Advertisement

ಸ್ಕ್ಯಾನಿಂಗ್‌ ಕೇಂದ್ರಗಳ ಮೇಲಿರಲಿ ನಿಗಾ

12:34 PM Sep 15, 2017 | Team Udayavani |

ಹುಬ್ಬಳ್ಳಿ: ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಅಧಿಕಾರಿಗಳು ತೀವ್ರ ನಿಗಾ ವಹಿಸಬೇಕು. ಕಾಲ ಕಾಲಕ್ಕೆ ಕೇಂದ್ರಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಕಡ್ಡಾಯವಾಗಿ ಪರಿಶೀಲನೆ ಮಾಡಬೇಕು ಎಂದು ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಆರ್‌. ರಮೇಶಕುಮಾರ ಸೂಚಿಸಿದರು. 

Advertisement

ಇಲ್ಲಿನ ಕನ್ನಡ ಭವನದಲ್ಲಿ ಗುರುವಾರ ನಡೆದ ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಯ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಾನೂನು ಪ್ರಕಾರ ಪ್ರಸೂತಿ ವೈದ್ಯರು ಮಾತ್ರ ಸೂಕ್ತ ಕಾರಣ ನೀಡಿ ಸ್ಕ್ಯಾನ್‌ಗೆ ಶಿಫಾರಸು ಮಾಡಬೇಕು. ಆದರೆ, ಬೇಕಾಬಿಟ್ಟಿಯಾಗಿ ಬೇರೆ ವೈದ್ಯರು ಶಿಫಾರಸು ಮಾಡುತ್ತಿರುವುದು ಗಮನಕ್ಕೆ ಬಂದಿದೆ.

ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದರೆ ಅಂತವುಗಳನ್ನು ಅನಿವಾರ್ಯವಾಗಿ ಹೆಣ್ಣು ಭ್ರೂಣ ಪತ್ತೆ ಎಂದು ನಿರ್ಧರಿಸಬೇಕಾಗುತ್ತದೆ. ಯಾರ ಮುಲಾಜಿಗೂ ಒಳಗಾಗದೆ ಕಾನೂನು ಕ್ರಮ ತೆಗೆದುಕೊಳ್ಳಿ. ನಿಮ್ಮಿಂದಾಗದಿದ್ದರೆ ನಮ್ಮ ಗಮನಕ್ಕೆ ತನ್ನಿ. ಯಾವ ಒತ್ತಡಕ್ಕೂ ಮಣಿಯದೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಖಡಕ್‌ ಸಂದೇಶ ನೀಡಿದರು. 

ಹೆಚ್ಚುವರಿ ಭಾರ ಬೇಡ: ತಜ್ಞ ವೈದ್ಯರನ್ನು ವಿನಾಕಾರಣ ಗಾಯಾಳು ವಿಭಾಗದ ಕರ್ತವ್ಯಕ್ಕೆ ನೇಮಿಸಬೇಡಿ. ಎರಡು ವಿಭಾಗಳಲ್ಲಿ ಕೆಲಸ ಮಾಡುವುದರಿಂದ ಮೂಲ ಉದ್ದೇಶ ಈಡೇರುವುದಿಲ್ಲ. ಗಾಯಾಳು ವಿಭಾಗಕ್ಕೆ ಎಂಬಿಬಿಎಸ್‌ ವೈದ್ಯರನ್ನು ನಿಯೋಜಿಸಿ ತಜ್ಞ ವೈದ್ಯರ ಮೇಲಿರುವ ಕೆಲಸ ಭಾರ ಕಡಿಮೆ ಮಾಡುವತ್ತ ಗಮನ ಹರಿಸಬೇಕು. ಇದನ್ನು ಎಲ್ಲಾ ಜಿಲ್ಲಾಸ್ಪತ್ರೆಗಳ ಮುಖ್ಯಸ್ಥರು ಹಾಗೂ ಡಿಎಚ್‌ಒಗಳು ಅನುಸರಿಸಬೇಕು ಎಂದರು.

ಡಿ ಗ್ರೂಪ್‌ ನೌಕರರನ್ನು ನೇಮಿಸಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಡಿ ಗ್ರೂಪ್‌ ನೌಕರರ ಕೊರತೆ ಹೆಚ್ಚಿದೆ. ಡಿ ಗ್ರೂಪ್‌ ನೌಕರರ ನೇಮಿಸುವ ಪ್ರಕ್ರಿಯೆ ಆದಷ್ಟು ಬೇಗ ಮುಗಿಯಬೇಕು. ಡಿ ಗ್ರೂಪ್‌ ನೌಕರರು ಇಲ್ಲದಿದ್ದರೆ ವೈದ್ಯರೇ ಎಲ್ಲಾ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಆಸ್ಪತ್ರೆಗಳ ಕಾರ್ಯ ಸುಲಲಿತವಾಗಿ ನಡೆಯಲು ಡಿ ಗ್ರೂಪ್‌ ನೌಕರರ ನೇಮಕ ಮಾಡುತ್ತಿದ್ದೇವೆಯೇ ಹೊರತು ಬೇಕಾದವರಿಗೆ ಹೊರಗುತ್ತಿಗೆ ನೀಡಲು ಅಲ್ಲ ಎಂದರು. 

