Advertisement
ರಸ್ತೆ ಬದಿಯಲ್ಲಿ ಅದರಲ್ಲಿಯೂ ವಾಹನಗಳ ದಟ್ಟನೆ ಜಾಸ್ತಿಯಿರುವ ಕಡೆ ಅಥವಾ ನೋ ಪಾರ್ಕಿಂಗ್ ಬೋರ್ಡ್ ಹಾಕಿರುವ ಕಡೆ ವಾಹನ ನಿಲುಗಡೆ ಮಾಡಿರುವುದರ ವಿರುದ್ಧ ಕ್ರಮ ಜರುಗಿಸುವುದಕ್ಕೆ ಸಾರ್ವಜನಿಕರ ಆಕ್ಷೇ ಪಣೆಯೂ ಇಲ್ಲ. ಆದರೆ, ನಗರ ವ್ಯಾಪ್ತಿಯಲ್ಲಿ ಶೇ.70 ರಷ್ಟು ಕಡೆ ಸಾರ್ವ ಜನಿಕರಿಗೆ ಅನುಕೂಲವಾಗುವಂತೆ ವಾಹನ ನಿಲುಗಡೆ ಮಾಡಲು ಅವಕಾಶವಿಲ್ಲ. ನಗರದೆಲ್ಲೆಡೆ ಕೆಲವೇ ಸ್ಥಳಗಳಲ್ಲಿ ಮಾತ್ರ ನೋ-ಪಾರ್ಕಿಂಗ್ ನಾಮಫಲಕ ಹಾಕಲಾಗಿದೆ. ಉಳಿದೆಡೆ ಅಂಥ ಯಾವುದೇ ಸೂಚನಾ ಫಲಕಗಳಿಲ್ಲ.
Related Articles
Advertisement
ನಿಯಮ ಪಾಲಿಸದ ಟೋಯಿಂಗ್ ವಾಹನ! :
ರಸ್ತೆ/ ಚರಂಡಿ/ ಒಳಚರಂಡಿ ಅಭಿವೃದ್ಧಿ ಕಾಮಗಾರಿ ನಡೆಸುವ ವೇಳೆ ನಗರದ ಹಲವು ರಸ್ತೆಗಳಲ್ಲಿದ್ದ ಪಾರ್ಕಿಂಗ್ ತಾಣಗಳು ತೆರವಾಗಿವೆ. ಇದರಿಂದಾಗಿ ಜನರು ರಸ್ತೆ ಬದಿ ಅವಕಾಶ ಸಿಕ್ಕಿದಲ್ಲಿ ವಾಹನ ನಿಲ್ಲಿಸುತ್ತಾರೆ. ಹಾಲು, ಪತ್ರಿಕೆ, ತರಕಾರಿ ಇತ್ಯಾದಿಗಳ ಖರೀದಿಗೆ, ಎಟಿಎಂ ನಿಂದ ಹಣ ಪಡೆಯಲು ಮತ್ತಿತರ ಉದ್ದೇಶಗಳಿಗೆ ಜನರು ರಸ್ತೆ ಬದಿ ವಾಹನ ನಿಲ್ಲಿಸಿ ತಮ್ಮ ವ್ಯವಹಾರ ಮುಗಿಸಿ ಬರುವಷ್ಟರಲ್ಲಿ ವಾಹನ ಟೋಯಿಂಗ್‌ನವರ ಪಾಲಾಗಿರುತ್ತದೆ.
ವಾಹನವನ್ನು ಟೋಯಿಂಗ್ ಮಾಡುವ ಮುಂಚಿತವಾಗಿ ರಸ್ತೆ ಬದಿ ನಿಯಮ ಉಲ್ಲಂಘಿಸಿ ನಿಲ್ಲಿಸಲಾದ ವಾಹನದ ಬಗ್ಗೆ ಉದ್ಘೋಷಣೆ ಮಾಡಬೇಕು ಹಾಗೂ ಸಂಬಂಧಪಟ್ಟ ವಾಹನದ ಮಾಲಕ/ ಚಾಲಕರಿಗೆ ಆ ವಾಹನವನ್ನು ತೆರವು ಮಾಡಲು 5 ನಿಮಿಷ ಕಾಲಾವಕಾಶ ನೀಡಬೇಕೆಂಬ ನಿಯಮವಿದೆ. ಆದರೆ ಇದ್ಯಾವುದನ್ನೂ ಪಾಲಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ಇದೇ ಕಾರಣಕ್ಕೆ ಇತ್ತೀಚೆಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿಯೂ ಸದ್ಯಕ್ಕೆ ಟೋಯಿಂಗ್ ವಾಹನ ಕಾರ್ಯಾಚರಣೆ ನಿಲ್ಲಿಸುವಂತೆ ಒತ್ತಾಯ ಕೇಳಿಬಂದಿತ್ತು.
