Advertisement

ಕೈಚಪ್ಪಾಳೆ ತಟ್ಟಿದರೆ ಗುಳ್ಳೆಗಳು ಏಳುವ ಗೌರಿಕೆರೆ! ಏನಿದರ ವಿಶೇಷತೆ?

03:43 PM Apr 19, 2021 | Team Udayavani |

ಗೌರಿತೀರ್ಥ ಶಿವಮೊಗ್ಗ ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಕಂಡುಬರುವ ಅತ್ಯಂತ ಪ್ರಸಿದ್ಧ ಹಾಗೂ ವಿಶ್ವವಿಖ್ಯಾತ ಪ್ರದೇಶ.  ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಂಪಕಾಪುರ ಎಂಬ ಊರಿನ ಸಮೀಪ ಈ ಸ್ಥಳ ಕಂಡುಬರುತ್ತದೆ.

Advertisement

ಶಿವಮೊಗ್ಗದಿಂದ ಸುಮಾರು  68 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶಕ್ಕೆ ತೆರಳಲು ವ್ಯವಸ್ಥಿತವಾದ ರಸ್ತೆ ವ್ಯವಸ್ಥೆಯನ್ನು ಮಾಡಲಾಗಿದ್ದು, ದೇಶ ವಿದೇಶಗಳಿಂದ ಈ ಕೆರೆಯನ್ನು ವೀಕ್ಷಿಸಲು ಪ್ರವಾಸಿಗರು ಆಗಮಿಸುತ್ತಾರೆ. ಸಂಪೂರ್ಣವಾಗಿ ಪಾಚಿಕಟ್ಟಿರುವ ಕೆರಿಯಲ್ಲಿ ಪಾಚಿಗಳ ನಡುವೆ ಸರಾಗವಾಗಿ ಗುಳ್ಳೆಗಳು ಬರುವುದು  ಈ ಕೆರೆಯ ವಿಶೇಷವಾಗಿದೆ.

ಕೆರೆಯ ಎದುರು ಹೋಗಿ ನಿಂತು ಚಪ್ಪಾಳೆ ತಟ್ಟಿದರೆ ನೀರಿನಿಂದ ಸರಾಗವಾಗಿ ಗುಳ್ಳೆಗಳು ಏಳಲು ಆರಂಭಗೊಳ್ಳುತ್ತದೆ. ಚಪ್ಪಾಳೆಯ ಸದ್ದು ಹೆಚ್ಚಾಗುತ್ತಾ ಹೋದಂತೆ ಗುಳ್ಳೆಗಳ ಪ್ರಮಾಣವೂ ಅಧಿಕಗೊಳ್ಳುತ್ತಾ ಹೋಗುತ್ತದೆ. ಹಲವಾರು   ಜನರು ಈ ಕೆರೆಗೆ ನಾಣ್ಯಗಳನ್ನು ಹಾಕಿ ಚಪ್ಪಾಳೆ ತಟ್ಟುತ್ತಾರೆ. ಹೀಗೆ ಚಪ್ಪಾಳೆ ತಟ್ಟಿದಾಗ ಗುಳ್ಳೆಗಳು ಮೂಡುವ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತದೆ ಎಂಬುವುದು ಈ ಕೆರೆಯ ಕುರಿತಾದ ನಂಬಿಕೆಯಾಗಿದೆ.

ವಿಶ್ವ ಪ್ರಸಿದ್ಧವಾಗಿರುವ ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಈ ಕೆರೆ ರೂಪುಗೊಂಡಿದೆ. ವರ್ಷವಿಡಿ ಈ ಕೆರೆಯಲ್ಲಿ ಪರಿಶುದ್ಧ ನೀರು ತುಂಬಿರುತ್ತದೆ .ಅತ್ಯಂತ ಸಿಹಿ ಹಾಗೂ ತಣ್ಣನೆಯ ನೀರನ್ನು ಈ ಕೆರೆ ಹೊಂದಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ನಡೆದು ಹೋಗುವಾಗ ದಾರಿ ಮಧ್ಯೆ ಬಾಯಾರಿಕೆಯನ್ನು ನಿವಾರಿಸಿಕೊಳ್ಳುವ ನಿಟ್ಟಿನಲ್ಲಿ ಈ ಕೆರೆಯ ನೀರನ್ನು ಬಳಸುತ್ತಾರೆ. ಅಕ್ಕ-ಪಕ್ಕದ ಮನೆಗಳು ಕೂಡ ಈ ಕೆರೆಯ ನೀರನ್ನು ತಮ್ಮ ಉಪಯೋಗಗಳಿಗಾಗಿ ಬಳಸಿಕೊಳ್ಳುತ್ತಾರೆ.

