಿದ್ದಾರೆ. 

ಸಾವಿರ ಎಕರೆ ಭೂಮಿಗೆ ನೀರು ಅಥವಾ ರಸಗೊಬ್ಬರ ಸಿಂಪರಣೆಯನ್ನು ಏರ್‌ ಟ್ರ್ಯಾಕ್ಟರ್‌ 3ರಿಂದ 4 ತಾಸುಗಳಲ್ಲಿ ಮಾಡಿಮುಗಿಸುತ್ತದೆ. ಪ್ರತಿ ಗಂಟೆಗೆ 190 ಲೀ. ಇಂಧನ ಇದಕ್ಕೆ ಬೇಕಾಗುತ್ತದೆ. ಇಷ್ಟೇ ವಿಸ್ತೀರ್ಣದಲ್ಲಿ ಇದೇ ಕೆಲಸವನ್ನು ಮಾಡಲು 15ರಿಂದ 20 ಟ್ರ್ಯಾಕ್ಟರ್‌ಗಳು ಬೇಕಾಗುತ್ತದೆ. ಜತೆಗೆ 40ಕ್ಕೂ ಹೆಚ್ಚು ಕೂಲಿಕಾರ್ಮಿಕರು ಬೇಕಾಗುತ್ತದೆ. ಇದಕ್ಕೆ ಇಡೀ ದಿನ ವ್ಯಯಮಾಡಬೇಕಾಗುತ್ತದೆ. 1,600 ಲೀ.ನಿಂದ 2 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕರ್‌ ಇದರಲ್ಲಿದೆ. ಅದರಲ್ಲಿ ನೀರು ಅಥವಾ ರಸಗೊಬ್ಬರ ಸಿಂಪರಣೆ ಮಾಡಬಹುದು ಎನ್ನುತ್ತಾರೆ ಜೇಮ್ಸ್‌ ಒಬ್ರಿಯನ್‌. 

ಶೇ. 30ರಷ್ಟು ಇಳುವರಿ ಹೆಚ್ಚು
ಸಾಮಾನ್ಯವಾಗಿ ಟ್ರ್ಯಾಕ್ಟರ್‌ ಅನ್ನು ಜಮೀನಿನಲ್ಲಿ ತೆಗೆದುಕೊಂಡು ಹೋಗುವುದರಿಂದ ಬೆಳೆದುನಿಂತ ಬೆಳೆ ಹಾಳಾಗುವುದು, ಬೆಳೆಗೆ ರೋಗ ತಗುಲಿ ನಷ್ಟವಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆದರೆ, ಏರ್‌ ಟ್ರ್ಯಾಕ್ಟರ್‌ ಜಮೀನಿ ಮೇಲಿನಿಂದ ಕೃಷಿ ಚಟುವಟಿಕೆ ನಡೆಸುವುದರಿಂದ ಶೇ. 30ರಷ್ಟು ಇಳುವರಿ ಹೆಚ್ಚು ಬರಲಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ. 

Advertisement

ಆಸ್ಟ್ರೇಲಿಯದಲ್ಲಿ 200 ಏರ್‌ ಟ್ರ್ಯಾಕ್ಟರ್‌ಗಳನ್ನು ಕೃಷಿ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಒಂದು ಏರ್‌ ಟ್ರ್ಯಾಕ್ಟರ್‌ ಬೆಲೆ  4,00,000 ಅಮೆರಿಕ ಡಾಲರ್‌(2,67,57,302 ರೂ.) ಶುರುವಾಗುತ್ತದೆ.  ಅಲ್ಲಿ ಈ ವಿಮಾನದಿಂದ ಹತ್ತಿ, ಗೋಧಿ, ಭತ್ತದ ಬೆಳೆ ಬೆಳೆಯಲಾಗುತ್ತಿದೆ. ಭಾರತದ ಕೃಷಿ ಚಟುವಟಿಕೆಗಳಿಗೂ ಇದನ್ನು ಬಳಸಲು ಅವಕಾಶ ಇದೆ. ಈ ಸಂಬಂಧ ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆದಿದ್ದು, ಪೂರಕ ಸ್ಪಂದನೆಯೂ ದೊರಕಿದೆ ಎಂದು ಅವರು ಹೇಳಿದರು. 

ವಿಮಾನಕ್ಕೆ ಪ್ರತ್ಯೇಕ ಇಂಧನ ಬೇಕಾಗುತ್ತದೆ. ಆದರೆ, ಇದು ಸೇರಿದಂತೆ ಸಬ್ಸಿಡಿ ಮತ್ತಿತರ ಸೌಲಭ್ಯಗಳನ್ನು ಇಲ್ಲಿನ ಸರ್ಕಾರ ಪೂರೈಸಬೇಕಾಗುತ್ತದೆ. ವಿಮಾನ ತರಬೇತುದಾರ ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಕಂಪನಿ ನೀಡುತ್ತದೆ. 

– ವಿಜಯಕುಮಾರ್‌ ಚಂದರಗಿ 

Advertisement

Udayavani is now on Telegram. Click here to join our channel and stay updated with the latest news.

Next