Advertisement

ಪ್ರೇಕ್ಷಕರ ಮುಂದೆ ಮೂಕವಿಸ್ಮಿತ

06:21 PM May 16, 2019 | mahesh |

ಖ್ಯಾತ ಸಾಹಿತಿ ಟಿ.ಪಿ ಕೈಲಾಸಂ ಅವರ “ಟೊಳ್ಳು-ಗಟ್ಟಿ’ ನಾಟಕವನ್ನು ಅನೇಕರು ನೋಡಿರಬಹುದು, ಓದಿರಬಹುದು. ಟಿ.ಪಿ ಕೈಲಾಸಂ ಅವರ ಜನಪ್ರಿಯ ಕೃತಿಗಳಲ್ಲಿ ಒಂದಾಗಿರುವ “ಟೊಳ್ಳು-ಗಟ್ಟಿ’ ನಾಟಕ 60ರ ದಶಕದಲ್ಲಿ ಸಾಕಷ್ಟು ಜನಪ್ರಿಯವಾಗಿತ್ತು. ಈಗ ಇದೇ ನಾಟಕ “ಮೂಕ ವಿಸ್ಮಿತ’ ಎನ್ನುವ ಹೆಸರಿನಲ್ಲಿ ಸಿನಿಮಾ ರೂಪದಲ್ಲಿ ಈ ವಾರ ತೆರೆಗೆ ಬರುತ್ತಿದೆ.

Advertisement

ಅಂದಹಾಗೆ, ಈ “ಟೊಳ್ಳು-ಗಟ್ಟಿ’ ನಾಟಕವನ್ನು ಸಿನಿಮಾ ರೂಪಕ್ಕೆ ತರುವ ಸಾಹಕ್ಕೆ ಕೈ ಹಾಕಿದವರು ನವ ನಿರ್ದೇಶಕ ಗುರುದತ್‌ ಶ್ರೀಕಾಂತ್‌. “ಟೊಳ್ಳು-ಗಟ್ಟಿ’ ನಾಟಕದ ಕಥಾಹಂದರವನ್ನು ಇಟ್ಟುಕೊಂಡು ಅದನ್ನು ಇಂದಿನ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವಂತೆ ತಮ್ಮದೇ ಪರಿಕಲ್ಪನೆಯಲ್ಲಿ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಗುರುದತ್‌ ಶ್ರೀಕಾಂತ್‌.

ಚಿತ್ರದ ಬಿಡುಗಡೆಗೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡ ಚಿತ್ರತಂಡ, “ಮೂಕ ವಿಸ್ಮಿತ’ ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡಿತು.

ಚಿತ್ರದ ಬಗ್ಗೆ ಮೊದಲು ಮಾತಿಗಿಳಿದ ನಿರ್ದೇಶಕ ಗುರುದತ್‌ ಶ್ರೀಕಾಂತ್‌, “ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಈ ಚಿತ್ರವನ್ನು ಮಾಡುವ ಯೋಚನೆ ಬಂದು ಚಿತ್ರವನ್ನು ಪ್ರಾರಂಭಿಸಿದೆವು. ನಂತರ ಒಬ್ಬೊಬ್ಬರಾಗಿ ಚಿತ್ರತಂಡವನ್ನು ಸೇರಿಕೊಂಡರು. ಇಡೀ ಚಿತ್ರತಂಡದ ಸಹಕಾರದಿಂದ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ತಲುಪಿದೆ. ಚಿತ್ರದ ಬಗ್ಗೆ ಈಗಾಗಲೇ ಎಲ್ಲಾ ಕಡೆಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರದ ಬಗ್ಗೆ ನಾವು ಕೂಡ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇವೆ. ಕನ್ನಡದ ಮಟ್ಟಿಗೆ ಇದೊಂದು ಹೊಸಥರದ ಚಿತ್ರವಾಗಲಿದ್ದು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು.

