Advertisement

TPG Passes Away: ಬಿಪಿಎಲ್‌ ಸಮೂಹ ಸಂಸ್ಥೆ ಸ್ಥಾಪಕ ಟಿ.ಪಿ.ಗೋಪಾಲನ್‌ ನಂಬಿಯಾರ್‌ ನಿಧನ

10:18 PM Oct 31, 2024 | Team Udayavani |

ಬೆಂಗಳೂರು: ಎಂಭತ್ತರ ದಶಕದಲ್ಲಿ ದೇಶದಲ್ಲೇ ಮನೆ ಮಾತಾಗಿದ್ದ ಬಿಪಿಎಲ್‌ (BPL) ಸಮೂಹ ಸಂಸ್ಥೆಯ ಸ್ಥಾಪಕ, ದೇಶದ ಖ್ಯಾತ ಕೈಗಾರಿಕೋದ್ಯಮಿ ಟಿ.ಪಿ. ಗೋಪಾಲನ್‌ ನಂಬಿಯಾರ್‌ (94 ವರ್ಷ) ನಿಧನ ಹೊಂದಿದ್ದಾರೆ.

Advertisement

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಗುರುವಾರ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ನಂಬಿಯಾರ್‌ ಅವರು ಕೇಂದ್ರದ ಮಾಜಿ ಸಚಿವ ರಾಜೀವ್‌ ಚಂದ್ರಶೇಖರ್‌ ಮಾವ ಆಗಿದ್ದರು. ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಕೇರಳದ ಪಾಲಕ್ಕಾಡ್‌ನ‌ಲ್ಲಿ ಜನಿಸಿದ ನಂಬಿಯಾರ್‌, 1963ರಲ್ಲಿ ರಕ್ಷಣಾ ಪಡೆಗಳಿಗೆ ಕೆಲವು ಉಪಕರಣಗಳನ್ನು ಉತ್ಪಾದಿಸಲು “ಬ್ರಿಟಿಷ್‌ ಫಿಸಿಕಲ್‌ ಲ್ಯಾಬೊರೇಟರೀಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ (ಬಿಪಿಎಲ್‌) ಸ್ಥಾಪಿದರು. ಈ ಮೂಲಕ ಸ್ವಾತಂತ್ರ್ಯ ನಂತರದ ಭಾರತದ ಎಲೆಕ್ಟ್ರಾನಿಕ್‌ ಉದ್ಯಮದ ಪ್ರವರ್ತಕ ಎಂಬ ಖ್ಯಾತಿ ಗಳಿಸಿದರು.

ಬಿಪಿಎಲ್‌ ಎಲೆಕ್ಟ್ರಾನಿಕ್‌ ಉಪಕರಣಗಳು ಎಪ್ಪತ್ತು ಹಾಗೂ ಎಂಭತ್ತರ ದಶಕದಲ್ಲಿ ಇಡೀ ದೇಶದಲ್ಲಿ ಮನೆ ಮಾತಾಗಿತ್ತು. ಗ್ರಾಹಕ ನೆಚ್ಚಿನ ಹಾಗೂ ವಿಶ್ವಸಾರ್ಹ ಆಯ್ಕೆ ಬಿಪಿಎಲ್‌ ಆಗಿತ್ತು. ಅಮೆರಿಕ, ಇಂಗ್ಲೆಂಡ್‌ ಸೇರಿದಂತೆ ಪ್ರಪಂಚದ ಬೇರೆ ದೇಶಗಳಿಗೂ ನಂಬಿಯಾರ್‌ ಉದ್ಯಮವನ್ನು ವಿಸ್ತರಿಸಿದ್ದರು. ಪತ್ನಿ ತಂಕಮ್‌, ಪುತ್ರ ಅಜಿತ್‌, ಪುತ್ರಿ ಅಂಜು, ಸೊಸೆ ಮೀನಾ, ಅಳಿಯ ರಾಜೀವ್‌ ಚಂದ್ರಶೇಖರ್‌, ಮೊಮ್ಮಕ್ಕಳಾದ ಶ್ರೇಯಾ, ದೇವಿಕಾ, ವೇದ್‌ ಮತ್ತಿತರರನ್ನು ನಂಬಿಯಾರ್‌ ಅಗಲಿದ್ದಾರೆ.

