ಬೆಳಗಾವಿ: ಜಿಲ್ಲೆಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಬಹು ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿದ್ದಾರೆ, ಕೆಲವು ಕಿಡಗೇಡಿಗಳು ಮರಾಠಿ ಮತ್ತು ಕನ್ನಡ ಭಾಷಿಕರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ, ಇದನ್ನು ನಾನು ತಿವ್ರವಾಗಿ ಖಂಡಿಸುತ್ತೇನೆ ಎಂದು ಅರಣ್ಯ ಹಾಗೂ ಆಹಾರ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ.
ಕೊರೊನಾ ಮಹಾಮಾರಿಯಿಂದ ಮೃತಪಟ್ಟ ಹುಕ್ಕೇರಿ ತಾಲೂಕಿನ 41 ಕುಟುಂಬಸ್ಥರಿಗೆ ತಲಾ ಒಂದು ಲಕ್ಷ ರೂಪಾಯಿ ಚೆಕ್ ವಿತರಿಸಿ ಹುಕ್ಕೇರಿ ಬಿಎಲ್‌ಡಿ ಬ್ಯಾಂಕಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಉಮೇಶ್ ಕತ್ತಿ, ರಾಜ್ಯ ಸರ್ಕಾರದ ವತಿಯಿಂದ ಕೊರೊನಾದಿಂದ ಮೃತ ಪಟ್ಟ ಹುಕ್ಕೇರಿ ತಾಲೂಕಿನ 41 ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಚೆಕ್ ವಿತರಿಸಲಾಗಿದೆ, ಕೇಂದ್ರ ಸರ್ಕಾರದಿಂದ ಇನ್ನೂ 50 ಸಾವಿರ ರೂಪಾಯಿ ಕೆಲವೆ ದಿನಗಳಲ್ಲಿ ಮೃತ ಪಟ್ಟವರ ಕುಟುಂಬಸ್ಥರ ಖಾತೆಗೆ ಜಮೆ ಆಗಲಿದೆ ಎಂದು ತಿಳಿಸಿದರು.
ಬಿ.ಪಿ.ಎಲ್ ಕಾರ್ಡ್ ದಾರರು ಯಾರಾದರೂ ಕೊರೊನಾದಿಂದ ಮೃತ ಪಟ್ಟಿದ್ದರೆ ಅವರ ಕುಟುಂಬಸ್ಥರು, ಸೂಕ್ತ ದಾಖಲೆ ಒದಗಿಸಿದರೆ ಅವರಿಗೂ ಕೂಡ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಹೇಳಿದರು.
ಬೆಳಗಾವಿಯಲ್ಲಿ ನಮ್ಮ ಸರ್ಕಾರ ಉತ್ತಮವಾಗಿ ಅಧಿವೇಶನ ನಡೆಸುತ್ತಿದೆ, ಅದನ್ನು ನೋಡಲಾಗದೆ ಕೆಲವು ಪುಂಡರು ಈ ಕೃತ್ಯ ಎಸಗಿದ್ದಾರೆ. ಈಗಾಗಲೇ ನಮ್ಮ ಪೋಲೀಸರು ಕೆಲವು ಪುಂಡರನ್ನು ಬಂಧಿಸಿದ್ದಾರೆ. ಇನ್ನುಳಿದವರನ್ನು ಕೂಡ ಆದಷ್ಟು ಬೇಗ ಬಂಧಿಸುವ ವಿಶ್ವಾಸ ಇದೆ ಎಂದರು.
ಉತ್ತರ ಕರ್ನಾಟಕ ಭಾಗದವರು ಇಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ, ಕೆಲವರ ವಿರೋಧದ ನಡುವೆಯೂ ನಮ್ಮ ಭಾಗದಲ್ಲಿ ಅಧಿವೇಶನ ನಡೆಸುತ್ತಿದ್ದಾರೆ. ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಆಗಬೇಕು ಎಂಬುವುದು ಮುಖ್ಯಮಂತ್ರಿ ಸೇರಿದಂತೆ ನಮ್ಮ ಆಶಯ ಆಗಿದೆ. ಆದರೆ ಕಾಂಗ್ರೆಸ್ ಪಕ್ಷದವರು ಕೇವಲ ಗದ್ದಲ ಗಲಾಟೆಗೆ ಸದನವನ್ನ ಸಿಮಿತಗೊಳಿಸಿ, ಮುಖ್ಯಮಂತ್ರಿಗಳ ಉತ್ತರ ಕೇಳುವ ಇಚ್ಛಾಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಸವರಾಜ್ ಬೊಮ್ಮಾಯಿಯವರುಸಮರ್ಥವಾಗಿ ಸರ್ಕಾರವನ್ನು ನಡೆಸುತ್ತಿದ್ದಾರೆ. 2023ರ ಚುನಾವಣೆಯನ್ನು ಬೋಮ್ಮಾಯಿಯವರ ನೇತೃತ್ವದಲ್ಲೆ ಎದುರಿಸಿ, ರಾಜ್ಯದಲ್ಲಿ 150 ಸೀಟು ಗೆಲ್ಲುತ್ತೆವೆ ಎಂದು ಸಚಿವ ಉಮೇಶ್ ಕತ್ತಿ ವಿಶ್ವಾಸ ವ್ಯಕ್ತಪಡಿಸಿದರು.