ಬಾಲ್ಯದಿಂದಲೂ ಚಿತ್ರರಂಗದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡಿದ್ದ ಗುರುದತ್‌ ಶ್ರೀಕಾಂತ್‌ ತಮ್ಮ ಪದವಿ ಶಿಕ್ಷಣ ಮುಗಿಯುತ್ತಿದ್ದಂತೆ ಚಿತ್ರರಂಗದತ್ತ ಮುಖ ಮಾಡಿದ ಹುಡುಗ. ಯಾವ ನಿರ್ದೇಶಕರು, ತಂತ್ರಜ್ಞರ ಬಳಿಯೂ ಕೆಲಸ ಮಾಡದ ಇವರು, ತಾನೇ ಸ್ವಪರಿಶ್ರಮದಿಂದ ಸಿನಿಮಾದ ಬಗ್ಗೆ ಒಂದಷ್ಟು ಅಧ್ಯಯನ ಮಾಡಿ ಬಳಿಕ, ಚೊಚ್ಚಲ ಬಾರಿಗೆ ನಿರ್ದೇಶನ ಮಾಡುವ ಸಾಹಸಕ್ಕೆ ಕೈ ಹಾಕಿದ್ದಾರೆ.

Advertisement

ಈ ಬಗ್ಗೆ ಮಾತನಾಡುವ ಗುರುದತ್‌ ಶ್ರೀಕಾಂತ್‌, “ಕನ್ನಡದ ಕೆಲವು ಅನುಭವಿ ನಿರ್ದೇಶಕರು, ತಂತ್ರಜ್ಞರ ಜೊತೆ ಕೆಲಸ ಮಾಡುವ ಆಸೆಯಿದ್ದರೂ, ಅದು ಸಾಧ್ಯವಾಗಲಿಲ್ಲ. ಕೊನೆಗೆ ನಾನೇ ಸಿನಿಮಾದ ಬಗ್ಗೆ ಒಂದಷ್ಟು ಅಧ್ಯಯನ ಮಾಡಿಕೊಂಡು ನಿರ್ದೇಶನ ಮಾಡಲು ಮುಂದಾದೆ. ಸುಮಾರು ಎರಡೂವರೆ ವರ್ಷ ಹಗಲು-ರಾತ್ರಿ ಎನ್ನದೆ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಚಿತ್ರದಲ್ಲಿ ನಾನು ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಟಿ.ಪಿ ಕೈಲಾಸಂ ಅವರ ಶ್ರೇಷ್ಠ ನಾಟಕವನ್ನು ಅಷ್ಟೇ ಶ್ರೇಷ್ಠವಾಗಿ ತೆರೆಮೇಲೆ ತರಲು ಸಾಕಷ್ಟು ಶ್ರಮಿಸಿದ್ದೇವೆ’ ಎಂದರು.

ಇನ್ನು “ಮೂಕ ವಿಸ್ಮಿತ’ ಚಿತ್ರದಲ್ಲಿ ಗುರುದತ್‌ ಶ್ರೀಕಾಂತ್‌ ಅವರೊಂದಿಗೆ ತಾರಾಗಣ ಸಂದೀಪ ಮಲಾನಿ, ವಾಣಿಶ್ರೀ ಭಟ್‌, ಚಂದ್ರಕೀರ್ತಿ, ಮಾವಳ್ಳಿ ಕಾರ್ತಿಕ್‌, ಶೋಭಾ ಮೊದಲಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ಸಾಗರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಈಗಾಗಲೇ ಬಿಡುಗಡೆಯಾಗಿರುವ “ಮೂಕ ವಿಸ್ಮಿತ’ ಚಿತ್ರದ ಟ್ರೇಲರ್‌ಗೆ ಎಲ್ಲಾ ಕಡೆಗಳಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ ಈ ವಾರ ಚಿತ್ರವನ್ನು ರಾಜ್ಯಾದ್ಯಂತ ಬಹುತೇಕ ಮಲ್ಟಿಫ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.