Advertisement

ಈ ಕೆರೆಯಲ್ಲಿ ಚಪ್ಪಾಳೆ ತಟ್ಟಿದಾಗ ಗುಳ್ಳೆಗಳು ಬರುವ ಹಿನ್ನೆಲೆ ಕುರಿತಂತೆ ವೈಜ್ಞಾನಿಕ ಕಾರಣಗಳನ್ನು ಹಲವು ಸಂಶೋಧಕರು ಹುಡುಕುತ್ತಿದ್ದಾರೆ. ಆದರೆ ಈ ಕುರಿತಂತೆ ಸರಿಯಾದ ಯಾವುದೇ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ. ಈ ಕೆರೆಯಲ್ಲಿ ಮೂಡುವ ಗುಳ್ಳೆಗಳ ಹಿಂದಿನ ಕಾರಣದ ಕುರಿತಾಗಿ ಹಲವಾರು ಅಧ್ಯಯನಗಳೂ ನಡೆಯುತ್ತಿವೆ.

ಹಿನ್ನೆಲೆ

ಹಲವು ನಂಬಿಕೆಗಳ ಪ್ರಕಾರ ಈ ಸ್ಥಳವು ಚಂಪಕಾಮಹರ್ಷಿಗಳ ತಪೋಭೂಮಿಯಾಗಿತ್ತು . ಇಲ್ಲಿ ಬಂದು ಚಂಪಕಾ ಮಹರ್ಷಿಗಳು ತಪಸ್ಸನ್ನು ಕೈಗೊಳ್ಳುತ್ತಿದ್ದರು. ಅಲ್ಲದೆ ಒಮ್ಮೆ ಸಾಗರ ತಾಲೂಕಿನ ವರದ ಹಳ್ಳಿಯ ಮಠದ ಶ್ರೀ. ಶ್ರೀಧರ ಸ್ವಾಮೀಜಿ ಅವರು ಈ ಜಾಗಕ್ಕೆ  ಆಗಮಿಸಿದ್ದರು. ಈ ಶ್ರೀಧರ ಸ್ವಾಮಿಗಳು ಈ ಕೆರೆಯ ನೀರಿನ ಮೇಲೆ ಕುಡಿಬಾಳೆ ಎಲೆಯನ್ನು ಇಟ್ಟು  ಅದರ ಮೇಲೆ ಆಸನ ಹಾಕಿ ಕುಳಿತು ತಪಸ್ಸನ್ನು ಆಚರಿಸುತ್ತಿದ್ದರು ಎಂಬ ನಂಬಿಕೆ ಇದೆ.

