Advertisement

ಲೆಕ್ಕಕ್ಕುಂಟು ಆಟಕ್ಕಿಲ್ಲದ ಉದ್ಯಾನವನದ ಆಟಿಕೆಗಳು

11:59 AM Aug 19, 2018 | Team Udayavani |

ಬೆಂಗಳೂರು: ಜಾರುಬಂಡೆಗಳಲ್ಲಿ ಮಕ್ಕಳ ಜಾರುತ್ತಿಲ್ಲ. ತೂಗುಯ್ನಾಲೆಗಳು ಸ್ತಬ್ಧವಾಗಿವೆ. ರಂಗು ರಂಗಿನ ಆಟಿಕೆಗಳು ಮೃದು ಕೈಗಳ ಸ್ಪರ್ಶವಿಲ್ಲದೇ ಸೊರಗಿವೆ. ಪ್ರತಿ ದಿನ ಸಂಜೆ, ವಾರಾಂತ್ಯದ ಇಡೀ ದಿನ ಮಕ್ಕಳ ಕಲರವದಿಂದ ಕಂಗೊಳಿಸುತ್ತಿದ್ದ ನಗರದ ಉದ್ಯಾನಗಳಲ್ಲೀಗ ನೀರವ ಮೌನ ಆವರಿಸಿದೆ. ಕಾರಣ, ಉದ್ಯಾನಗಳಲ್ಲಿನ ಆಟಿಕೆಗಳು ಹಾಳಾಗಿರುವುದು.

Advertisement

ಬಹುತೇಕ ಪಾರ್ಕ್‌ಗಳಲ್ಲಿನ ಆಟಿಕೆಗಳು ಮುರಿದಿವೆ. ಕೆಲವು ಬಳಕೆಗೆ ಬಾರದಂತಿದ್ದರೆ, ಇನ್ನೂ ಕೆಲವು ತುಕ್ಕು ಹಿಡಿದು ಅಪಾಯ ತಂದೊಡ್ಡುವ ಸ್ಥಿತಿಯಲ್ಲಿವೆ. ಚಿಕ್ಕ ಉದ್ಯಾನಗಳಷ್ಟೇ ಅಲ್ಲ, ಪ್ರತಿಷ್ಠಿತ ಬಾಲ ಭವನ, ಮಕ್ಕಳ ಕೂಟ, ರಾಮಾಂಜನೇಯ ಗುಡ್ಡದ ಆವರಣದಲ್ಲಿನ ಆಟಿಕೆಗಳ ಸ್ಥಿತಿ ಕೂಡ ಚಿಂತಾಜನಕ.

ಕೂಟದಿಂದ ಮಕ್ಕಳು ವಿಮುಖ: ಚಾಮರಾಜಪೇಟೆಯ ಮಕ್ಕಳ ಕೂಟದಲ್ಲಿ ಈಚೆಗೆ ಮಕ್ಕಳ ಕೇಕೆ, ನಗು ಕೇಳುತ್ತಿಲ್ಲ, ಪುಟ್ಟ ಕಾಲ್ಗಳ ಓಡಾಟ ಕಾಣುತ್ತಿಲ್ಲ. ಮಕ್ಕಳ ಪ್ರಮುಖ ಆಷರ್ಕಣೆಯಾಗಿದ್ದ ಎಲ್ಲ 8 ಉಯ್ನಾಲೆಗಳೂ ಕೊಂಡಿ ಕಳಚಿ ನೆಲ ಹಿಡಿದಿವೆ. ಇರುವ ಒಂದು ಉಯ್ನಾಲೆಯೇ ಎಲ್ಲ ಮಕ್ಕಳ ಭಾರ ಹೊರಬೇಕಿದೆ. ಜಾರುಬಂಡೆ ಕೂಡ ಅಲ್ಲಲ್ಲಿ ಕಿತ್ತುಬಂದಿದ್ದು, ಬಳಸಲು ಯೋಗ್ಯವಾಗಿಲ್ಲ. ಬಹುಪಾಲು ಆಟಿಕೆಗಳು ಹಾಳಾಗಿರುವ ಕಾರಣ ಉದ್ಯಾನಕ್ಕೆ ಹೋಗಬೇಕಂತ ಅನಿಸುತ್ತಲೇ ಇಲ್ಲ ಎನ್ನುತ್ತಾರೆ ಪುಟಾಣಿಗಳು. ಇಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿಲ್ಲ ಎನ್ನುತ್ತಾರೆ ಪೋಷಕರು.

