ಹೊಸದಿಲ್ಲಿ : ”ಪಾಕಿಸ್ಥಾನದಲ್ಲಿ ಉಗ್ರರ ಸುರಕ್ಷಿತ ತಾಣಗಳಿರುವುದನ್ನು ಅಮೆರಿಕ ಎಷ್ಟು ಮಾತ್ರಕ್ಕೂ ಸಹಿಸದು; ಪಾಕಿಸ್ಥಾನ ತನ್ನ ನೆಲದಲ್ಲಿನ ಉಗ್ರರ ತಾಣಗಳನ್ನು ಸಂಪೂರ್ಣವಾಗಿ ನಾಶಪಡಿಸಬೇಕು ಮತ್ತು ತನ್ನ ನೆಲದಿಂದ ಉಗ್ರ ಚಟುವಟಿಕೆಗಳು ಹೊರಹೊಮ್ಮುವುದನ್ನು ನಿಲ್ಲಿಸಬೇಕು” ಎಂದು ಅಮೆರಿಕದ ವಿದೇಶ ಸಚಿವ ರೆಕ್ಸ್ ಟಿಲರ್‌ಸನ್ ಪಾಕಿಸ್ಥಾನಕ್ಕೆ ಅತ್ಯಂತ ಕಟು ಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ.
ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಭಾರತ ಮತ್ತು ಅಮೆರಿಕ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುತ್ತಿವೆ. ಪಾಕಿಸ್ಥಾನ ಕೂಡ ಉಗ್ರ ನಿಗ್ರಹ ಕಾರ್ಯಾಚರಣೆಯಲ್ಲಿ ಭಾರತದೊಂದಿಗೆ ಸಹಕರಿಸಬೇಕು ಎಂದು ಟಿಲರ್‌ಸನ್ ಹೇಳಿದರು.
ಭಾರತ -ಅಮೆರಿಕ ದ್ವಿಪಕ್ಷೀಯ ಸಂಬಂಧ ಹೊಸ ಎತ್ತರಕ್ಕೆ ಏರಿರುವುದನ್ನು ಸ್ವಾಗತಿಸಿದ ಟಿಲರ್‌ಸನ್, ಉಭಯ ದೇಶಗಳ ಭದ್ರತಾ ಕಳಕಳಿಗಳು ಸಮಾನವಾಗಿದ್ದು ಆ ನೆಲೆಯಲ್ಲಿ ಅವು ಸಹಜ ಮಿತ್ರ ದೇಶಗಳಾಗಿವೆ ಎಂದು ಹೇಳಿದರು.
ಅಮೆರಿಕ-ಅಫ್ಘಾನಿಸ್ಥಾನ ವ್ಯೂಹಗಾರಿಕೆಯಲ್ಲಿ ಭಾರತ ನಿರ್ಣಾಯಕವಾಗಿದೆ ಎಂದ ಟಿಲರ್‌ಸನ್, ಭಾರತೀಯ ಉಪಖಂಡದಲ್ಲಿ ಹೊಸದಿಲ್ಲಿಯು ನಾಯಕನಾಗಿದೆ ಎಂದು ವರ್ಣಿಸಿದರು.
ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಅವರೊಂದಿಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಿಲರ್‌ಸನ್, ಪಾಕಿಸ್ಥಾನದಿಂದ ನಮಗಿರುವ ನಿರೀಕ್ಷೆಗಳನ್ನು ನಾವು ಇಸ್ಲಾಮಾಬಾದ್ ಗೆ ತಿಳಿಸಿದ್ದೇವೆ. ಪಾಕ್ ಜತೆಗೆ ಅಮೆರಿಕ ಧನಾತ್ಮಕವಾಗಿ ಕೆಲಸ ಮಾಡಲು ಬಯಸಿದೆ. ಇದು ಪಾಕಿಸ್ಥಾನದ ದೀರ್ಘಾವಧಿಯ ಹಿತಾಸಕ್ತಿಗೆ ಅನುಕೂಲಿಸಲಿದೆ ಎಂದು ಹೇಳಿದರು.