Advertisement

ದೇಶದಲ್ಲಿ ವಿಷಕಾರಿ ಸಂಸ್ಕೃತಿ ಬಿತ್ತನೆ

11:33 AM Mar 05, 2018 | |

ಕಲಬುರಗಿ: ದೇಶದಲ್ಲಿ ಈಗ ವಿಛಿದ್ರಕಾರಿ ಮತ್ತು ವಿಷಕಾರಿ ಶಕ್ತಿಗಳು ಅಪಾಯಕಾರಿ ಸಂಸ್ಕೃತಿ ಬಿತ್ತುತ್ತಿವೆ. ಆದ್ದರಿಂದ ದೇಶ ಭವಿಷ್ಯದಲ್ಲಿ ನಿತ್ಯಾತ್ಮಕ ದಿಸೆಯಲ್ಲಿ ಸಾಗಲು ನಾವು ಸಮನ್ವಯ ಸಂಸ್ಕೃತಿ ಕಾಪಾಡಿ ಹರಡಬೇಕಿದೆ ಎಂದು ಖ್ಯಾತ ನಾಟಕಕಾರ ಡಾ| ಎಚ್‌.ಎಸ್‌.ಶಿವಪ್ರಕಾಶ ಕಳವಳ ವ್ಯಕ್ತಪಡಿಸಿದರು.

Advertisement

ಸೇಡಂ ತಾಲೂಕು ಮಳಖೇಡದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೊಗದಲ್ಲಿ ಹಮ್ಮಿಕೊಳ್ಳಲಾಗಿರುವ ಮೊಟ್ಟ ಮೊದಲ ರಾಷ್ಟ್ರಕೂಟ ಉತ್ಸವ 2018ಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ| ಚಂದ್ರಶೇಖರ ಕಂಬಾರ ಅವರ ಅನುಪಸ್ಥಿತಿಯಲ್ಲಿ ರವಿವಾರ ಚಾಲನೆ ನೀಡಿ ಅವರು ಮಾತನಾಡಿದರು. 

1200 ವರ್ಷಗಳ ಹಿಂದೆ ಮಳಖೇಡ(ಮಾನ್ಯಖೇಟ)ದಲ್ಲಿ ಜೀನಸೇನ ಮತ್ತು ಗುಣಭದ್ರಚಾರ್ಯ ಅವರಂತಹ ಸಾಂಸ್ಕೃತಿಕ ರಾಯಭಾರಿಗಳನ್ನು ಹೊಂದಿದ್ದ ರಾಷ್ಟ್ರಕೂಟರ ಗತವೈಭವ ದಕ್ಷಿಣವಷ್ಟೇ ಅಲ್ಲ, ಉತ್ತರಕ್ಕೂ ತನ್ನ ಶ್ರೀಮಂತ ಇತಿಹಾಸದಿಂದ ಹೆಸರುವಾಸಿಯಾಗಿತ್ತು. 

ಅದೊಂದು ಸಮನ್ವಯ ಸಂಸ್ಕೃತಿ ರಾಜ್ಯವಾಗಿತ್ತು. ಏಕಾಂತದಿಂದ ಅನೇಕಾಂತದ ಕಡೆಗೆ ಹೊರಟಿದ್ದ ರಾಜ್ಯವಾಗಿತ್ತು. ಶ್ರೀವಿಜಯ ಬರೆದ ಕವಿರಾಜಮಾರ್ಗ ಇವತ್ತಿಗೂ ಕನ್ನಡದ ಮೊಟ್ಟಮೊದಲ ಲಾಕ್ಷಣಿಕ ಗ್ರಂಥ ನಮ್ಮ ಹೆಮ್ಮಯಾಗಿದೆ ಎಂದು ಹೇಳಿದರು. 

ರಾಷ್ಟ್ರದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣ ಮಾಡಬೇಕು. ಉತ್ಸವಗಳು ಇತಿಹಾಸದ ಕಡೆಗೆ ವಾಲುವುದರಿಂದ ರಾಷ್ಟ್ರದ ಉನ್ನತಿಗೆ ಕಾರಣವಾಗಲಿವೆ. ರಾಷ್ಟ್ರಕೂಟರ ಇತಿಹಾಸವನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕರ್ನಾಟಕ ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಅವರ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.

