ಆಲಮಟ್ಟಿ: 2019ರಿಂದ ಕೋವಿಡ್ ಹಾವಳಿಯಿಂದ ಕಳೆಗುಂದಿದ ರಂಜಾನ್ ಹಬ್ಬವನ್ನು ಈ ಬಾರಿ ಸಡಗರ ಸಂಭ್ರಮದಿಂದ ಆಚರಿಸಿದ ಮುಸ್ಲಿಮರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಬುಧವಾರ ಆಲಮಟ್ಟಿಯ ವಿವಿಧ ಉದ್ಯಾನಗಳಿಗೆ ಭೇಟಿ ನೀಡಿ ನಿಸರ್ಗದ ಸೊಬಗನ್ನು ಸವಿದರು.
ಮಂಗಳವಾರದಂದು ಜಗಜ್ಯೋತಿ ಬಸವೇಶ್ವರ ಜನ್ಮದಿನ ಹಾಗೂ ರಂಜಾನ್ ಹಬ್ಬಗಳು ಒಂದೇ ದಿನ ಬಂದಿದ್ದರಿಂದ ಹಿಂದೂ-ಮುಸ್ಲಿಮರು ಸಹೋದರತೆ ಭಾವದಿಂದ ಆಚರಿಸಿ ಬುಧವಾರ ಪ್ರವಾಸಿ ತಾಣ ಆಲಮಟ್ಟಿಗೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. ಪಟ್ಟಣವು ರೈಲು ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳನ್ನು ಹೊಂದಿದ್ದರಿಂದ ದೈನಂದಿನ ಜಂಜಡದಲ್ಲಿ ಬೇಸತ್ತಿದ್ದ ಜನತೆ ಸಂಭ್ರಮದಿಂದ ಹಬ್ಬ ಆಚರಿಸಿ ಹಬ್ಬದ ಮರುದಿನ ಸಂತಸದ ಕ್ಷಣಗಳನ್ನು ಕಳೆಯಲು ತಮ್ಮ ಖಾಸಗಿ ವಾಹನ, ಬಸ್, ರೈಲು ಸೇರಿದಂತೆ ವಿವಿಧ ವಾಹನಗಳ ಮೂಲಕ ಬೆಳಗ್ಗೆಯಿಂದ ಸಂಜೆವರೆಗೂ ಆಲಮಟ್ಟಿಗೆ ಬರುವವರ ಸಂಖ್ಯೆ ಏರಿಕೆಯಾಗುತ್ತಲೇ ಇತ್ತು.
ಉದ್ಯಾನಕ್ಕೆ ಭೇಟಿ: ರಾಷ್ಟ್ರೀಯ ಹೆದ್ದಾರಿ ಹಾಗೂ ಶಾಸ್ತ್ರಿ ಜಲಾಶಯದ ಮಧ್ಯ ಭಾಗದಲ್ಲಿರುವ ರಾಕ್ ಉದ್ಯಾನದಲ್ಲಿರುವ ನೈಜ ಕಾಡು ಪ್ರಾಣಿ, ಪಕ್ಷಿ, ಕಾಡು ಜನರ ಬದುಕು, ಗ್ರಾಮೀಣ ಜಾತ್ರೆಯ ಸೊಗಡು, ಸೂರ್ಯನ ಕಿರಣಗಳಲ್ಲಿ ಅರಳಿದ ಭಾರತ ನಕ್ಷೆ, ಸರ್ವ ಜನಾಂಗದ ಶಾಂತಿಯ ತೋಟದ ಸಂಕೇತವಾಗಿರುವ ದೇಶದ ಭದ್ರತೆಯ ರಕ್ಷಣೆಗೆ ಪಣ ತೊಟ್ಟಿರುವ ದೇಶಾಭಿಮಾನಿಗಳು, ವಿವಿಧ ಬಗೆಯ ಸಸ್ಯ ಸಂಪತ್ತು, ಜಲಚರಗಳು, ಕೀಟಗಳ ವಂಶಾಭಿವೃದ್ಧಿ, ಸರಿ ಸೃಪಗಳು ಹೀಗೆ ಹಲವಾರು ಬಗೆಯ ನೈಜತೆಯನ್ನು ಹೋಲುವ ಸಿಮೆಂಟ್ ಕಾಂಕ್ರೀಟ್ ಹಾಗೂ ಸ್ಟೀಲ್ ಹೀಗೆ ವಿವಿಧ ವಸ್ತುಗಳಿಂದ ತಯಾರಿಸಿ ಪ್ರತಿಮೆಗಳು ಒಂದಕ್ಕಿಂದ ಒಂದು ಸುಂದರವಾಗಿ ಕಾಣುತ್ತಿರುವುದನ್ನು ಕಣ್ತುಂಬಿಕೊಂಡರು.