ಇನ್ನು “ಮೂಕ ವಿಸ್ಮಿತ’ ಚಿತ್ರದಲ್ಲಿ ನಟ ಸಂದೀಪ್‌ ಮಲಾನಿ “ಹಿರಿಯಣ್ಣ’ ಎನ್ನುವ ಮಾಧ್ವ ಬ್ರಾಹ್ಮಣನ ಪಾತ್ರದಲ್ಲಿ ಅಭಿನಯಿಸಿದ್ದಾರಂತೆ. ಚಿತ್ರದ ಬಗ್ಗೆ ಮತ್ತು ತಮ್ಮ ಪಾತ್ರದ ಬಗ್ಗೆ ಮಾತನಾಡುವ ಸಂದೀಪ್‌ ಮಲಾನಿ, “ಮೊದಲು ಈ ಟಿ.ಪಿ ಕೈಲಾಸಂ ಅವರ “ಟೊಳ್ಳು-ಗಟ್ಟಿ’ ನಾಟಕವನ್ನು ಓದಲು ನಿರ್ದೇಶಕರು ಕೊಟ್ಟರು. ಅದನ್ನು ಓದಿದ ನಂತರ ಹತ್ತಾರು ಪಾತ್ರಗಳು ಅಲ್ಲಿದ್ದರಿಂದ, ಅದರಲ್ಲಿ ನನ್ನ ಪಾತ್ರ ಯಾವುದು, ನನಗೆ ಯಾವ ಪಾತ್ರ ಸಿಗಬಹುದು ಎಂದು ಯೋಚಿಸುತ್ತಿದೆ. ಕೊನೆಗೆ ಅದರಲ್ಲಿರುವ ಹಿರಿಯಣ್ಣ ಎನ್ನುವ ಪಾತ್ರ ಸಿಕ್ಕಿತು. ಸುಮಾರು 50-55 ವರ್ಷದ ಮಾಧ್ವ ಬ್ರಾಹ್ಮಣ ವ್ಯಕ್ತಿಯ ಪಾತ್ರ ನನ್ನದು. ತುಂಬಾ ಹಠ ಸ್ವಭಾವವಿರುವ, ಮನೆಯಲ್ಲಿ ಎಲ್ಲರನ್ನೂ ಹೆದರಿಸಿಕೊಂಡು ಇರುವಂಥ ಪಾತ್ರ. ಐವತ್ತರ ದಶಕದಲ್ಲಿ ಬರುವಂಥ ಪಾತ್ರ. ಚಿತ್ರದ ಬಹುಭಾಗ ಸಾಗರದಲ್ಲಿ ನಡೆದಿದೆ. ಬೆಳಿಗ್ಗೆ 5 ಗಂಟೆಗೆ ಶೂಟಿಂಗ್‌ ಶುರುವಾಗುತ್ತಿತ್ತು. ಬಹುತೇಕ ಹೊಸ ಹುಡುಗರ ಜೊತೆ ಕೆಲಸ ಮಾಡಿದ್ದು ಒಂದು ಒಳ್ಳೆಯ ಅನುಭವ. ಒಳ್ಳೆಯ ಕಥೆ ಚೆನ್ನಾಗಿ ಚಿತ್ರ ರೂಪದಲ್ಲಿ ಬಂದಿದೆ ಎಂಬ ಭರವಸೆ ಇದೆ. ಚಿತ್ರದಲ್ಲಿ ಕೌಟುಂಬಿಕ ಕಥಾಹಂದರವಿದೆ. ಮೂರು ಆಯಾಮಗಳಲ್ಲಿ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಹೊಸಬರ ಇಂಥ ಪ್ರಯತ್ನಕ್ಕೆ ಎಲ್ಲರಿಂದ ಪ್ರೋತ್ಸಾಹ, ಸಹಕಾರ ಸಿಕ್ಕಿದರೆ ಇನ್ನಷ್ಟು ಇಂತಹ ಚಿತ್ರಗಳು ಬರಬಹುದು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next