ಬಾಲಭವನದಲ್ಲಿ ತ್ಯಾಜ್ಯ ರಾಶಿ: ಚಿಣ್ಣರ ನೆಚ್ಚಿನ ತಾಣ ಬಾಲಭವನ, ಕಸದ ರಾಶಿಯಿಂದಾಗಿ ಕಳೆಗುಂದುತ್ತಿದೆ. ನಾಲ್ಕು ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳಿಗೆ ಇಲ್ಲಿ ಸಾಕಷ್ಟು ಆಟಿಕೆಗಳಿವೆ. ಆದರೆ ನಾಲ್ಕು ವರ್ಷದೊಳಗಿನ ಮಕ್ಕಳ ಆಕರ್ಷಣೆಗೆ ಆಟಿಕೆ ಅಳವಡಿಸುವ ಅಗತ್ಯವಿದೆ. ಇಲ್ಲಿದ್ದ ನಾಲ್ಕು ಉಯ್ನಾಲೆಗಳು, ಮಕ್ಕಳನ್ನು ಕೂರಿಸಿ ತಿರುಗಿಸುವ ಆಟಿಕೆ ಹಾಳಾಗಿವೆ. ಮಾದರಿ ಸೇತುವೆ ಹಲಗೆಗಳು ಮುರಿದಿದ್ದು, ಮಕ್ಕಳು ನಡೆಯುವಾಗ ಬೀಳುತ್ತಾರೆ.

ರೈಲು ಹಳಿ ಸುತ್ತಲೆಲ್ಲಾ ಪ್ಲಾಸ್ಟಿಕ್‌ ರಾಶಿ: ಬಾಲಭವನದ ಪುಟಾಣಿ ರೈಲು ಚಿಣ್ಣರಿಗೆ ಅಚ್ಚುಮೆಚ್ಚು. ಈ ರೈಲಿನಲ್ಲಿ ಜಾಲಿ ರೈಡ್‌ ಮಾಡಿಸಲೆಂದೇ ಪೋಷಕರು ಮಕ್ಕಳನ್ನು ಇಲ್ಲಿಗೆ ಕರೆತರುತ್ತಾರೆ. ಆದರೆ ರೈಲು ಹಳಿ ಸುತ್ತ ಬಿದ್ದಿರುವ ಪ್ಲಾಸ್ಟಿಕ್‌ ರಾಶಿ, ಜಾಲಿ ರೈಢ್‌ನ ಉತ್ಸಾಹ ಕುಂದಿಸುತ್ತದೆ. ರೈಲು ಇಂಜಿನ್‌ ಮಾದರಿಯೂ ಕಸಮಯವಾಗಿದೆ. ಬಾಲಭವನದ ತುಂಬಾ ಕಸದ ರಾಶಿ ಇದ್ದು, ಮಕ್ಕಳು ನೆಮ್ಮದಿಯಾಗಿ ಆಟವಾಡುವ ಸ್ಥಿತಿಯಿಲ್ಲ.

Advertisement

ಬ್ರೆಕ್‌ ಡ್ಯಾನ್ಸ್‌, ಡ್ರ್ಯಾಗನ್‌ ಪ್ಲೇ ಸೇರಿದಂತೆ ಇನ್ನಿತರ ಆಟಿಕೆಗಳಲ್ಲಿ ಮಕ್ಕಳೊಂದಿಗೆ ದೊಡ್ಡವರೂ ಆಟವಾಡುತ್ತಿದ್ದು, ಅವೂ ಹಾಳಾಗುತ್ತಿವೆ. ಜಾರುಬಂಡೆ, ಉಯ್ನಾಲೆಗಳೊಂದಿಗೆ ಹೊಸ ಆಟಿಕೆಗಳನ್ನು ಅಳವಡಿಸಬೇಕು. ಈ ಪೀಳಿಗೆಗೆ ತಕ್ಕಂತೆ ಬಾಲಭವನ ಮಾರ್ಪಾಡಾಗಬೇಕು ಎಂಬುದು ಮಕ್ಕಳ ಮನವಿ.

ಪೊಲೀಸೇ ಇಲ್ಲದ ಟ್ರಾಫಿಕ್‌ ಪಾರ್ಕ್‌: ಬಾಲ ಭವನದಲ್ಲಿರುವ ಟ್ರಾಫಿಕ್‌ ಪಾರ್ಕ್‌ ಕೂಡ ಸರಿಯಾದ ನಿರ್ವಹಣೆ ಇಲ್ಲದೆ ಹಾಳಾಗಿದೆ. ಟ್ರಾಫಿಕ್‌ ಪಾರ್ಕ್‌ನಲ್ಲಿ ಕೆಲವೇ ಫ‌ಲಕಗಳನ್ನು ಬಿಟ್ಟರೆ, ಮಕ್ಕಳಿಗೆ ಸಂಚಾರ ನಿಯಮದ ಅರಿವು ಮೂಡಿಸುವ ಯಾವುದೇ ಆಟಿಕೆ ಇಲ್ಲ. ಕನಿಷ್ಠ ಕೆಂಪು, ಹಳದಿ, ಹಸಿರು ದೀಪಗಳು, ಟ್ರಾಫಿಕ್‌ ಪೊಲೀಸ್‌, ಝೀಬ್ರಾ ಕ್ರಾಸ್‌ ರೀತಿಯ ಮಾಹಿತಿ ಸಹ ಇಲ್ಲ. ಅಳವಡಿಸಿರುವ ಕೆಲವು ಬೋರ್ಡ್‌ಗಳು ಮುರಿದು ಬೀಳುವ ಸ್ಥಿತಿಯಲ್ಲಿವೆ. ಟ್ರಾಫಿಕ್‌ ಪಾರ್ಕ್‌ನಲ್ಲಿರುವ ಸಣ್ಣ ಕಲ್ಯಾಣಿಯಲ್ಲೂ ಕಸವೇ ತುಂಬಿದೆ.

