Advertisement

ಮ್ಯೂಸಿಯಂ ಆಗಲಿದೆ ಹಳೆ ಡಿಸಿ ಕಚೇರಿ: ಪ್ರವಾಸೋದ್ಯಮ ಇಲಾಖೆ ಪರಿಶೀಲನೆ

03:12 PM Jun 20, 2024 | Team Udayavani |

ಮಹಾನಗರ: ನಾನ್ನೂರು ವರ್ಷಕ್ಕೂ ಹಳೆಯ ದ.ಕ. ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಸಂಕೀರ್ಣ ವನ್ನು ಪಾರಂಪರಿಕ ಕಟ್ಟಡವಾಗಿ ಉಳಿಸಿಕೊಂಡು ಮ್ಯೂಸಿಯಂ ಆಗಿ ಅಭಿವೃದ್ಧಿ ಪಡಿಸುವ ಬಗ್ಗೆ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ. ಪುರಾತತ್ವ, ಸಂಗ್ರಹಾಲ
ಯಗಳು ಮತ್ತು ಪರಂಪರೆ ಇಲಾಖೆಗೆ ಈ ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿ ಸಂರಕ್ಷಿಸುವ ಕುರಿತು ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಪ್ರವಾಸೋದ್ಯಮ ಇಲಾಖೆ ಪರಿಶೀಲನೆ ನಡೆಸುತ್ತಿದೆ.

Advertisement

ಪ್ರಸ್ತುತ ಈ ಕಟ್ಟಡದ ಮುಖ್ಯ ಭಾಗದಲ್ಲಿ ಯಾವುದೇ ಇಲಾಖೆಗಳೂ ಕಾರ್ಯಾಚರಿಸುತ್ತಿಲ್ಲ, ಒಂದು ಭಾಗದಲ್ಲಿ ಮಾತ್ರವೇ ಗ್ರಂಥಾಲಯಾಧಿಕಾರಿ, ನೋಂದಣಿ ಅಧಿಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಉಳಿದಂತೆ ಬಹುತೇಕ ಎಲ್ಲ ಭಾಗಗಳೂ ನಿರ್ವಹಣೆಯಿಲ್ಲದೆ ಜೀರ್ಣಾವಸ್ಥೆ ತಲಪಿವೆ. ಆದರೂ ನಾಲ್ಕು ಶತಮಾನಗಳ ಹಳೆಯ ವೈಭವವನ್ನು ಸಾರುವಂತಹ ವಾಸ್ತು ಶೈಲಿ, ಕೆಂಬಣ್ಣದ ಆಕರ್ಷಕ ವಿನ್ಯಾಸದಿಂದ ಗಮನ ಸೆಳೆಯುವ ಈ ಕಟ್ಟಡ ಪಾರಂಪರಿಕವಾಗುವುದಕ್ಕೆ ದೊಡ್ಡ ಮೊತ್ತ ಬೇಕಾಗಿದ್ದು ಅದಕ್ಕಾಗಿ ಹುಡುಕಾಟ ನಡೆದಿದೆ.

