Advertisement

ಕೋವಿಡ್ ಆತಂಕದ ನಡುವೆಯೂ ಕೊಡಗಿನ ಪ್ರವಾಸಿತಾಣಗಳಲ್ಲಿ ಪ್ರವಾಸಿಗರ ದಂಡು

07:06 PM Dec 26, 2020 | sudhir |

ಮಡಿಕೇರಿ  : ಕೋವಿಡ್ ನಿರ್ಬಂಧಗಳು ಮತ್ತು ಆತಂಕದ ನಡುವೆಯೂ ದಕ್ಷಿಣ ಕಾಶ್ಮೀರ ಕೊಡಗು ಜಿಲ್ಲೆಗೆ ಪ್ರವಾಸಿಗರ ದಂಡು ಹರಿದು ಬರತೊಡಗಿದೆ. ಕ್ರಿಸ್‍ಮಸ್ ಸಾಲು ಸಾಲು ರಜೆ ಹಾಗೂ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳ ಪ್ರವಾಸಿಗರು ಕೊಡಗಿಗೆ ಲಗ್ಗೆ ಇಟ್ಟಿದ್ದಾರೆ.

Advertisement

ಮಡಿಕೇರಿಯ ರಾಜಾಸೀಟು, ಅಬ್ಬಿಫಾಲ್ಸ್, ಮಾಂದಲ್ ಪಟ್ಟಿ, ಕುಶಾಲನಗರದ ದುಬಾರೆ, ಕಾವೇರಿ ನಿಸರ್ಗಧಾಮ, ಸೋಮವಾರಪೇಟೆಯ ಮಲ್ಲಳ್ಳಿ ಜಲಪಾತ ಸೇರಿದಂತೆ ಎಲ್ಲೆಡೆ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿ ರಜೆಯ ದಿನಗಳನ್ನು ಕಳೆಯುತ್ತಿದ್ದಾರೆ. ಬೆಂಗಳೂರು, ಮೈಸೂರು, ಕೇರಳ, ತಮಿಳುನಾಡು, ತೆಲಂಗಾಣ ಮತ್ತಿತ್ತರ ಕಡೆಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ನಗರ, ಪಟ್ಟಣದ ರಸ್ತೆಗಳಲ್ಲಿ ವಾಹನದಟ್ಟಣೆ ಕಂಡು ಬಂದಿದ್ದು, ಹೋಂಸ್ಟೇ, ಲಾಡ್ಜ್‍ಗಳು ಪ್ರವಾಸಿಗರಿಂದ ಭರ್ತಿಯಾಗುತ್ತಿವೆ. ಹೊಟೇಲ್, ಬಾರ್ ಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆ.
ಪ್ರಕೃತಿ ರಮಣೀಯ ಮಡಿಕೇರಿಯ ರಾಜಾಸೀಟು ಉದ್ಯಾನವನದಲ್ಲಿ ಕಾಲಿಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ಸಂಜೆ ವೇಳೆಯಲ್ಲಿ ಕಂಡು ಬಂದಿದೆ. ಮಹಾಮಳೆ ಹಾನಿ ಮತ್ತು ಲಾಕ್‍ಡೌನ್ ನಂತರ ಮತ್ತೆ ಪ್ರವಾಸೋದ್ಯಮ ಚೇತರಿಕೆ ಕಾಣುತ್ತಿರುವ ಬಗ್ಗೆ ಪ್ರವಾಸೋದ್ಯಮದಲ್ಲಿ ತೊಡಗಿರುವವರು, ವರ್ತಕರು, ಟ್ಯಾಕ್ಸಿ, ಆಟೋಚಾಲಕರು, ಹೊಟೇಲ್ ಉದ್ಯಮಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ.

