ಶಿವಮೊಗ್ಗ: ಅವಳಿ ಜಿಲ್ಲೆಗಳಾದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಗಡಿ ಪ್ರದೇಶದಲ್ಲಿರುವ ಭದ್ರಾ ಜಲಾಶಯದ ಸುತ್ತಮುತ್ತಲ ಪ್ರದೇಶವನ್ನು ಪ್ರವಾಸಿ ತಾಣವಾಗಿ ರೂಪಿಸಲು ಸರ್ಕಾರ ಈಗಾಗಲೇ 13ಕೋಟಿ ರೂ. ಮಂಜೂರು ಮಾಡಿದೆ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ತಿಳಿಸಿದರು.
ಸೋಮವಾರ ಭದ್ರಾ ಜಲಾಶಯ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬಹುದಾದ ಪ್ರದೇಶಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಹಾಗೂ ಇಂಜಿನಿಯರರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಇಲ್ಲಿರುವ 182 ಎಕರೆ ಪ್ರದೇಶದಲ್ಲಿ 105 ಎಕರೆ ಭೂಮಿ ಅಭಿವೃದ್ಧಿಪಡಿಸಲು ಕಾಯ್ದಿರಿಸಿದ್ದು, ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಅಂದಾಜು 100 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸುವಂತೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಬಿಡುಗಡೆಯಾಗಿರುವ ಅನುದಾನವನ್ನು ಬಳಸಿಕೊಂಡು ಅತ್ಯಲ್ಪ ಅವಧಿ ಅಂದರೆ 8-10 ಗಳೊಳಗಾಗಿ
ಕೈಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಮುಖ್ಯಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಪ್ರವಾಸಿ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರದಿಂದ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ಅಲ್ಲದೇ ಪ್ರಸ್ತುತ ಬಿಆರ್ಪಿಯ ಜಂಗಲ್ ರೆಸಾರ್ಟ್ಗೆ 23 ಎಕರೆ ಪ್ರದೇಶ ನಿಗದಿಪಡಿಸಲಾಗಿದೆ. ಇದಲ್ಲದೆ ಶಿವಮೊಗ್ಗದ ಶಿವಪ್ಪನಾಯಕನ ಬೇಸಿಗೆ ಅರಮನೆ, ಕೋಟೆ ದೇವಸ್ಥಾನ, ಜೋಗ ಹಾಗೂ ಜಿಲ್ಲೆಯ ಮತ್ತಿತರ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಖುದ್ದು ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್, ಮಂಜುನಾಥಗೌಡ, ಜಿಪಂ ಸದಸ್ಯ ಯೋಗೀಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಹನುಮಾನಾಯ್ಕ, ರೇಷ್ಮೇ ಇಲಾಖೆ ಅಧಿಕಾರಿಗಳು-ಸಿಬ್ಬಂದಿ ಇದ್ದರು.