ಮಕ್ಕಳು ಆಟವಾಡಲು ಚಿಲ್ಡ್ರನ್ ಪಾರ್ಕ್, ಪುಟಾಣಿ ರೈಲು, ಸಿಲ್ವರ್ ಲೇಕ್, ಜೋಕಾಲಿ, 7ಡಿ ವರ್ಚುವಲ್ ಪ್ರದರ್ಶನ ಕಂಡು ಕಣ್ತುಂಬಿಕೊಂಡರು. ಮೊಘಲ್ ಉದ್ಯಾನ, ಇಟಾಲಿಯನ್ ಉದ್ಯಾನ, ಫ್ರೆಂಚ್ ಉದ್ಯಾನ, ಸಂಗೀತ ನೃತ್ಯ ಕಾರಂಜಿ, ಲೇಸರ್ ಶೋ, ಗೋಪಾಲಕೃಷ್ಣ ಉದ್ಯಾನ, ಲವಕುಶ ಉದ್ಯಾನ, ಎಂಟ್ರನ್ಸ್ ಪ್ಲಾಜಾದ ಹಿಂಬದಿಯಲ್ಲಿರುವ ತ್ರೀಡಿ ಪ್ರದರ್ಶನ, ಬೃಹತ್ ಜಲರಾಶಿ ತುಂಬಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ಹೀಗೆ ಬುಧವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ನೋಡಿದರೂ ಕೂಡ ಇನ್ನೂ ಕೆಲವು ಸ್ಥಳಗಳನ್ನು ನೋಡಲು ಸಮಯ ಸಾಕಾಗಲಿಲ್ಲ ಎನ್ನುವ ಮಾತು ಪ್ರವಾಸಿಗರಿಂದ ಕೇಳಿ ಬಂತು.
ಭೋಜನ ಸವಿ: ಬಿಸಿಲಿನ ಬೇಗೆಯ ಮಧ್ಯದಲ್ಲಿ ಹಸಿರಿನಿಂದ ಕಂಗೊಳಿಸುವ ವಿವಿಧ ಮರಗಳ ನೆರಳಿನಲ್ಲಿ ಸುತ್ತಾಡಿ ಉತ್ಸಾಹದಿಂದ ಉದ್ಯಾನಗಳನ್ನು ವೀಕ್ಷಿಸಿದ ಪ್ರವಾಸಿಗರು ಗಿಡ ಮರಗಳ ನೆರಳಿನಲ್ಲಿ ಕುಳಿತು ತಾವು ತಂದಿದ್ದ ಹಲವು ಬಗೆಯ ಖಾದ್ಯಗಳನ್ನು ಸವಿದರು. ರಂಜಾನ್ ಆಚರಿಸಿದ ಮುಸ್ಲಿಮರು ಹಾಗೂ ನಿತ್ಯ ಆಗಮಿಸುವ ವಿವಿಧ ಧರ್ಮಗಳ ಪ್ರವಾಸಿಗರಿಂದ ಆಲಮಟ್ಟಿಯ ರಾಷ್ಟ್ರೀಯ ಹೆದ್ದಾರಿಯಿಂದ ಎಲ್ಲ ಉದ್ಯಾನಗಳ ರಸ್ತೆಗಳು ಸೇರಿದಂತೆ ಎಲ್ಲಿ ನೋಡಿದರೂ ಜನ ಸಮೂಹವೇ ಕಾಣುತ್ತಿತ್ತು.
ಹೆಚ್ಚಿದ ವ್ಯಾಪಾರ: ಬುಧವಾರ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರವಾಸಿಗರು ಬಿಸಿಲಿನ ಬೇಗೆಯನ್ನು ತಾಳದೇ ಕೆಲವರು ಐಸ್‌ಕ್ರೀಂ, ಮಜ್ಜಿಗೆ, ಶರಬತ್ತು ಸೇರಿದಂತೆ ಹಲವಾರು ಬಗೆಯ ತಂಪು ಪಾನೀಯ ಮೊರೆ ಹೋಗಿದ್ದರಿಂದ ವ್ಯಾಪಾರಸ್ಥರು ಖುಷಿಯಿಂದ ವ್ಯವಹಾರ ಮಾಡಿದರು.
ರಾಕ್ ಉದ್ಯಾನ, ಗೋಪಾಲ ಕೃಷ್ಣ ಉದ್ಯಾನ ಹಾಗೂ ಲವಕುಶ ಉದ್ಯಾನಗಳಿಗೆ ಭೇಟಿ ನೀಡಿದ ಪ್ರವಾಸಿಗರಿಂದ ಒಟ್ಟು 1,34,880 ರೂ. ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗಕ್ಕೆ ಪ್ರವೇಶ μà ಜಮಾ ಆಗಿದೆ. ನಿಡಗುಂದಿ ಸಿಪಿಐ ಸೋಮಶೇಖರ ಜುಟ್ಟಲ್ ನೇತೃತ್ವದಲ್ಲಿ ಇಬ್ಬರು ಪಿಎಸೈ, 35 ಪೊಲೀಸ್ ಸಿಬ್ಬಂದಿ, ಒಂದು ಡಿಎಆರ್ ತುಕಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ.ಕೆ. ಪೈ, ಎಸಿಎಫ್ ಪ್ಯಾಟಿಗೌಡರ, ವಲಯ ಅರಣ್ಯಾ ಧಿಕಾರಿ ಮಹೇಶ ಪಾಟೀಲ ಸೇರಿ 20 ಜನ ಅಧಿಕಾರಿಗಳು 300ಕ್ಕೂ ಅಧಿಕ ದಿನಗೂಲಿ ಕಾರ್ಮಿಕರು, ಕೆಎಸ್‌ಐಎಸ್‌ಎಫನ 10 ಜನ ಅಧಿಕಾರಿಗಳು 50 ಜನ ಪೊಲೀಸ್ ಸಿಬ್ಬಂದಿ ಬಂದೋಬಸ್ತ್ ಏರ್ಪಡಿಸಿದ್ದರು.
-ಶಂಕರ ಜಲ್ಲಿ