ಗೌರಿ ಶಂಕರದೇವಾಲಯ

ಗೌರಿತೀರ್ಥದ ದಡದಲ್ಲಿ ಗೌರಿಶಂಕರ ದೇವಾಲಯವಿದೆ. ಅತ್ಯಂತ ಶಕ್ತಿಶಾಲಿ ದೇವಾಲಯ ಇದಾಗಿದ್ದು, ಯಾವುದೇ ರೀತಿಯಾದ ಆಡಂಬರಗಳಿಲ್ಲದೆ ಅತ್ಯಂತ ಸರಳವಾದ ವಿನ್ಯಾಸದಲ್ಲಿ ದೇವಾಲಯನ್ನು ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ. ಗೌರಿತೀರ್ಥವನ್ನು ನೋಡಲು ಬರುವ ಪ್ರವಾಸಿಗರು ಹಾಗೂ ಭಕ್ತಾದಿಗಳು ಗೌರಿಶಂಕರ ದೇವಾಲಯದಲ್ಲಿ ದೇವರದರ್ಶನವನ್ನು ಪಡೆಯುತ್ತಾರೆ. ತಮ್ಮ ತಮ್ಮ ಹಲವಾರು ಸಮಸ್ಯೆಗಳಿಗೆ ಪರಿಹಾರ ದೊರಕಿಸುವಂತೆ ಬೇಡಿಕೊಳ್ಳುತ್ತಾರೆ. ಈ ದೇವಾಲಯದಲ್ಲಿ ಪ್ರತಿ ನಿತ್ಯ ಪೂಜಾ ಪದ್ಧತಿಗಳು ನಡೆಯುತ್ತದೆ. ತಿಂಗಳಿನಲ್ಲಿ ಒಂದು ದಿನ ರುದ್ರಾಭಿಷೇಕ ಒಳಗೊಂಡಂತೆ ವಿಶೇಷ ಪೂಜಾ ವಿಧಾನಗಳನ್ನು ಇಲ್ಲಿ ನೆರವೇರಿಸಲಾಗುತ್ತದೆ. ಗುರುಪೂರ್ಣಿಮೆಯ ದಿನ ಶ್ರೀ ಶ್ರೀಧರಸ್ವಾಮಿಗಳಿಗೆ ಈ ಸ್ಥಳದಲ್ಲಿ ವಿಶೇಷವಾದ ಪೂಜೆಯನ್ನು ನೆರವೇರಿಸಲಾಗುತ್ತದೆ ಮತ್ತು ಏಕಾದಶಿಯ ದಿನ ಈ ಸ್ಥಳದಲ್ಲಿ ಊರಿನ ಜನರೆಲ್ಲ ಸೇರಿ ಪೂಜಾ ವಿಧಾನಗಳನ್ನು ಪೂರೈಸಿ “ಹೋಳಿಊಟ” ಎಂಬ ಹೆಸರಿನ ಭೋಜನ ಕಾರ್ಯಕ್ರಮವನ್ನು ನಡೆಸುತ್ತಾರೆ. ಈ ಸಂದರ್ಭದಲ್ಲಿ ಊರ-ಪರವೂರಿನ ಹಲವಾರು ಜನರು  ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಜೊತೆಗೆ ಈ ಪ್ರದೇಶವನ್ನು ವೀಕ್ಷಿಸಿ ತೆರಳುತ್ತಾರೆ.

ಪ್ರವಾಸಿಗರು ಆಗಮಿಸಿ ಚಪ್ಪಾಳೆ ತಟ್ಟಿದಾಗ ಉದ್ಭವವಾಗುವ ಗುಳ್ಳೆಗಳನ್ನು ಕಂಡು ಸಂತೋಷ ಪಡುತ್ತಾರೆ. ಹಾಗೆಯೇ ಹಲವು ನಾಣ್ಯಗಳನ್ನು ಕೆರೆಗೆ ಹಾಕಿ ಹೋಗುತ್ತಾರೆ ನಂತರ ದೇವಾಲಯಕ್ಕೆ ಸಂಬಂಧಪಟ್ಟವರು ಪ್ರತಿ ವರ್ಷ ಸಂಪೂರ್ಣ ಕೆರೆಯನ್ನು ಶುದ್ಧೀಕರಿಸಿ ಪ್ರವಾಸಿಗರು ಹಾಕಿ ಹೋದ ನಾಣ್ಯಗಳನ್ನು ತೆಗೆದು ಆ ಹಣವನ್ನು ಕೆರೆಯ ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ ಬಳಸಿಕೊಳ್ಳುತ್ತಾರೆ.

ಮಾರ್ಗಸೂಚಿ

ಶಿವಮೊಗ್ಗ ಜಿಲ್ಲೆಯಿಂದ ಗೌರಿತೀರ್ಥಕ್ಕೆ ಹೋಗುವುದಾದರೆ ಹೊಸನಗರ ತಾಲೂಕನ್ನು  ತಲುಪಿ, ನಂತರ ಅಲ್ಲಿಂದ ಕೊಲ್ಲೂರಿಗೆ ಹೋಗುವ ರಸ್ತೆಯಲ್ಲಿ ಪ್ರಯಾಣ ಬೆಳೆಸಿ ಅಲ್ಲಿ ಸಿಗುವ ಸಂಪೆಕಟ್ಟೆ ಎಂಬ ಊರಿನಿಂದ ಎಡರಸ್ತೆಯಲ್ಲಿ ಸಾಗಿ ಸುಮಾರು ಮೂರರಿಂದ ನಾಲ್ಕು ಕಿಲೋಮೀಟರ್ ಕ್ರಮಿಸಿದರೆ ಗೌರಿತೀರ್ಥ ಎಂಬ ಅದ್ಭುತ ಸ್ಥಳವನ್ನು ಕಾಣಬಹುದಾಗಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next