Advertisement

ಅನಧಿಕೃತ ಕಟ್ಟಡ ಮಾಲಕರಿಗೆ ಪಟ್ಟಣ ಪಂಚಾಯತ್ ನೋಟಿಸ್‌

10:38 PM Mar 05, 2021 | Team Udayavani |

ಬೈಂದೂರು: ನೂತನ ತಾಲೂಕು ಕೇಂದ್ರವಾದ ಬೈಂದೂರಿನ ಹೃದಯ ಭಾಗದಲ್ಲಿ ಹಾಗೂ ಹೆದ್ದಾರಿ ಇಕ್ಕೆಲಗಳಲ್ಲಿ ನಿಯಮ ಬಾಹಿರವಾಗಿ ನಿರ್ಮಿಸುತ್ತಿರುವ ಕಟ್ಟಡ ಮಾಲಕರಿಗೆ ಪಟ್ಟಣ ಪಂಚಾಯತ್‌ ನೋಟಿಸ್‌ ಜಾರಿ ಮಾಡಿದೆ.

Advertisement

ಮಾತ್ರವಲ್ಲದೆ ಇಲ್ಲಿ ನಿರ್ಮಾಣ ವಾಗುತ್ತಿರುವ ಬಹುಮಹಡಿ ಕಟ್ಟಡದ ಅನುಮತಿಯನ್ನು ತಾತ್ಕಾಲಿಕವಾಗಿ ಹಿಂಪಡೆಯುವ ಮೂಲಕ ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿರುವವರಿಗೆ ಬಿಸಿ ಮುಟ್ಟಿಸಿದೆ.

ಕೋರ್ಟ್‌ ಮೆಟ್ಟಿಲೇರಿದ ಪ್ರಕರಣ
ಸ.ನಂ 108/15ರಲ್ಲಿ ವಾಣಿಜ್ಯ ಉದ್ದೇಶದ ಕಟ್ಟಡವೊಂದು ಕೇವಲ 887.83 ಚ.ಮೀ. ವಿಸ್ತೀರ್ಣ ರಚನೆಗೆ ಅನುಮತಿ ಪಡೆದಿತ್ತು ಆದರೆ ಅಲ್ಲಿ 1,638.20 ಚ.ಮೀ. ವಿಸ್ತೀರ್ಣದ ಕಟ್ಟಡ ನಿರ್ಮಾಣವಾಗುತ್ತಿರುವುದು ಅಧಿಕಾರಿಗಳ ಪರಿಶೀಲನೆಯಲ್ಲಿ ಕಂಡು ಬಂದಿದೆ. ಜತೆಗೆ ಎರಡರ ಬದಲು ಮೂರು ಮಹಡಿ ನಿರ್ಮಿಸಲಾಗುತ್ತಿದೆ. ಹೆದ್ದಾರಿಯಿಂದ 30 ಮೀ. ಅಂತರ ಇಡಲಾಗಿದೆ.

ಸೆಟ್‌ಬ್ಯಾಕ್‌ ಹಾಗೂ ಇತರ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಹೀಗಾಗಿ ಈ ವಾಣಿಜ್ಯ ಸಂಕೀರ್ಣದ ಪರವಾನಿಗೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಈ ಬಗ್ಗೆ ಕಟ್ಟಡ ಮಾಲಕರು ಕೋರ್ಟ್‌ ತಡೆಯಾಜ್ಞೆ ತಂದಿದ್ದು, ಎ.14ರಂದು ಇದರ ವಿಚಾರಣೆ ನಿಗದಿಯಾಗಿದೆ.

