ಬೆಳಗಾವಿ: ಗೂಗಲ್ ಮ್ಯಾಪ್ ಮೂಲಕ ಮನೆಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಕಳ್ಳರನ್ನು ಬಂಧಿಸಿರುವ ಪೊಲೀಸರು, 28 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.
ಕೊಲ್ಲಾಪುರ ಜಿಲ್ಲೆಯ ಕರವೀರ ತಾಲೂಕಿನ ಇಸ್ಪುರಲಿ ಗ್ರಾಮದ ಪ್ರಶಾಂತ ಕಾಶೀನಾಥ ಕರೋಶಿ ಹಾಗೂ ಆಜರಾ ತಾಲೂಕಿನ
ಧಾಮಣೆ ಗ್ರಾಮದ ಅವಿನಾಶ ಶಿವಾಜಿ ಅಡಾವಕರ ಎಂಬಾತರನ್ನು ಬಂಧಿಸಲಾಗಿದೆ.
28 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಒಂದು ಮಾರುತಿ ಸುಜುಕಿ ಬಲೆನೋ ಕಾರು ವಶಪಡಿಸಿಕೊಳ್ಳುವಲ್ಲಿ ಬೆಳಗಾವಿಯ ಕ್ಯಾಂಪ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಪರಾಧ ವಿಭಾಗ ಡಿಸಿಪಿ ಸಿ.ಆರ್. ನೀಲಗಾರ, ಗೂಗಲ್ ಮ್ಯಾಪ್ ಮೂಲಕ ನಗರದ ಹೊರ ವಲಯದ ಮನೆಗಳಿಗೆ ಮಹಾರಾಷ್ಟ್ರ ಮೂಲದ ಈ ಖದೀಮರು ಸ್ಕೆಚ್ ಹಾಕುತ್ತಿದ್ದರು. ನಂತರ ಖುದ್ದಾಗಿ ಆ ಮನೆಯ ಪ್ರದೇಶಕ್ಕೆ ಬಂದು ಕೀಲಿ ಹಾಕಿದ್ದ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಚಿನ್ನಾಭರಣ, ಹಣ ದೋಚುತ್ತಿದ್ದರು ಎಂದು ತಿಳಿಸಿದರು. ನಗರದ ಲಕ್ಷ್ಮೀಟೇಕ್ ನಕ್ಷತ್ರ ಕಾಲೋನಿಯ ಆಸ್ಟನ್ ಡಿಅಲ್ಮೇಡಾ ಮನೆ ಸೇರಿದಂತೆ ಅನೇಕರ ಮನೆಗಳ ಕಳವು ಮಾಡಿ ಚಿನ್ನಾಭರಣ ದೋಚಿದ್ದರು. ಮೂರು ಮನೆಗಳಲ್ಲಿ ಕಳ್ಳತನ ಮಾಡಿದ್ದ ಈ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಮುನಿರತ್ನ ನನ್ನ ಗಾಡ್‌ಫಾದರ್ ಅಲ್ಲ, ಚಿತ್ರದ ನಿರ್ಮಾಪಕರಷ್ಟೇ: ನಿಖಿಲ್ ಕುಮಾರಸ್ವಾಮಿ
ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ದಾಳಿಯಲ್ಲಿ ಕ್ಯಾಂಪ್ ಠಾಣೆ ಇನ್ಸಪೆಕ್ಟರ್ ಡಿ. ಸಂತೋಷಕುಮಾರ, ಎಎಸ್‌ಐ ಬಿ.ಆರ್. ಡೂಗ್, ಸಿಬ್ಬಂದಿಗಳಾದ ಬಿ.ಬಿ. ಗೌಡರ, ಎ.ಕೆ. ಶಿಂತ್ರೆ, ಎಂ.ಎ. ಪಾಟೀಲ, ಬಿ.ಎಂ. ನರಗುಂದ, ಎಸ್. ಎಚ್. ತಳವಾರ, ಯು.ಎಂ. ಥೈ ಕಾರ, ಎ.ಎಂ. ಪಾಟೀಲ ಭಾಗವಹಿಸಿದ್ದರು.