Advertisement

ಮಿನುಗಾರಿಕಾ ಬೋಟ್‌ಗಳಿಗೆ ಇನ್ನು ಟ್ರ್ಯಾಕರ್‌

10:06 AM Dec 20, 2019 | mahesh |

ಉಡುಪಿ: ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ದೋಣಿಗಳ ಸುರಕ್ಷೆಗಾಗಿ ಉಪಗ್ರಹ ಆಧಾರಿತ ಟ್ರ್ಯಾಕರ್‌ ಆಳವಡಿಸುವಂತೆ ಕೇಂದ್ರ ಸರಕಾರ ಶಿಫಾರಸು ಮಾಡಿದ್ದು, ಜಿಲ್ಲಾ ಮೀನುಗಾರಿಕಾ ಇಲಾಖೆ ಮಲ್ಪೆ ಬಂದರಿನ ಬೋಟ್‌ಗಳಿಗೆ ಅಳವಡಿಸಲು ಚಿಂತನೆ ನಡೆಸಿದೆ.

Advertisement

ದೇಶವನ್ನೇ ಬೆಚ್ಚಿ ಬೀಳಿಸಿದ್ದ ಸುವರ್ಣ ತ್ರಿಭುಜ ದೋಣಿ ಮತ್ತು ಅದರಲ್ಲಿದ್ದ 7 ಮಂದಿ ಮೀನುಗಾರರ ನಾಪತ್ತೆ ಪ್ರಕರಣ ಕರಾವಳಿಯ ಮೀನುಗಾರರಲ್ಲಿ ಭಯ ಹುಟ್ಟಿಸಿತ್ತು. ಹಲವು ತಿಂಗಳ ಬಳಿಕ ಪ್ರಕರಣದ ಸುಳಿವು ದೊರಕಿದ್ದು ತಾರ್ಕಿಕ ಅಂತ್ಯ ಇನ್ನೂ ಸಿಕ್ಕಿಲ್ಲ. ಇಂತಹ ಸಂದರ್ಭಗಳಲ್ಲಿ ತ್ವರಿತ ಮಾಹಿತಿ ಹಾಗೂ ಮೀನುಗಾರರ ಸುರಕ್ಷೆ ಕುರಿತು ಮಾಹಿತಿ ಪಡೆಯಲು ಟ್ರ್ಯಾಕರ್‌ ಉಪಕಾರಿಯಾಗಿದೆ.

ಗಡಿ ಸಮಸ್ಯೆ ಪರಿಹಾರ
ಮಲ್ಪೆಯಿಂದ ತೆರಳಿದ ಆಳ ಸಮುದ್ರದ ಮೀನುಗಾರರ ಮೇಲೆ ಮಹಾರಾಷ್ಟ್ರದ ಮಾಲ್ವಣ್‌ ಗಡಿಯಲ್ಲಿ ಹಲ್ಲೆಗಳು ನಡೆಯುತ್ತಿರುವ ಕುರಿತು ಆಗಾಗ್ಗೆ ಮೌಖೀಕವಾಗಿ ದೂರುಗಳು ಬರುತ್ತಿವೆ. ಈ ಬಗ್ಗೆ ಜಿಲ್ಲಾ ಮೀನುಗಾರಿಕಾ ಇಲಾಖೆ ಮಹಾರಾಷ್ಟ್ರ ಸರಕಾರವನ್ನು ಪ್ರಶ್ನಿಸಿದಾಗ,
ಮಲ್ಪೆ ಮೀನುಗಾರರು ಅತಿಕ್ರಮವಾಗಿ ಗಡಿ ಪ್ರವೇಶಿಸುತ್ತಿರುವುದಾಗಿ ಉತ್ತರ ದೊರಕುತ್ತಿದೆ. ಟ್ರ್ಯಾಕರ್‌ ಅಳವಡಿಸುವುದರಿಂದ ಗಡಿ ಸಮಸ್ಯೆಯೂ ಪರಿಹಾರವಾಗಲಿದೆ ಎನ್ನುವುದು ಇಲಾಖೆ ಅಧಿಕಾರಿಗಳ ಅಭಿಮತ.