ಸಾರ್ವಜನಿಕರ ಅನುಕೂಲ ದೃಷ್ಟಿ ಯಿಂದ ಶೀಘ್ರ ವಿಚಾರಣೆಗೆ ಅಧಿಕಾರಿಗಳು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Advertisement

ನಿಯಮ ಪಾಲಿಸಿಲ್ಲ
ಹೆದ್ದಾರಿ ಇಕ್ಕೆಲಗಳಲ್ಲಿ ಬಹುತೇಕ ಕಟ್ಟಡಗಳು ನಿಯಮಗಳನ್ನು ಪಾಲಿಸಿಲ್ಲ. ಮಾತ್ರವಲ್ಲದೆ ತಹಶೀಲ್ದಾರರ ಕಚೇರಿ ಸಮೀಪ ನಿಯಮ ಬಾಹಿರವಾಗಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ರಥಬೀದಿ ಇತ್ಯರ್ಥಕ್ಕೆ ಜಂಟಿ ಕಾರ್ಯಾಚರಣೆ
ಬೈಂದೂರಿನ ಪ್ರಮುಖ ಸಂಪರ್ಕ ರಸ್ತೆಯಾದ ರಥಬೀದಿಯ ಲ್ಲಿರುವ ವ್ಯಾಪಾರಿಗಳು, ಅನಧಿಕೃತ ಪಾರ್ಕಿಂಗ್‌ ಮತ್ತು ರಸ್ತೆ ಅತಿಕ್ರಮಣದಿಂದ ನಿತ್ಯ ಸಮಸ್ಯೆಯಾಗುತ್ತಿದೆ. ರಥಬೀದಿಯ ವ್ಯವಸ್ಥೆಯನ್ನು ಸರಿಪಡಿಸಲು ಕಂದಾಯ, ಪಟ್ಟಣ ಪಂಚಾಯತ್‌ ಹಾಗೂ ಆರಕ್ಷಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುದಿನ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು
ಭವಿಷ್ಯದ ಬೈಂದೂರು ರೂಪಿಸುವ ನಿಟ್ಟಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕಟ್ಟಡಗಳನ್ನು ನಿರ್ಮಿಸುತ್ತಿರುವ ಬಗ್ಗೆ ಉದಯವಾಣಿ ಬೆಳಕು ಚೆಲ್ಲಿತ್ತು. ಇಲ್ಲಿನ ರಸ್ತೆಗಳಲ್ಲಿ ಸುಗಮ ಸಂಚಾರ ಕಷ್ಟಕರವಾಗಿತ್ತು. ಕಟ್ಟಡ ನಿರ್ಮಾಣ ಮಾಡುವವರು ರಾ.ಹೆದ್ದಾರಿಯಿಂದ 40 ಮೀ. ದೂರ ಹಾಗೂ ಜಿ.ಪಂ ರಸ್ತೆಯಲ್ಲಿ 12.5 ಮೀಟರ್‌ ಅಂತರ ಕಾಯ್ದುಕೊಳ್ಳಬೇಕು. ಸೆಟ್‌ಬ್ಯಾಕ್‌ ಹಾಗೂ ಪಾರ್ಕಿಂಗ್‌ ಸೇರಿದಂತೆ ಯೋಜನಾ ಆಯೋಗದ ನಿಯಮಗಳನ್ನು ಪಾಲಿಸಬೇಕು. ಆದರೆ ಇಲ್ಲಿನ ಬಹುತೇಕ ವಾಣಿಜ್ಯ ಕಟ್ಟಡಗಳಲ್ಲಿ ಈ ನಿಯಮಗಳನ್ನು ಪಾಲಿಸಿಲ್ಲ. ಇವುಗಳ ಬಗ್ಗೆ ವರದಿ ನೋಡಿದ ಬಳಿಕ ಪ.ಪ.ಪಂ. ವ್ಯಾಪ್ತಿಯ ಕಟ್ಟಡಗಳಿಗೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ತತ್‌ಕ್ಷಣ ಕ್ರಮ
ಬೈಂದೂರು ಪ.ಪಂ. ವ್ಯಾಪ್ತಿಯ ಅನಧಿಕೃತ ಕಟ್ಟಡ ಮಾಲಕರಿಗೆ ನೋಟಿಸ್‌ ನೀಡಲಾಗಿದೆ. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಇದರ ಇತ್ಯರ್ಥವಾದ ಬಳಿಕ ತತ್‌ಕ್ಷಣ ಕ್ರಮಕೈಗೊಳ್ಳಲಾಗುತ್ತದೆ.
-ನವೀನ್‌, ಮುಖ್ಯಾಧಿಕಾರಿ, ಪ.ಪಂ. ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next