Advertisement

ಪ್ರವಾಸಿ ತಾಣಗಳಲ್ಲಿ ಕಟ್ಟೆಚ್ಚರ: ಚಾರಣಿಗರಿಗೆ ನಿರ್ಬಂಧ

10:18 PM Jul 28, 2023 | Team Udayavani |

ಬೆಂಗಳೂರು/ಹುಬ್ಬಳ್ಳಿ/ದ.ಕನ್ನಡ: ನಿರಂತರ ಮಳೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿರುವ ಜಿಲ್ಲಾಡಳಿತ, ಜಲಪಾತ ವೀಕ್ಷಣೆ, ಚಾರಣಿಗರಿಗೆ ನಿರ್ಬಂಧ ಹೇರಿದೆಯಲ್ಲದೆ, ಧಾರ್ಮಿಕ ಕ್ಷೇತ್ರಗಳ ನದಿಗಳಲ್ಲಿ ಮಳೆಗಾಲದಲ್ಲಿ ನದಿ ಸ್ನಾನ ನಿರ್ಬಂಧಿಸಲಾಗಿದೆ.

Advertisement

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ನದಿಪಾತ್ರಗಳಿಗೆ ನೀರಿನ ಹರಿವು ಹೆಚ್ಚಿದೆ. ದತ್ತಪೀಠ, ಮುಳ್ಳಯ್ಯನ ಗಿರಿ, ಫಾಲ್ಸ್‌ ಸೇರಿ ಪ್ರವಾಸಿ ತಾಣಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ. ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲೂ ಜಲಪಾತ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.

ಜು.31ರವರೆಗೆ ಸಫಾರಿ ಬಂದ್‌: ನಾಗರಹೊಳೆ ಉದ್ಯಾನವನದಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ನಾಗರಹೊಳೆ ವನ್ಯಜೀವಿ ವಲಯದಲ್ಲಿ ಜು.31ರವರೆಗೆ ಸಫಾರಿ ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್‌ ಚಿಕ್ಕನರಗುಂದ ತಿಳಿಸಿದ್ದಾರೆ.

ದಮ್ಮನಕಟ್ಟೆಯಲ್ಲಿ ಸಫಾರಿ ಇದೆ: ಆದರೆ ನಾಗರಹೊಳೆ ಉದ್ಯಾನ ವ್ಯಾಪ್ತಿಯ ದಮ್ಮನಕಟ್ಟೆ(ಕಾಕನಕೋಟೆ) ಸಫಾರಿ ಕೇಂದ್ರವು ಎಂದಿನಂತೆ ಕಾರ್ಯ ನಿರ್ವಹಿಸಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನದಿಗೆ ಇಳಿಯುವುದು, ಸೆಲ್ಫಿಗೆ ಕಡಿವಾಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚಿರುವ ಹಿನ್ನೆಲೆಯಲ್ಲಿ ಚಾರಣಕ್ಕೆ ನಿರ್ಬಂಧದ ಜತೆಯಲ್ಲೇ ಪ್ರವಾಸಿಗರು ಸೆಲ್ಫಿ ತೆಗೆಯುವುದು, ನದಿಗಳಿಗೆ ಇಳಿಯುವುದನ್ನು ಕೂಡ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಸುಬ್ರಹ್ಮಣ್ಯ, ಕಟೀಲು, ಧರ್ಮಸ್ಥಳ ಸೇರಿದಂತೆ ಧಾರ್ಮಿಕ ಕ್ಷೇತ್ರಗಳ ನದಿಗಳಲ್ಲಿ ಮಳೆಗಾಲದಲ್ಲಿ ನದಿ ಸ್ನಾನ ನಿರ್ಬಂಧಿಸಲಾಗಿದೆ. ಜಿಲ್ಲೆಯ 8 ಬೀಚ್‌ಗಳಲ್ಲಿ ಜನ ಸಮುದ್ರಕ್ಕೆ ಇಳಿಯದಂತೆ 24 ಹೋಂ ಗಾರ್ಡ್‌ ಇರಿಸಲಾಗಿದ್ದು, ಪೊಲೀಸರನ್ನು ಕೂಡ ನಿಯೋಜಿಸಲಾಗುತ್ತಿದೆ. ಪ್ರವಾಸಿಗರಿಗೆ ಹಾಗೂ ಭಕ್ತರಿಗೆ ಈ ಬಗ್ಗೆ ಕಡ್ಡಾಯ ಸೂಚನೆ ನೀಡುವಂತೆ ತಿಳಿಸಲಾಗಿದೆ ಎಂದರು.

ವಾಹನ ನಿಲ್ಲಿಸಿದರೂ ಕ್ರಮ
ಟ್ರೆಕ್ಕಿಂಗ್‌ ತಾಣಕ್ಕೆ ಭೇಟಿ, ಹೆದ್ದಾರಿ ನಡುವೆ ಪ್ರಕೃತಿ ಆಸ್ವಾದನೆಗೆಂದು ವಾಹನ ನಿಲ್ಲಿಸಿದರೂ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿ, ಸೇತುವೆ ಮೇಲೆ, ರಸ್ತೆ ಮೇಲೆ ನೀರು ಬಂದರೆ, ಕುಸಿತ ಜಾಗಗಳಲ್ಲಿ, ಅಪಾಯಕಾರಿ ಸ್ಥಳಗಳಲ್ಲಿ ಮುನ್ನೆಚ್ಚರಿಕೆ ಫ‌ಲಕ ಅಳವಡಿಸಲಾಗುವುದು. ಇದನ್ನು ಮೀರಿ ವರ್ತಿಸಿದರೆ ಪ್ಯಾಟ್ರೋಲಿಂಗ್‌ ಪೊಲೀಸರು ಕಠಿ‌ಣ ಕ್ರಮ ಕೈಗೊಳ್ಳುತ್ತಾರೆ. ಸಾರ್ವಜನಿಕರು ಕೂಡ ಅಪಾಯಕಾರಿ ಸ್ಥಳಗಳು ಕಂಡುಬಂದರೆ ಕೂಡಲೇ ಜಿಲ್ಲಾಡಳಿತ ಕಂಟ್ರೋಲ್‌ ರೂಂ (1077) ಅಥವಾ ಪೊಲೀಸ್‌ ಕಂಟ್ರೋಲ್‌ ರೂಂ (112)ಗೆ ಮಾಹಿತಿ ನೀಡಬಹುದು ಎಂದು ದ.ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್‌ ತಿಳಿಸಿದ್ದಾರೆ.

ಭಾರಿ ಮಳೆ ವೇಳೆ ಕ್ಷೇತ್ರ ಭೇಟಿ ಬೇಡ: ಭಾರೀ ಮಳೆ ಇರುವಾಗ ಜನರು ಆದಷ್ಟೂ ದೇವಸ್ಥಾನಗಳಿಗೆ ಭೇಟಿ ನೀಡದಿರುವುದು ಸೂಕ್ತ. ಅನಿವಾರ್ಯವಾಗಿ ಆಗಮಿಸಿದರೂ ನದಿಗೆ ಇಳಿಯುವುದು, ಸೆಲ್ಫಿ ತೆಗೆಯುವುದು ಇತ್ಯಾದಿ ಮಾಡಬೇಡಿ. ಮೀರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕನ್ನಡ ಜಿಲ್ಲಾ ಎಸ್ಪಿ ರಿಷ್ಯಂತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next