Advertisement

ರಾಷ್ಟ್ರಕೂಟರ ಮಾನ್ಯಖೇಟವೂ ಸಾಹಿತ್ಯ ಜಾಗೃತಿ ಕೇಂದ್ರವೂ ಆಗಿದೆ. ಇಲ್ಲಿ ಜೈನ ಸಾಹಿತ್ಯ ಸೃಷ್ಟಿಸಿದ್ದರಿಂದ ಜೈನ ಧರ್ಮದ ಪ್ರಭಾವ ನೆಲೆ ಊರಿದೆ. ದಕ್ಷಿಣ ಏಶಿಯಾದಲ್ಲಿ ಜನ ಮನ್ನಣೆ ಪಡೆದಿರುವ ನೃಪತುಂಗ ನಾಡು ವಿಶ್ವವಿಖ್ಯಾತಿ ಗಳಿಸಿದೆ ಎಂದು ವ್ಯಾಖ್ಯಾನಿಸಿದರು.

ಈಗಿರುವ ಮಳಖೇಡ ಕೋಟೆ ದುಸ್ಥಿತಿ ಕಂಡಿರುವುದರಿಂದ ಜೀರ್ಣೋದ್ಧಾರ ಕಾರ್ಯ ಅಗತ್ಯವಾಗಿದೆ. ಸರಕಾರ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣವಾಗಿ ನಿರ್ಮಾಣ ಮಾಡಿದ್ದಲ್ಲಿ ಸರಕಾರಕ್ಕೂ ಆದಾಯ ಬರಲಿದೆ ಎಂದು ಹೇಳಿದರು.

ಸೇಡಂ ಕೊತ್ತಲ ಬಸವೇಶ್ವರ ದೇವಾಲಯ ಸದಾಶಿವ ಮಹಾಸ್ವಾಮಿಗಳು, ಮಳಖೇಡ ದರ್ಗಾದ ಹಜರತ್‌ ಸೈಯ್ಯದ್‌ ಶಹಾ ಮುಸ್ತಫಾ ಖಾದ್ರಿ ಸಾನ್ನಿಧ್ಯ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ, ಕಲಬುರಗಿ ಮಹಾನಗರ ಪಾಲಿಕೆ ಮಹಾಪೌರ ಶರಣು ಮೋದಿ, ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ, ಕಾಡಾ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿಲ್ಲಾಧಿಕಾರಿ ಆರ್‌. ವೆಂಕಟೇಶ ಕುಮಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎನ್‌.ಆರ್‌. ವಿಶುಕುಮಾರ, ಮಳಖೇಡ ಜಿಪಂ ಸದಸ್ಯೆ ದೇವಮ್ಮ ಕರೆಪ್ಪ ಪಿಲ್ಲಿ, ಸೇಡಂ ತಾಪಂ ಅಧ್ಯಕ್ಷೆ ಸುರೇಖಾ ರಾಜಶೇಖರ ಪುರಾಣಿಕ, ಮಳಖೇಡ ಗ್ರಾಪಂ ಅಧ್ಯಕ್ಷ ನಾಗರಾಜ ನಂದೂರ ಇದ್ದರು.

ಆರಂಭದಲ್ಲಿ ಮಹೇಶ ಬಡಿಗೇರ ತಂಡದವರಿಂದ ನಾಡಗೀತೆ ಪ್ರಸ್ತುತಪಡಿಸಲಾಯಿತು. ಆಕಾಂಕ್ಷಾ ಪ್ರಮೋದ ಪುರಾಣಿಕ ಅವರಿಂದ ಭರತನಾಟ್ಯ ನಡೆಯಿತು. ಹೆಚ್ಚುವರಿ ಜಿಲ್ಲಾ ಕಾರಿ ಭೀಮಾಶಂಕರ ತೆಗ್ಗೆಳ್ಳಿ ಸ್ವಾಗತಿಸಿದರು. ಉಪನ್ಯಾಸಕ ಡಾ| ಶಶಿಶೇಖರರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉತ್ಸವ ಸಂಚಾಲಕ ಮಹಿಪಾಲರಡ್ಡಿ ಮುನ್ನೂರ ಮತ್ತು ಶಿಲ್ಪಾ ಬಿರಾದಾರ ನಿರೂಪಿಸಿದರು. ದೊಡ್ಡಬಸವರಾಜ ವಂದಿಸಿದರು.

