Advertisement

Tourism: ಗದಗ-ಬೆಳಗಾವಿ-ಚಿತ್ರದುರ್ಗ ಪ್ರವಾಸೋದ್ಯಮಕ್ಕೆ ಬಲ

05:11 PM Sep 08, 2023 | Team Udayavani |

ಗದಗ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಪ್ರಪ್ರಥಮ ಬಾರಿಗೆ ಉತ್ತರ ಕರ್ನಾಟಕದ ಧಾರ್ಮಿಕ ಶಕ್ತಿಕೇಂದ್ರ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ, ಗದಗ ಜಿಲ್ಲೆಯ ಐತಿಹಾಸಿಕ  ಲಕ್ಕುಂಡಿ, ಚಿತ್ರದುರ್ಗ ಪ್ರವಾಸಿ ಸ್ಥಳಗಳಿಗೆ ಹೊಸದಾಗಿ ಪ್ರವಾಸ ಕಾರ್ಯಕ್ರಮ ಆಯೋಜಿಸಿದ್ದು,ಮೂರೂ ಜಿಲ್ಲೆಗಳ ಪ್ರವಾಸೋದ್ಯಮಕ್ಕೆ ಆನೆ ಬಲ ಬಂದಂತಾಗಿದೆ.

Advertisement

ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ಪ್ರವಾಸಿಗರ ಬುಕ್ಕಿಂಗ್‌ ಆದ ನಂತರ ಪ್ರವಾಸ ಆರಂಭಿಸಲು ಚಿಂತನೆ ನಡೆಸಿದೆ. ಪ್ರತಿ ವಾರದ ಶುಕ್ರವಾರದಿಂದ 3 ದಿನಗಳ ಕಾಲ ಪ್ರವಾಸಿ ತಾಣಗಳ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ರತಿ ವ್ಯಕ್ತಿಗೆ 5,920 ರೂ. ಪ್ರೋತ್ಸಾಹ ದರದೊಂದಿಗೆ ಉಚಿತ ಊಟ, ವಸತಿ ಒಳಗೊಂಡಿದೆ. ಬೆಳಗಾವಿ ಜಿಲ್ಲೆ ಸವದತ್ತಿಯ ಶಕ್ತಿದೇವತೆ ಯಲ್ಲಮ್ಮನ ಕ್ಷೇತ್ರ ಭಕ್ತಿ-ಆರಾಧನೆಯ ಶ್ರದ್ಧಾ ಕೇಂದ್ರವಾಗಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿ ಪಕ್ಕದ ಮಹಾರಾಷ್ಟ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರಿದ್ದಾರೆ.

ಇನ್ನು ಗದಗ ಜಿಲ್ಲೆಯ ನೈಸರ್ಗಿಕ ಸಂಪತ್ತು ಮತ್ತು ಪಾರಂಪರಿಕ ಸ್ಥಳಗಳಿಗೆ ವಿಶೇಷ ಸ್ಥಾನಮಾನವಿದೆ. ಜಿಲ್ಲೆಯ ಕಪ್ಪತಗುಡ್ಡ,
ಲಕ್ಕುಂಡಿ, ಡಂಬಳ, ಮಾಗಡಿ ಕೆರೆ, ತ್ರಿಕೂಟೇಶ್ವರ ದೇವಾಲಯ, ವೀರನಾರಾಯಣ ದೇವಸ್ಥಾನ, ಶಿರಹಟ್ಟಿಯ ಭಾವೈಕ್ಯತೆಯ ಕೇಂದ್ರ ಮುಂತಾದವುಗಳು ಪ್ರವಾಸಿ ಕೇಂದ್ರಗಳಾಗಿವೆ.

ಪ್ರಸ್ತುತ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ಡಾ|ಎಚ್‌.ಕೆ. ಪಾಟೀಲ ಪ್ರವಾಸೋದ್ಯಮ ಸಚಿವರಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದು ಉತ್ತರ ಕರ್ನಾಟಕದ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದರು. ಅದರ ಭಾಗವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮೂಲಕ ಉತ್ತರ ಕರ್ನಾಟಕದ ಪ್ರವಾಸಿ ತಾಣಗಳನ್ನು ಪರಿಚಯಿಸಲು ಮುಂದಡಿ ಇಟ್ಟಿದ್ದಾರೆ.

Advertisement

ಇದರಿಂದ ಗದಗ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಇಂದು ಬಲ ಸಿಕ್ಕಂತಾಗಿದೆ. ಕ್ಷೇತ್ರಗಳ ಪರಿಚಯ ಜತೆಗೆ ಉದ್ಯಮ-ಉದ್ಯೋಗ
ಸೃಷ್ಟಿಯಾಗುತ್ತವೆ ಎನ್ನಲಾಗುತ್ತದೆ. ಈಗಾಗಲೇ ಸಚಿವ ಎಚ್‌.ಕೆ. ಪಾಟೀಲ ಅವರು ಹಿರಿಯ ಅಧಿಕಾರಿ ಮನೋಜಕುಮಾರ ನೇತೃತ್ವದಲ್ಲಿ ಗದಗ ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಸಮಿತಿ ರಚಿಸಿ ಅವರಿಂದ 804 ಕೋಟಿ ರೂ. ಅಂದಾಜು ವೆಚ್ಚದ ಜಿಲ್ಲಾ ಪ್ರವಾಸೋದ್ಯಮ ಸಮಗ್ರ ಅಭಿವೃದ್ಧಿ ಯೋಜನೆಯ ವರದಿ ಪಡೆದಿದ್ದಾರೆ. ಜಿಲ್ಲೆಯ ಪ್ರಮುಖ ತಾಣಗಳು ಯುನೆಸ್ಕೋದ ಪಾರಂಪರಿಕ ಪಟ್ಟಿಯಲ್ಲಿ ಬರುವ ವೈಶಿಷ್ಟ್ಯತೆ ಹೊಂದಿರುವುದು ವಿಶೇಷ.