ಪ್ರಧಾನಿ ಮೋದಿ ಸಂತಾಪ
ಭಾರತೀಯ ಎಲೆಕ್ಟ್ರಾನಿಕ್ಸ್ ಕಂಪನಿ ಬಿಪಿಎಲ್ ಗ್ರೂಪ್‌ನ ಅಧ್ಯಕ್ಷ ಟಿಪಿಜಿ ನಂಬಿಯಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಅವರನ್ನು ಆವಿಷ್ಕಾರ ಪ್ರವರ್ತಕ ಮತ್ತು ಕೈಗಾರಿಕೋದ್ಯಮಿ ಎಂದು ಬಣ್ಣಿಸಿರುವ ಮೋದಿ, ಭಾರತವನ್ನು ಆರ್ಥಿಕವಾಗಿ ಬಲಿಷ್ಠ ರಾಷ್ಟ್ರವಾಗಿ ನಿರ್ಮಿಸುವಲ್ಲಿ ನಂಬಿಯಾರ್ ಮಹತ್ವದ ಕೊಡುಗೆ ನೀಡಿರುವುದಾಗಿ ಸ್ಮರಿಸಿದ್ದಾರೆ.

ಟಿಪಿಜಿ ಅಳಿಯ ರಾಜೀವ್‌ ಚಂದ್ರಶೇಖರ್‌ ಕಂಬನಿ: 
ಟಿಪಿಜಿ ಎಂದು ಕರೆಯಲಾಗುತ್ತಿದ್ದ ಟಿ.ಪಿ. ಗೋಪಾಲನ್‌  ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾವ ಕೂಡ ಆಗಿದ್ದಾರೆ. ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜೀವ್ ಚಂದ್ರಶೇಖರ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಮ್ಮ ಮಾವನ ನಿಧನದ ಸುದ್ದಿ ಹಂಚಿಕೊಂಡು. ನನ್ನ ಮಾವ ಟಿಪಿಜಿ ನಂಬಿಯಾರ್ ನಿಜವಾದ ದೂರದೃಷ್ಟಿಯುಳ್ಳವರಾಗಿದ್ದರು ಮತ್ತು ಭಾರತದ ಅತ್ಯಂತ ವಿಶ್ವಾಸಾರ್ಹವಾದ ಗ್ರಾಹಕ ಬ್ರ್ಯಾಂಡ್‌ ವೊಂದನ್ನು ಬೆಳೆಸಿದ್ದರು. ಅದು ಇಂದಿಗೂ ಜನಪ್ರಿಯವಾಗಿದೆ. Believe In The Best. ನನ್ನ ಚುನಾವಣಾ ಪ್ರಚಾರ ಕಾರ್ಯ ಕೈಬಿಟ್ಟು ಕುಟುಂಬದೊಂದಿಗೆ ಇರಲು ಬೆಂಗಳೂರಿಗೆ ಹಿಂತಿರುಗುತ್ತಿದ್ದೇನೆ ಎಂದು ಚಂದ್ರಶೇಖರ್ ಟ್ವೀಟ್ ಮಾಡಿದ್ದರು.

Advertisement

ಎಂಬಿಪಾ ಸಂತಾಪ:
ಕೈಗಾರಿಕೋದ್ಯಮಿ ನಂಬಿಯಾರ್‌ ನಿಧನಕ್ಕೆ ಕಂಬನಿ ಮಿಡಿದಿರುವ ರಾಜ್ಯದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, “ನಂಬಿಯಾರ್‌ ಅವರು ಭಾರತ ಮಾತ್ರವಲ್ಲ, ಕರ್ನಾಟಕದ ಎಲೆಕ್ಟ್ರಾನಿಕ್‌ ಉದ್ಯಮದಲ್ಲಿ ಹೊಸತನ ಪ್ರಾರಂಭಿಸಿದ ಶಕ ಪುರುಷರಾಗಿದ್ದರು. ಅವರಿಂದಾಗಿ ಉದ್ಯಮ ಪ್ರಪಂಚದಲ್ಲಿ ಪರಂಪರೆಯೇ ಸೃಷ್ಟಿಯಾಯಿತು. ಅವರ ನಿಧನದಿಂದ ನಾವು ದೂರದೃಷ್ಟಿಯುಳ್ಳ ಓರ್ವ ಧೀಮಂತ ಉದ್ಯಮಿ ಕಳೆದುಕೊಂಡಿದ್ದೇವೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next