ಗುಡ್ಡದ ಉದ್ಯಾನದಲ್ಲೂ ಮುರಿದ ಆಟಿಕೆ: ಬಸವನಗುಡಿಯ ರಾಮಾಂಜನೇಯ ಗುಡ್ಡ ಹಾಗೂ ಕಹಳೆ ಬಂಡೆ ಉದ್ಯಾನವನಗಳಲ್ಲೂ ಮಕ್ಕಳ ಆಟಿಕೆಗಳ ಸ್ಥಿತಿ ಶೋಚನೀಯ. ರಾಮಾಂಜನೇಯ ಗುಡ್ಡದಲ್ಲಿ 10 ವರ್ಷಗಳ ಹಿಂದೆ ಇದ್ದ ಆಟಿಕೆಗಳೇ ಈಗಲೂ ಇವೆ. ಮೂರ್‍ನಾಲ್ಕು ಜಾರುಬಂಡೆಗಳಿದ್ದರೂ ಜಾರಲು ಯೋಗ್ಯವಾಗಿಲ್ಲ. ಹಿಂದೆ ಐದಾರಿದ್ದ ಜೋಕಾಲಿಗಳ ಸಂಖ್ಯೆ ಎರಡಕ್ಕೆ ಸೀಮಿತಗೊಂಡಿದೆ. ಅದರಲ್ಲೂ ಒಂದು ಜೋಕಾಲಿ ಸರಪಳಿ ತುಂಡಾಗುವ ಸ್ಥಿತಿಯಲ್ಲಿದೆ. ಕಹಳೆ ಬಂಡೆಯಲ್ಲೂ ಉಯ್ನಾಲೆಗಳು ಮುರಿದು ಬಿಳುವ ಸ್ಥಿತಿಯಲ್ಲಿವೆ. ಆಟಿಕೆಗಳೂ ಹಳತಾಗಿವೆ.

ಬಾಲಭವನ ಉದ್ಯಾನದಲ್ಲಿ ಮಕ್ಕಳ ಆಟಕ್ಕೆ ಪೂರಕ ವಾತಾವರಣವಿಲ್ಲ. ಮೂರ್‍ನಾಲ್ಕು ವರ್ಷದ ಮಕ್ಕಳು ಆಟವಾಡಲು ಯೋಗ್ಯವಾದ ಆಟಿಕೆಗಳಿಲ್ಲ.
-ಕಲಾ, ಖಾಸಗಿ ಉದ್ಯೋಗಿ

ಮಾರತ್‌ಹಳ್ಳಿ ಸುತ್ತಮುತ್ತ ಮಕ್ಕಳು ಆಟ ಆಡಲು ಯೋಗ್ಯವಾದ ಪಾರ್ಕ್‌ಗಳಿಲ್ಲ. ಹೀಗಾಗಿ ಆಗಾಗ ಬಾಲಭವನಕ್ಕೆ ಬರುತ್ತೇವೆ. ಇಲ್ಲಿ ಒಂದೂ ಆಟಿಕೆ ಸರಿಯಿಲ್ಲ.
-ಉಮಾ, ಗೃಹಿಣಿ

ಬಾಲಭವನದಲ್ಲಿ ಪುಟಾಣಿ ರೈಲು ಸಂಚಾರ ಇಷ್ಟ. ಕೇವಲ ಜಾರುಬಂಡೆ ಹಾಗೂ ಉಯ್ನಾಲೆಯಲ್ಲಿ ಆಟವಾಡಿ ಬೇಸರವಾಗಿದೆ. ಹೊಸ ಆಟಿಕೆಗಳನ್ನು ಅಳವಡಿಸಬೇಕು.
-ಸಾಧನಾ, ವಿದ್ಯಾರ್ಥಿನಿ

ಮಕ್ಕಳಕೂಟ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ತೆರೆದಿರಬೇಕು. ಜೋಕಾಲಿಗಳನ್ನು ಬೇಗ ಸರಿಪಡಿಸಿಬೇಕು. ಫ್ಯಾಂಟಸಿ ಪಾರ್ಕ್‌ ಮಾದರಿ ಆಟಿಕೆ ಅಳವಡಿಸಬೇಕು.
-ಮೊಹಮ್ಮದ್‌ ದಿಲ್‌ಷಾ, ವಿದ್ಯಾರ್ಥಿ

* ಶ್ರುತಿ ಮಲೆನಾಡತಿ 

Advertisement

Udayavani is now on Telegram. Click here to join our channel and stay updated with the latest news.

Next