ಟ್ರ್ಯಾಕರ್‌ ಕಾರ್ಯವೈಖರಿ
ಟ್ರ್ಯಾಕರ್‌ ಉಪಕರಣವು ಬೋಟ್‌ನ ಚಲನವಲನಗಳ ಮೇಲೆ ನಿಗಾ ವಹಿಸುತ್ತದೆ. ಬೋಟ್‌ನ ಮಾಲಕರಿಗೆ, ಮೀನುಗಾರಿಕಾ ಇಲಾಖೆಗೆ ಸಂಪೂರ್ಣ ಮಾಹಿತಿ ರವಾನೆಯಾಗುತ್ತಿರುತ್ತದೆ. ಅದರಲ್ಲಿ ಬೋಟ್‌ ಕ್ರಮಿಸಿದ ದೂರ, ವೇಗದ ಮಿತಿ ವಿವರ ಸಂದೇಶ ಮೂಲಕ ಪಡೆಯಬಹುದಾಗಿದೆ. ತೊಂದರೆಯ ಸಮಯದಲ್ಲಿ ಟ್ರ್ಯಾಕರ್‌ ಎಚ್ಚರಿಕೆ ನೀಡಲಿದೆ ಎನ್ನುತ್ತಾರೆ ಇಲಾಖಾಧಿಕಾರಿಗಳು.

ಅಲ್ಪ ವೆಚ್ಚ; ಅಧಿಕ ಲಾಭ
ಟ್ರ್ಯಾಕರ್‌ ಬೆಲೆ ಮಾರುಕಟ್ಟೆಯಲ್ಲಿ 10,500 ರೂ. ಇದೆ. ಮಾಸಿಕ 450 ರೂ. ರೀಚಾರ್ಜ್‌ ಮಾಡಬೇಕಾಗುತ್ತದೆ. ಸರಕಾರದಿಂದ ಟ್ರ್ಯಾಕರ್‌ ಖರೀದಿಗೆ ಯಾವುದೇ ಸಬ್ಸಿಡಿ ಇಲ್ಲವಾದರೂ ಬೃಹತ್‌ ಪ್ರಮಾಣದಲ್ಲಿ ಸಾಧನ ಖರೀದಿ ಮಾಡುವಾಗ ಬೆಲೆ ಕಡಿಮೆ ಆಗಲಿದೆ.

Advertisement

ಡಿಜಿಟಲ್‌ ದಾಖಲೆ
ಜಿಲ್ಲಾ ಮೀನುಗಾರಿಕಾ ಇಲಾಖೆಯು ಆಳ ಸಮುದ್ರದ ಮೀನುಗಾರರ ದಾಖಲೆ
ಗಳನ್ನು ಸುರಕ್ಷಿತವಾಗಿಸುವ ದೃಷ್ಟಿಯಿಂದ ಬೋಟ್‌ಗಳಿಗೆ ಕ್ಯೂಆರ್‌ ಕೋಡ್‌ ಅಳವಡಿ
ಸಲು ಚಿಂತನೆ ನಡೆಸುತ್ತಿದೆ. ಮೀನುಗಾರರ ಮಾಹಿತಿ, ಗುರುತು ಚೀಟಿ, ಪರವಾನಿಗೆ ಇತರ ಅಗತ್ಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಕ್ಯೂ ಆರ್‌ ಕೋಡ್‌ ನೀಡಲಾಗುತ್ತದೆ. ಅಧಿಕಾರಿಗಳು ತಪಾಸಣೆ ಸಂದರ್ಭ ಬೋಟ್‌ನಲ್ಲಿರುವ ಈ ಕೋಡ್‌ ಅನ್ನು ಸ್ಕ್ಯಾನ್‌ ಮಾಡಿದರೆ ದಾಖಲೆ ಸಿಗುತ್ತದೆ.

ಆಳ ಸಮುದ್ರದ ಬೋಟ್‌ಗಳಿಗೆ ಉಪಗ್ರಹ ಆಧಾರಿತ ಟ್ರ್ಯಾಕರ್‌ ಅಳವಡಿಸಲು ಕೇಂದ್ರ ಸರಕಾರ ಶಿಫಾರಸು ಮಾಡಿದೆ. ಈ ಸಾಧನವು ಗಡಿ ಮೇಲ್ವಿಚಾರಣೆ ಮಾಡಲು ಅವಕಾಶ ಕಲ್ಪಿಸುತ್ತದೆ.
– ಗಣೇಶ್‌, ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ, ಉಡುಪಿ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next