Advertisement

ಕಮೋಡ್‌ ಕಡ್ಡಾಯ: ಆಸ್ಪತ್ರೆಗಳ ಶೌಚಾಲಯದಲ್ಲಿ ಕಮೋಡ್‌ ಅಳವಡಿಕೆ ಕಡ್ಡಾಯ. ಬಹುತೇಕ ಆಸ್ಪತ್ರೆಗಳಲ್ಲಿ ಕಮೋಡ್‌ಗಳು ಇಲ್ಲದ್ದರಿಂದ ರೋಗಿಗಳು ಪರಿತಪಡಿಸುವಂತಾಗಿದೆ. ಟಿಎಚ್‌ಒ ಹಾಗೂ ಡಿಎಚ್‌ಒಗಳು ತಮ್ಮ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಕಮೋಡುಗಳನ್ನು ಅಳವಡಿಸಲು ಕ್ರಮಕೈಗೊಳ್ಳಬೇಕು.

ಖುದ್ದಾಗಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡಿ ಎಂದು ಸೂಚಿಸಿದರು. ನಮ್ಮ ಸರಕಾರಿ ಆಸ್ಪತ್ರೆಗಳು ದೇವಾಲಯಗಳು ಆಗಬೇಕು. ಸರಕಾರ ನೀಡಿರುವ ಯೋಜನೆಗಳನ್ನು ಜನರಿಗೆ ಮುಟ್ಟಿಸಿ, ಮತ್ತಷ್ಟು ಸೌಲಭ್ಯಗಳು ಬೇಕಾದರೆ ನಮ್ಮನ್ನು ಜಾಗೃತಗೊಳಿಸಿ ಎಂದರು. ಜನೌಷಧಿ ಕೇಂದ್ರಗಳಲ್ಲಿ ಸೂಚಿಸಿದ ಔಷಧ ಮಾತ್ರ ಇರಬೇಕು.

ಪ್ರತಿಷ್ಠಿತ ಕಂಪನಿಗಳ ಔಷಧಕ್ಕೆ ಅವಕಾಶ ನೀಡಬಾರದು. ಅಧಿಕಾರಿಗಳು ಆಗಾಗ ಭೇಟಿ ನೀಡಿ ಪರಿಶೀಲನೆ ಮಾಡುತ್ತಿರಬೇಕು. ಸರಕಾರಿ ಆಸ್ಪತ್ರೆಗಳಿಗೆ ಬೇಕಾದ ಔಷಧಿಗಳನ್ನು ಪೂರೈಕೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಚೀಟಿ ಬರೆದುಕೊಡುವ ಸಂಪ್ರದಾಯ ಮುಂದುವರಿಯಬಾರದು. ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ ಕ್ಯಾಂಟೀನ್‌ ಶುರುವಾಗಬೇಕು ಎಂದು ಹೇಳಿದರು.  

ದಂತ ಶಿಬಿರ ಕೈಗೊಳ್ಳಿ: ಇಲಾಖೆ ನಿರ್ದೇಶಕ ಡಾ| ರತನ್‌ ತೇಲ್ಕರ್‌ ಮಾತನಾಡಿ, ಸರಕಾರಿ ಆಸ್ಪತ್ರೆಗಳಲ್ಲಿ ದಂತ ಚಿಕಿತ್ಸೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರಗಳನ್ನು ಆಯೋಜಿಸಬೇಕು. ಕೆಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಅಧಿಕಾರಿಗಳು ಸ್ವತಂತ್ರರು. ಜಟಿಲ ಸಮಸ್ಯೆಗಳಿದ್ದರೆ ನಮ್ಮ ಗಮನಕ್ಕೆ ತರಬೇಕು.

ಪ್ರತಿ ತಿಂಗಳು ಪ್ರಗತಿ ಬಗ್ಗೆ ನಿಗದಿತ  ನಮೂನೆಯಲ್ಲಿ ಸರಕಾರಕ್ಕೆ ವರದಿ ನೀಡಬೇಕು ಎಂದು ಸೂಚಿಸಿದರು. ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಜಿಲ್ಲಾಸ್ಪತ್ರೆ ಶಸ್ತ್ರ ಚಿಕಿತ್ಸಕ ತಜ್ಞರು ಸಭೆಯಲ್ಲಿ ವರದಿ ಮಂಡಿಸಿದರು. ಹಾವೇರಿ ಜಿಲ್ಲಾಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು, ತಜ್ಞವೈದ್ಯರು ಹಾಗೂ ಸಿಬ್ಬಂದಿ ಕೊರೆತೆಯಿರುವುದು ಕಂಡು ಬಂತು.

ಮುಖ್ಯ ವೈದ್ಯಾಧಿಕಾರಿ ನೇಮಕ ಮಾಡುವ ಕುರಿತು ಮೂರು ಜಿಲ್ಲೆಯ ಅಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿದರು. ಹಾವೇರಿ ಜಿಲ್ಲೆಗೆ ಸಂಬಂಧಿಸಿದಂತೆ 30 ಆಯುಷ್‌ ವೈದ್ಯರ ನೇಮಕಾತಿಗೆ ತಡೆ ನೀಡಿರುವುದನ್ನು ತೆರವುಗೊಳಿಸುವಂತೆ ಅಧಿಕಾರಿಗಳು ಮನವಿ ಮಾಡಿದರು. ಎನ್‌ಎಚ್‌ಎಂ ನಿರ್ದೇಶಕ ಡಾ| ನಟರಾಜ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next