ಏರಿಕೆಯಾದ ದಂಡ ಶುಲ್ಕ :
2020ರಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ಬಂದ ಬಳಿಕ ಟೋಯಿಂಗ್ ಶುಲ್ಕವೂ ಏರಿಕೆಯಾಗಿದೆ. ದ್ವಿಚಕ್ರ ವಾಹನಕ್ಕೆ ಈಗ 1,650 ರೂ. ಹಾಗೂ ಚತುಶ್ಚಕ್ರ ವಾಹನಕ್ಕೆ 2,000 ರೂ. ಶುಲ್ಕ ನೀಡಬೇಕು. ದ್ವಿಚಕ್ರ ವಾಹನದ 1,650 ರೂ.ಗಳಲ್ಲಿ 1,000 ರೂ. ಸಂಚಾರ ನಿಯಮ ಉಲ್ಲಂಘನೆಗಾಗಿ, ಉಳಿದ 650 ರೂ. ಗಳ ಪೈಕಿ ತಲಾ 325 ರೂ. ಟೋಯಿಂಗ್ ಗುತ್ತಿಗೆದಾರರಿಗೆ ಹಾಗೂ ಸರಕಾರದ ಬೊಕ್ಕಸಕ್ಕೆ ಹೋಗುತ್ತದೆ. ಚತುಶ್ಚಕ್ರ ವಾಹನದ 2,000 ರೂ. ಪೈಕಿ 1,000 ರೂ. ಸಂಚಾರ ನಿಯಮ ಉಲ್ಲಂಘನೆಗೆ, ಉಳಿದ 1,000 ರೂ. ಗಳಲ್ಲಿ ತಲಾ 500 ರೂ. ಟೋಯಿಂಗ್ ಗುತ್ತಿಗೆದಾರರಿಗೆ ಮತ್ತು ಸರಕಾರಕ್ಕೆ ಸೇರುತ್ತದೆ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಟೋಯಿಂಗ್ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. 2020ರ ಸೆ. 8ರಿಂದ ಪುನರಾರಂಭವಾಗಿದೆ.
3,575 ಪ್ರಕರಣ ದಾಖಲು :
ಮಂಗಳೂರಿನಲ್ಲಿ ಟೋಯಿಂಗ್ ವ್ಯವಸ್ಥೆ ಜಾರಿಗೆ ಬಂದದ್ದು 2019 ರ ಮಾರ್ಚ್ 2 ರಂದು. 2020 ನವೆಂಬರ್ ತನಕ ಒಟ್ಟು 3,575 ಪ್ರಕರಣ ದಾಖಲಿಸಿ 48,44,800 ರೂ. ಶುಲ್ಕ ವಸೂಲಾಗಿದೆ. ಪ್ರಾರಂಭದಲ್ಲಿ ದಂಡ ಶುಲ್ಕವನ್ನು ದ್ವಿಚಕ್ರ ವಾಹನಗಳಿಗೆ 750 ರೂ. ಹಾಗೂ ಕಾರುಗಳಿಗೆ 1,100 ರೂ. ಇತ್ತು. ಈ 750 ರೂ. ದಂಡ ಶುಲ್ಕದಲ್ಲಿ 325 ರೂ. ಗುತ್ತಿಗೆದಾರರಿಗೆ ಹಾಗೂ ಉಳಿದ 425 ರೂ. ಸರಕಾರಕ್ಕೆ ಹೋಗುತ್ತಿತ್ತು. ಕಾರುಗಳಿಗೆ ಸಂಬಂಧಿಸಿ 1,100 ರೂ. ಪೈಕಿ 500 ರೂ. ಗುತ್ತಿಗೆದಾರರಿಗೆ ಹಾಗೂ ಉಳಿದ 600 ರೂ. ಸರಕಾರಕ್ಕೆ ಸಂದಾಯವಾಗುತ್ತಿತ್ತು.
ಪೊಲೀಸರ ವಿರುದ್ಧವೇ ಅಸಮಾಧಾನ :
ಟೋಯಿಂಗ್ ವ್ಯವಸ್ಥೆಯನ್ನು ಟೆಂಡರ್‌ನಲ್ಲಿ ಬಿಡ್ ಮಾಡಿ ಗುತ್ತಿಗೆ ವಹಿಸಿಕೊಳ್ಳಲಾಗುತ್ತದೆ. ಪ್ರಸ್ತುತ ಮೂರು ವರ್ಷಗಳ ಗುತ್ತಿಗೆ 2019ರ ಮಾರ್ಚ್ ನಲ್ಲಿ ಬೆಂಗಳೂರಿನವರು ವಹಿಸಿಕೊಂಡಿ ದ್ದಾರೆ. ಇವರು ತಮ್ಮ ಬಿಡ್ ಹಣ ಹೊಂದಿಸಿಕೊಳ್ಳಲು ಕಣ್ಣಿಗೆ ಕಾಣಿಸುವ ವಾಹನಗಳನ್ನು ಹೊತ್ತೂಯ್ಯುತ್ತಾರೆ. ಇದು ಸುಗಮ ಸಂಚಾರದ ಉದ್ದೇಶವಲ್ಲ. ಹೀಗಾಗಿ, ಟೋಯಿಂಗ್ ವ್ಯವಸ್ಥೆಯಲ್ಲಿನ ಲೋಪದ ಆರೋಪಗಳಿಗೆಲ್ಲ ಪೊಲೀಸರು ಗುರಿಯಾಗುತ್ತಿದ್ದಾರೆ ಎನ್ನುವುದು ಸಾರ್ವಜನಿಕವಾಗಿ ಕೇಳಿಬರುತ್ತಿರುವ ಅಭಿಪ್ರಾಯ.