ಪ್ರವಾಸಿ ಮಾರ್ಗ
ಪ್ರತಿ ವಾರ ಶುಕ್ರವಾರದಂದು ರಾತ್ರಿ 7ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 5ಕ್ಕೆ ಹುಬ್ಬಳ್ಳಿ ತಲುಪಿ ಫ್ರೆಶ್‌
-ಅಪ್‌, ಉಪಾಹಾರ ನಂತರ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ಕರೆದೊಯ್ಯಲಾಗುತ್ತದೆ.

ನಂತರ ಮಧ್ಯಾಹ್ನ ಊಟ, ಅಲ್ಲಿಂದ ಗದಗ ಜಿಲ್ಲೆಯ ಲಕ್ಕುಂಡಿಯ ಮ್ಯೂಸಿಯಂ, ಜೈನ ದೇವಸ್ಥಾನ, ನನ್ನೇಶ್ವರ, ವೀರಭದ್ರೇಶ್ವರ, ಮಣಿಕೇಶ್ವರ ದೇವಸ್ಥಾನ, ಮುಸುಕಿನ ಬಾವಿ ವೀಕ್ಷಣೆ, ಅಲ್ಲಿಂದ ಗದಗ ನಗರದ ಐತಿಹಾಸಿಕ ವೀರನಾರಾಯಣ, ತ್ರಿಕೂಟೇಶ್ವರ ದೇವಸ್ಥಾನ ವೀಕ್ಷಣೆ ಮಾಡಿದ ನಂತರ ಊಟದ ವ್ಯವಸ್ಥೆ ಇರುತ್ತದೆ. ಅಲ್ಲಿಂದ ಚಿತ್ರದುರ್ಗ ಹೋಟೆಲ್‌ನಲ್ಲಿ ವಾಸ್ತವ್ಯ. ಮರುದಿನ ಬೆಳಿಗ್ಗೆ ಉಪಾಹಾರ ನಂತರ ಚಿತ್ರದುರ್ಗದ ಕೋಟೆ, ಚಂದ್ರವಳ್ಳಿ ಕೇವ್ಸ್‌ ನಂತರ ಮಧ್ಯಾಹ್ನ ಊಟ. ಅಲ್ಲಿಂದ ವಾಣಿ ವಿಲಾಸ್‌ ಸಾಗರ ಅಣೆಕಟ್ಟು ವೀಕ್ಷಣೆ ನಂತರ ರಾತ್ರಿ 8ಕ್ಕೆ ಬೆಂಗಳೂರು ತಲುಪುವುದಾಗಿದೆ.

ಬುಕ್ಕಿಂಗ್‌ ಸೌಲಭ್ಯ
ಪ್ರವಾಸದ ಸದುಪಯೋಗ ಪಡೆಯಲು ಮತ್ತು ಬುಕ್ಕಿಂಗ್‌ ಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
ಯಶವಂತಪುರದ ಕೇಂದ್ರ ಕಚೇರಿಯ ಬುಕ್ಕಿಂಗ್‌ ಕೌಂಟರ್‌, ಮೈಸೂರು ಸಾರಿಗೆ ವಿಭಾಗದ ಬುಕ್ಕಿಂಗ್‌ ಕೌಂಟರ್‌, ಕೆಂಪೇಗೌಡ
ಬುಕ್ಕಿಂಗ್‌ ಕೌಂಟರ್‌, ರೆಡ್‌ಬಸ್‌ ಪೋರ್ಟಲ್‌, ಕೆಎಸ್‌ಆರ್‌ ಟಿಸಿ ಅವತಾರ ಹಾಗೂ ನಿಗಮದ ಅಧಿಕೃತ ಟ್ರಾವೆಲ್‌ ಏಜೆಂಟ್‌ ಗಳ ಮುಖಾಂತರ ಬುಕ್ಕಿಂಗ್‌ ಮಾಡಿಕೊಳ್ಳಬಹುದಾಗಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ ಹೈದ್ರಾಬಾದ್‌ ಹಾಗೂ ಸವದತ್ತಿ ಪ್ರವಾಸಿ ಸ್ಥಳಗಳಿಗೆ ಹೊಸದಾಗಿ ವ್ಯವಸ್ಥಿತ ಪ್ರವಾಸ ಕಾರ್ಯಕ್ರಮ ಆಯೋಜಿಸಲು ಕ್ರಮ ಕೈಗೊಂಡಿದ್ದು, ಪ್ರಚಾರ ಕಾರ್ಯ ನಡೆದಿದೆ. ಬುಕ್ಕಿಂಗ್‌ ಆಧರಿಸಿ ಪ್ರವಾಸದ ದಿನಗಳನ್ನು ಪ್ರಕಟಿಸಲಾಗುವುದು.
*ಜಿ. ಜಗದೀಶ, ವ್ಯವಸ್ಥಾಪಕ ನಿರ್ದೇಶಕರು,
ಪ್ರವಾಸೋದ್ಯಮ ಅಭಿವೃದ್ಧಿ ನಿಗಮ

*ಅರುಣಕುಮಾರ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next