ತಿಪಟೂರು: ಕಬ್ಬಿಣದ ತಡೆಗೋಡೆಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ 5 ಜನರು ಸ್ಥಳದಲ್ಲೇ ಸಾವ ನ್ನಪ್ಪಿದ್ದು 15ಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯಗಳಾಗಿರುವ ಘಟನೆ ಶನಿವಾರ ಸಂಜೆ 6ರ ವೇಳೆ ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ಹತ್ಯಾಳು ಶ್ರೀ ನರಸಿಂಹ ಸ್ವಾಮಿ ಬೆಟ್ಟದಲ್ಲಿ ನಡೆದಿದೆ.
ಮಾರ್ಗಮಧ್ಯೆ ಸಾವು:ಹರಿಸೇವೆಗೆಂದು ಬಂದು ಪೂಜೆ ಮುಗಿಸಿ ಪ್ರಸಾದ ಸೇವಿಸಿದ ನಂತರ ಗ್ರಾಮಕ್ಕೆ ತೆರಳಲು ಮುಂದಾಗುವ ವೇಳೆ ಈ ದುರ್ಘಟನೆ ನಡೆದಿದೆ. ಕಡಿದಾದ ಇಳಿಜಾರು ಇದ್ದಿದ್ದರಿಂದಾಗಿ ನಿಯಂತ್ರಣಕ್ಕೆ ಬಾರದ ಟ್ರ್ಯಾಕ್ಟರ್ ಉರುಳಿ ಬಿದ್ದಿದೆ. ಈ ವೇಳೆ ಟ್ರ್ಯಾಕ್ಟರ್‌ನಿಂದ ಹೊರ ಬಿದ್ದ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದರು. 7 ವರ್ಷದ ಭುವನ್ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ.
ಗಾಯಾಳುಗಳು ಆಸ್ಪತ್ರೆಗೆ:ಸುಮಾರು 15ಕ್ಕೂ ಹೆಚ್ಚು ಭಕ್ತರಿಗೆ ತೀವ್ರಪೆಟ್ಟು ಬಿದ್ದಿದ್ದು ಅವರೆಲ್ಲರನ್ನೂ ಗುಬ್ಬಿ ಹಾಗೂ ತುಮಕೂರು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರ ಹಾಗೂ ಗಾಯಾಳುಗಳ ಕುಟುಂಬ, ಬಂಧು- ಮಿತ್ರರ ರೋಧನ ಮುಗಿಲು ಮುಟ್ಟಿತ್ತು. ದುರ್ಘಟನೆ ಸಂಬಂಧ ಕಿಬ್ಬನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.
Advertisement
ಸಂಕರಮ್ಮ(60), ಶಿವಲಿಂಗಯ್ಯ (50), ನಾಗರಾಜು(45) ಮತ್ತು ಭುವನ(7), ಶಂಕರಪ್ಪ(60) ಮೃತರು. ಚಿಕ್ಕನಾಯಕನಹಳ್ಳಿ ತಾಲೂಕಿನ ಮಾದಾಪುರ ಗ್ರಾಮದ ಅಂದಾಜು 20 ಭಕ್ತರು ಇದ್ದರು.
•ಕಬ್ಬಿಣದ ತಡೆಗೋಡೆಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ ಪಲ್ಟಿ
•ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದು 15ಕ್ಕೂ ಹೆಚ್ಚು ಜನರಿಗೆ ತೀವ್ರ ಗಾಯ
•ಹತ್ಯಾಳು ಶ್ರೀ ನರಸಿಂಹಸ್ವಾಮಿ ಬೆಟ್ಟದಲ್ಲಿ ದುರ್ಘಟನೆ
•ಕಡಿದಾದ ಇಳಿಜಾರು ಇದ್ದಿದ್ದೇ ದುರ್ಘಟನೆ ಕಾರಣ
•ಗಾಯಾಳುಗಳು ಗುಬ್ಬಿ -ತುಮಕೂರು ಆಸ್ಪತ್ರೆಗೆ ದಾಖಲು
•ಗಾಯಾಳುಗಳ ಕುಟುಂಬ ಹಾಗೂ ಬಂಧು-ಮಿತ್ರರ ರೋಧನ ಮುಗಿಲು ಮುಟ್ಟಿತ್ತು. •ದುರ್ಘಟನೆಯ ಸಂಬಂಧ ಕಿಬ್ಬನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರಿಂದ ತನಿಖೆ ಶುರು