Advertisement

ಸರ್ವ ಪಕ್ಷಗಳಿಗೆ ಪಪಂ ಪ್ರತಿಷ್ಠೆಯ ಕಣ

09:21 AM May 23, 2019 | Suhan S |

ಹನೂರು: ಪಟ್ಟಣ ಪಂಚಾಯಿತಿಯ 13 ವಾರ್ಡುಗಳಿಗೆ ಮೇ 29 ರಂದು ಚುನಾವಣೆ ನಿಗದಿಯಾಗಿದ್ದು ನಾಮಪತ್ರ ಸಲ್ಲಿಕೆ, ಪರಿಶೀಲನೆ ಮತ್ತು ಹಿಂಪಡೆತ ಪ್ರಕ್ರಿಯೆಗಳೆಲ್ಲಾ ಮುಕ್ತಾಯಗೊಂಡು 41 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದು ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿದೆ.

Advertisement

ಅಧಿಕಾರ ಉಳಿಸಿಕೊಳ್ಳುವ ಹಂಬಲ: ಹನೂರು ಪಟ್ಟಣವು ಗ್ರಾಪಂ ಆಡಳಿತ ವಿದ್ದಾಗಿನಿಂದಲೂ ಮತ್ತು ಪಪಂ ಆಗಿ ಘೋಷಣೆಯಾದ 2 ಚುನಾವಣೆಯಲ್ಲಿಯೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ. ಅಂತೆಯೇ ಈ ಬಾರಿಯೂ ಅಧಿಕಾರವನ್ನಿಡಿಯುವ ಹಂಬಲದಲ್ಲಿದೆ. ಚುನಾವಣಾ ಕಣಕ್ಕೆ ಇಳಿದಿರುವ ಅಭ್ಯರ್ಥಿಗಳು ಮತ್ತು ಆಯಾ ವಾರ್ಡಿನ ಮತದಾರರ ಅಂಕಿ ಸಂಖ್ಯೆಗಳು, ಸಮುದಾಯವಾರು ಮತಗಳು ಇವುಗಳನ್ನೆಲ್ಲಾ ಗಣನೆಗೆ ತೆಡಗೆದುಕೊಂಡು ತುಲನೆ ಮಾಡಿ ನೋಡಿದಲ್ಲಿ ಕಾಂಗ್ರೆಸ್‌ ಪಕ್ಷ ಕೊಂಚ ಮುಂದಿದ್ದು ಸರಳ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಬಾರಿ ಅಧಿಕಾರ ಹಿಡಿಯುವ ಹಾದಿ ಕೊಂಚ ದುರ್ಗಮವಾಗಿದೆ. ಇದಕ್ಕೆ ಮೂಲ ಕಾರಣ 2018ರಲ್ಲಿ ಜರುಗಿದ ವಿಧಾನಸಭಾ ಚುನಾವಣೆ ಮತ್ತು 2019ರ ಏಪ್ರಿಲ್ ತಿಂಗಳಿನಲ್ಲಿ ಜರುಗಿದ ಲೋಕಸಭಾ ಚುನಾವಣೆಯಲ್ಲಿ ಉಂಟಾಗಿರುವ ಹಿನ್ನೆಡೆ. 2018ರಲ್ಲಿ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಹನೂರು ಪಟ್ಟಣದಲ್ಲಿ ಕಾಂಗ್ರೆಸ್‌ ಪಕ್ಷಕ್ಕಿಂತ 101 ಮತಗಳ ಹೆಚ್ಚು ಮತ ಪಡೆದಿತ್ತು.

ಇನ್ನು ಲೋಕಸಭಾ ಚುನಾವಣೆಯಲ್ಲಿಯೂ ಪಟ್ಟಣ ವ್ಯಾಪ್ತಿಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನೆಡೆಯೇ ಆಗಿದ್ದು 500-1000 ಮತಗಳು ಬಿಜೆಪಿಗೆ ಹೆಚ್ಚು ಲಭಿಸಬಹುದು ಎಂಬ ಅಂದಾಜು ಹಾಕಲಾಗಿದೆ.

ಈ ಎರಡೂ ಕಾರಣಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ಮತ್ತೂಮ್ಮೆ ಅಧಿಕಾರ ಹಿಡಿಯುವ ಹಾದಿ ಕೊಂಚ ದುರ್ಗಮವಾಗಿದೆ ಎಂಬುದು ಲೆಕ್ಕಾಚಾರವಾಗಿದೆ.