ಇನ್ನೂ ಕೆಲವು ವರ್ಷಗಳು ಕಳೆದರೆ ಕಟ್ಟಡದ ಮಾಡು ಪೂರ್ತಿ ಕುಸಿದು, ಒಳಗೆ ಕಾಡು ಬೆಳೆಯುವ ಎಲ್ಲ ಸಾಧ್ಯತೆಯಿದ್ದು ಅದಕ್ಕೆ ಮೊದಲೇ ಸುಧಾರಣ ಯೋಜನೆ ಕಾರ್ಯಗತಗೊಳಿಸಬೇಕಿದೆ. ಸದ್ಯ ಸ್ಥಳೀಯ ಕಚೇರಿ ಕೆಲವರು ಕಟ್ಟಡದೊಳಗೆ ದ್ವಿಚಕ್ರ ವಾಹನ ಪಾರ್ಕಿಂಗ್‌ ಮಾಡಿಕೊಂಡಿರುವುದು ಬಿಟ್ಟರೆ ಬೇರೆ ಯಾವ ಕೆಲಸವೂ ಆಗುತ್ತಿಲ್ಲ. ಮಂಗಳೂರನ್ನಾಳಿದ್ದ ಬಂಗರಸರಿಂದ ಅರಮನೆಯಾಗಿ ನಿರ್ಮಾಣವಾಗಿದ್ದ ಈ ಕಟ್ಟಡ ಟಿಪ್ಪುಸುಲ್ತಾನ್‌ ಅಧೀನಕ್ಕೆ ಬಂದಿತ್ತು, ಟಿಪ್ಪು ಮರಣಾನಂತರ ದ.ಕ. ಜಿಲ್ಲೆಯ ಮೊದಲ ಜಿಲ್ಲಾ ಕಲೆಕ್ಟರ್‌ ಮೇಜರ್‌ ಥಾಮಸ್‌ ಮುನ್ರೊ ತನ್ನ ಕಚೇರಿಯಾಗಿ ಪರಿವರ್ತಿಸಿಕೊಂಡಿದ್ದರು ಎನ್ನುವುದು ಚಾರಿತ್ರಿಕ ಮಾಹಿತಿ.

ಈ ಕಟ್ಟಡದ ಹೊರಗೋಡೆಯಲ್ಲಿ ಜಿಲ್ಲೆಯಿಂದ ವಿಶ್ವ ಮಹಾಯುದ್ಧದಲ್ಲಿ ಪಾಲ್ಗೊಂಡವರ ಬಗ್ಗೆ ಉಲ್ಲೇಖವಿದ್ದು, ಅವರ ನೆನಪಿಗಾಗಿ ಸ್ಮಾರಕವನ್ನೂ ನಿರ್ಮಿಸಲಾಗಿದೆ. ಹಾಗಾಗಿ ಐತಿಹಾಸಿಕ ಮಹತ್ವದ ಕಟ್ಟಡವೂ ಹೌದು. ಈ ಹಳೆ ಕಟ್ಟಡದ ಕಲಾತ್ಮಕತೆ ಹೆಚ್ಚಿಸುವ ನಿಟ್ಟಿನಲ್ಲಿ ಇದನ್ನು ಶಾಶ್ವತ ಕಲಾ ಗ್ಯಾಲರಿಯಾಗಿ ಅಭಿವೃದ್ಧಿ ಪಡಿಸಬಹುದು ಎನ್ನುವ ಸಲಹೆಯನ್ನು ಜಿಲ್ಲೆಯ ಚಿತ್ರಕಲಾವಿದರೂ ಹಿಂದೆ ನೀಡಿದ್ದರು.

ಕಟ್ಟಡ ಹಸ್ತಾಂತರ ಮಾಡಿಲ್ಲ
ಪ್ರಸ್ತುತ ಕಟ್ಟಡ ನಮ್ಮಲ್ಲೇ ಇದೆ, ಇನ್ನೂ ಯಾರಿಗೂ ಹಸ್ತಾಂತರ ಮಾಡಿಲ್ಲ. ಕಟ್ಟಡವನ್ನು ಪಾರಂಪರಿಕ ಕಟ್ಟಡವಾಗಿರಿಸಿಕೊಂಡು ಮ್ಯೂಸಿಯಂ ಮಾಡುವ ಯೋಜನೆ ಇದೆ. ಹೇಗೆ ಇದನ್ನು ಕಾರ್ಯಗತಗೊಳಿಸಬೇಕೆನ್ನುವುದು
ಅಂತಿಮಗೊಂಡಿಲ್ಲ, ಈ ಬಗ್ಗೆ ಆಸಕ್ತರಿಂದ ಮಾಹಿತಿಯನ್ನೂ ಕೇಳುತ್ತಿದ್ದೇವೆ.
*ಮುಲ್ಲೈ ಮುಗಿಲನ್‌, ಜಿಲ್ಲಾಧಿಕಾರಿ, ದ.ಕ.

Advertisement
Advertisement

Udayavani is now on Telegram. Click here to join our channel and stay updated with the latest news.

Next