ನವರಸನಾಯಕ ಜಗ್ಗೇಶ್ ನಟನೆಗೆ ಮನ ಸೋಲದವರಿಲ್ಲ. ದೇಶ-ವಿದೇಶಗಳಲ್ಲೂ ಅವರ ಮೇಲಿನ ಅಭಿಮಾನಕ್ಕೆ ಪಾರವೇ ಇಲ್ಲ. ಸದ್ಯ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಅದರಲ್ಲೂ ಕನ್ನಡಿಗರು “ತೋತಾಪುರಿ’ ಸಿನಿ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಅರ್ಥಾತ್ “ತೋತಾಪುರಿ’ ಸಿನಿಮಾ ಹಾಗೂ “ಬಾಗ್ಲು ತೆಗಿ ಮೇರಿ ಜಾನ್’ ಹಾಡು ಸೂಪರ್ ಹಿಟ್ ಆಗಿರುವ ಖುಷಿ ಹಂಚಿಕೊಳ್ಳಲು ಸಾಕಷ್ಟು ಕನ್ನಡ ಕೂಟಗಳು ಬೃಹತ್ ವರ್ಚುಯಲ್ ಕಾಮಿಡಿ ಧಮಾಕಾ ಕಾರ್ಯಕ್ರಮ ನಡೆಸಲು ಯೋಜನೆ ಹಾಕಿಕೊಂಡಿದೆ.
ಕೆನಡಾದ “ಡ್ರೀಮ್ಸ್ ಮೀಡಿಯಾ’ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಸಿಂಚನ ಕನ್ನಡ ಬಳಗ, ಕಸ್ತೂರಿ ಕನ್ನಡ ಅಸೋಸಿಯೇಷನ್, ಹ್ಯಾರಿಸ್‌ಬರ್ಗ್ ಕನ್ನಡ ಕಸ್ತೂರಿ, ಮಲ್ಲಿಗೆ ಇಂಡಿಯಾ ಪೊಲೀಸ್, ನವೋದಯ, ಬೃಂದಾವನ ಕನ್ನಡ ಕೂಟ-ನ್ಯೂ ಜೆರ್ಸಿ, ಧನಿ ಮೀಡಿಯಾ, ನ್ಯೂಯಾರ್ಕ್ ಕನ್ನಡ ಕೂಟ, ಅಟ್ಲಾಂಟಾದ ನೃಪತುಂಗ, ಸಾಕ್ರಮೆಂಟೋ ಕನ್ನಡ ಸಂಘ ಸೇರಿದಂತೆ ಮೊದಲಾದ ಕನ್ನಡದ ಮನಸ್ಸುಗಳು ಒಟ್ಟಿಗೆ ಎದುರುಬದುರಾಗಲಿವೆ. ಭಾರತದಿಂದ “ತೋತಾಪುರಿ’ ಚಿತ್ರದ ನಾಯಕ ಜಗ್ಗೇಶ್ ಹಾಜರಿ ಹಾಕಲಿದ್ದಾರೆ.
ಭಾರತೀಯ ಕಾಲಮಾನ ಫೆಬ್ರವರಿ 13ರ ಬೆಳಗ್ಗೆ 8 ಗಂಟೆಗೆ ಈ ಕಾರ್ಯಕ್ರಮ ಶುರುವಾಗಲಿದೆ. ಅನಿವಾಸಿ ಕನ್ನಡಿಗರ ಪ್ರಶ್ನೆಗೆ ಜಗ್ಗೇಶ್ ಉತ್ತರವಾಗಲಿದ್ದು, ಅವರ ಕಾಮಿಡಿ ಝಲಕ್, “ತೋತಾಪುರಿ’ ಹಾಡು ಹಾಗೂ ಸಿನಿಮಾದ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಳ್ಳಲಿದ್ದಾರೆ ಜಗ್ಗೇಶ್. ಈಗಾಗಲೇ ದೇಶ-ವಿದೇಶಗಳಲ್ಲಿ “ತೋತಾಪುರಿ’ ಹಾಡು ಸಖತ್ ಹಿಟ್ ಆಗಿದ್ದು, ಮಿಲಿಯನ್‌ಗಟ್ಟಲೆ ಹಿಟ್ಸ್ ದಾಖಲಿಸಿ ಮುನ್ನುಗ್ಗುತ್ತಿದೆ. ಭಾನುವಾರ ನಡೆಯಲಿರುವ ಈ ಕಾರ್ಯಕ್ರಮ “ತೋತಾಪುರಿ’ ತಂಡದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ. ಈ ಕಾರ್ಯಕ್ರಮವನ್ನು ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ವಾಹಿನಿಗಳ ಮೂಲಕವೂ ಪ್ರಸಾರಗೊಳಿಸುವ ಆಲೋಚನೆ ಚಿತ್ರತಂಡಕ್ಕಿದೆ.
ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ಮೋನಿಫ್ಲಿಕ್ಸ್ ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ಕೆ.ಎ.ಸುರೇಶ್ “ತೋತಾಪುರಿ’ಗೆ ಬಂಡವಾಳ ಹೂಡಿದ್ದಾರೆ. ಅದಿತಿ ಪ್ರಭುದೇವ, “ಡಾಲಿ’ ಧನಂಜಯ್, ಸುಮನ್ ರಂಗನಾಥ್, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಮೊದಲಾದವರು ತಾರಾಬಳಗದಲ್ಲಿದ್ದಾರೆ.