ಬಿಜೆಪಿಯಿಂದ ಸಮರ್ಥ ಅಭ್ಯರ್ಥಿಗಳು ಕಣದಲ್ಲಿಲ್ಲ: 2018ರ ವಿಧಾನಸಭಾಚುನಾವಣೆಯಲ್ಲಿ ಅತಿ ಹೆಚ್ಚು ಪಡೆದು ಲೋಕಸಭಾ ಚುನಾವಣೆಯಲ್ಲಿಯೂ ಹೆಚ್ಚು ಪಡೆದಿರುವ ವಿಶ್ವಾಸದಲ್ಲಿರುವ ಬಿಜೆಪಿ ಪಕ್ಷಕ್ಕೆ ಪಪಂ ಚುನಾವಣೆಯಲ್ಲಿ ಗೆಲುವು ಕಷ್ಟ ಎಂದು ಅಂದಾಜಿಸಲಾಗಿದ್ದು ನಿರೀಕ್ಷಿಸಿದಷ್ಟು ಸ್ಥಾನಗಳು ಲಭಿಸುವ ಸಾಧ್ಯತೆಗಳಿಲ್ಲ ಎಂದು ಅಂದಾಜಿಸಲಾಗಿದೆ.

Advertisement

ಬಿಜೆಪಿ ಪಕ್ಷದಿಂದ 5-6 ವಾರ್ಡುಗಳಲ್ಲಿ ಮಾತ್ರ ಸಮರ್ಥ ಅಭ್ಯರ್ಥಿಗಳು ಕಣದಲ್ಲಿದ್ದು ಇನ್ನುಳಿದ ವಾರ್ಡುಗಳಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂಬುವ ದೃಷ್ಟಿಯಿಂದ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಆದುದರಿಂದ ಬಿಜೆಪಿ ಪಕ್ಷ ಅಧಿಕಾರ ಹಿಡಿಯುವ ಸಾಧ್ಯತೆಗಳು ಕಡಿಮೆ ಎಂಬುವ ವಾದ ಸಾರ್ವಜನಿಕ ವಲಯದಿಂದ ವ್ಯಕ್ತವಾಗಿದೆ.

ಜೆಡಿಎಸ್‌ಗೆ ಅಸ್ತಿತ್ವ ಉಳಿಸಿಕೊಳ್ಳುವ ಚುನಾವಣೆ: 2018ರ ವಿಧಾನಸಭಾ ಚುನಾವಣೆ ವೇಳೆ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಕ್ಷೇತ್ರಕ್ಕೆ ಕಾಲಿಟ್ಟು ಬಿಜೆಪಿ ಅಭ್ಯರ್ಥಿಯಾಗುವ ಹಂಬಲದಲ್ಲಿದ್ದು ಬಳಿಕ ಟಿಕೆಟ್ ದೊರೆಯದೆ ಅಂತಿಮವಾಗಿ ಜೆಡಿಎಸ್‌ನಿಂದ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಿದ್ದ ಮಂಜುನಾಥ್‌ ಮತ್ತು ಜೆಡಿಎಸ್‌ ಪಕ್ಷಕ್ಕೆ ಇದು ಅಸ್ಥಿತ್ವ ಉಳಿಸಿಕೊಳ್ಳುವ ಚುನಾವಣೆಯಾಗಿದೆ. ಈ ಚುನಾವಣೆಯಲ್ಲಿ ಹನೂರು ಪಪಂನಲ್ಲಿ ಅಧಿಕಾರ ಹಿಡಿದು ಮುಂಬರುವ ಚುನಾವಣೆಗಳಿಗೆ ಅಡಿಪಾಯ ಮಾಡಿಕೊಳ್ಳಬೇಕೆಂಬ ಹಂಬಲದಲ್ಲಿ ಜೆಡಿಎಸ್‌ ಪಕ್ಷದ ಮುಖಂಡರಿದ್ದಾರೆ. ಆದರೆ ಜೆಡಿಎಸ್‌ ಪಕ್ಷದಲ್ಲಿಯು ಸಹ ಕೆಲ ವಾರ್ಡುಗಳಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಲೋಪದೋಷಗಳಾಗಿದ್ದು 5-6 ವಾರ್ಡುಗಳಲ್ಲಿ ಮಾತ್ರ ಸ್ಪರ್ಧೆ ಒಡ್ಡಬಹುದು ಎನ್ನಲಾಗಿದೆ.

● ವಿನೋದ್‌ ಎನ್‌ ಹನೂರು

Advertisement

Udayavani is now on Telegram. Click here to join our channel and stay updated with the latest news.

Next