 ಕೋವಿಡ್ ಗೆ ಡೋಂಟ್ ಕೇರ್
ಪ್ರವಾಸಿಗರ ಆಗಮನ ಮತ್ತು ಮಾರ್ಗಸೂಚಿಯ ಉಲ್ಲಂಘನೆಯನ್ನು ಗಮನಿಸಿದರೆ ಪ್ರವಾಸಿಗರಲ್ಲಿ ಕೋವಿಡ್ ಆತಂಕವೇ ಇಲ್ಲ ಎಂಬಂತ್ತಾಗಿದೆ. ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಅತ್ಯಂತ ಕಡಿಮೆ ಇದೆ. ಇದೇ ಕಾರಣಕ್ಕೆ ಪ್ರವಾಸಿಗರು ತಮ್ಮ ಸುರಕ್ಷಿತ ಪ್ರವಾಸಕ್ಕಾಗಿ ಈ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಅಭಿಪ್ರಾಯವಿದೆ. ಪ್ರವಾಸಿಗರು ಮೋಜು ಮಸ್ತಿಯಲ್ಲಿ ಮೈ ಮರೆತಿದ್ದು, ಬಹುತೇಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ ನಿರ್ಲಕ್ಷ್ಯ ವಹಿಸುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ:ಧರ್ಮಸ್ಥಳ: ಜನರ ಆಕರ್ಷಣೆಯ ಪರಿಸರ ಸ್ನೇಹಿ ಹೈಡ್ರಾಲಿಕ್‌ ಎತ್ತಿನಗಾಡಿ! ಆನಂದ್ ಮಹೀಂದ್ರ Tweet

Advertisement

ಕೋವಿಡ್ ನಿಯಂತ್ರಣದಲ್ಲಿರುವ ಕೊಡಗಿನಲ್ಲಿ ಪ್ರವಾಸಿಗರಿಂದ ಮತ್ತೆ ಸೋಂಕು ಹೆಚ್ಚಾಗುವ ಆತಂಕ ಜಿಲ್ಲೆಯ ಜನರನ್ನು ಕಾಡುತ್ತಿದೆ. ಮಡಿಕೇರಿ ರಾಜಾಸೀಟಿನಲ್ಲಿ ಕೊರೊನಾ ನಿಯಮಗಳನ್ನು ಪಾಲಿಸದ ಪ್ರವಾಸಿಗರಿಗೆ ನಗರ ಪೊಲೀಸರು ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದ ಪ್ರಸಂಗವೂ ನಡೆಯಿತು.

ಹೊಸ ವರ್ಷಾಚರಣೆಗೆ ಸಂಬಂಧಪಟ್ಟಂತೆ ಬೆಂಗಳೂರು, ಮೈಸೂರು ಮಹಾನಗರಗಳಲ್ಲಿ ನಿರ್ಬಂಧ ಹೇರುವ ಸಾಧ್ಯತೆಗಳಿರುವುದರಿಂದ ಹೆಚ್ಚಿನ ಪ್ರವಾಸಿಗರು ಕೊಡಗು ಜಿಲ್ಲೆಯೆಡೆಗೆ ಮುಖ ಮಾಡಿದ್ದಾರೆ. ವಿವಿಧ ರೆಸಾರ್ಟ್‍ಗಳು, ಹೋಂಸ್ಟೇಗಳನ್ನು ಕೂಡ ಮುಂಗಡವಾಗಿ ಬುಕಿಂಗ್ ಮಾಡಲಾಗಿರುವ ಬಗ್ಗೆಯೂ ಮಾಹಿತಿ ಲಭಿಸಿದೆ. ಜಿಲ್ಲಾಡಳಿತ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರೆಸಾರ್ಟ್, ಹೋಂ ಸ್ಟೇ, ಲಾಡ್ಜ್ ಹಾಗೂ ಹೊಟೇಲ್‍ಗಳಿಗೂ ಸೂಚಿಸಿದೆ. ಹೊಸ ವರ್ಷಾಚರಣೆಯ ನೆಪದಲ್ಲಿ ಹೆಚ್ಚು ಜನ ಸೇರುವುದನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿಯಂತ್ರಿಸಬೇಕು ಮತ್ತು ನಿರ್ಬಂಧಗಳನ್ನು ಹೇರಬೇಕು ಎಂದು ಜಿಲ್ಲೆಯ ಜನ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next