ಮಕ್ಕಳಿಗಾಗಿ ರಾಷ್ಟ್ರಕೂಟ ಉತ್ಸವ
 ಕಲಬುರಗಿ: ರಾಷ್ಟ್ರಕೂಟ ಉತ್ಸವವನ್ನು ಯಾರಿಗೋ ಖುಷಿ ಮಾಡಲು, ಇನ್ಯಾರಿಗೋ ವೈಭವೀಕರಿಸಲು ಮಾಡುತ್ತಿಲ್ಲ. ನಮ್ಮ ಇತಿಹಾಸದ ವಾರಸುದಾರರಾದ ಮುಂದಿನ ಪೀಳಿಗೆಗೆ ಹಾಗೂ ಈ ನೆಲದ ಮಕ್ಕಳಿಗೆ ರಾಷ್ಟ್ರಕೂಟದ ಗತವೈಭವ ತಿಳಿಹೇಳುವ ನಿಟ್ಟಿನಲ್ಲಿ ಉತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉತ್ಸವದ ರೂವಾರಿ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

ಸೇಡಂ ತಾಲೂಕು ಮಳಖೇಡದಲ್ಲಿ ಆಯೋಜಿಸಲಾಗಿರುವ ರಾಷ್ಟ್ರಕೂಟ ಉತ್ಸವ 2018ರ ಅಂಗವಾಗಿ ಕವಿರಾಜ ಮಾರ್ಗ ಲಾಕ್ಷಣೀಕ ಗ್ರಂಥ ಪ್ರತಿರೂಪ ಹಾಗೂ ಮಂಟಪ ಉದ್ಘಾಟಿಸಿ ಹಾಗೂ ಉತ್ಸವ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ರಾಷ್ಟ್ರಕೂಟದ ಸಂಸ್ಕೃತಿ, ಭಾಷೆ ಪ್ರೀತಿ ಮತ್ತು ಸಂಸ್ಕೃತವನ್ನು ಕನ್ನಡದ ಚೌಕಟ್ಟಿಗೆ ತಂದು ಜನಪ್ರಿಯಗೊಳಿಸಿದ ರಾಜ್ಯಮನೆತನದ ಕಕ್ಕುಲಾತಿ, ಕಾಳಜಿಯನ್ನು ಜನರಿಗೆ ಪುನಃ ಕಟ್ಟಿಕೊಡುವ ನಿಟ್ಟಿನಲ್ಲಿ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

ರಾಜ್ಯದಲ್ಲಿ ನಡೆಯುವ ವಿವಿಧ ಉತ್ಸವಗಳಂತೆ ರಾಷ್ಟ್ರಕೂಟ ಉತ್ಸವ ತನ್ನ ಐತಿಹಾಸಿಕ ಹಿನ್ನೆಲೆಯಿಂದ ಮಹತ್ವ ಪಡೆದುಕೊಳ್ಳಲಿದೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನ್ನಡ ಪ್ರೀತಿಗೆ ದ್ಯೋತಕವಾಗಿದೆ. ಪ್ರವಾಸೋದ್ಯಮ ಕಾತೆ ಸಚಿವ ಪ್ರಿಯಾಂಕ ಖರ್ಗೆ ಅವರು ಕಾಳಜಿಯಿಂದಾಗಿ ಪ್ರವಾಸೋದ್ಯಮ ಇಲಾಖೆಯಿಂದ ಇಡೀ ಮಳಖೇಡ ಜೀರ್ಣೋದ್ಧಾರ ಮಾಡಲು 6 ಕೋಟಿ ರೂ. ವ್ಯಯ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next