ನವದೆಹಲಿ: ಭಾರತೀಯ ಔದ್ಯಮಿಕ ರಂಗದಲ್ಲಿ ಹಾಗೂ ಉದ್ಯೋಗವಲಯದಲ್ಲಿ ಒಂದು ಆಶಾದಾಯಕ ಬದಲಾವಣೆ ಕಾಣಿಸುತ್ತಿದೆ. ಭಾರತೀಯ ಆರ್ಥಿಕತೆ ನಿಗಾ ಕೇಂದ್ರ (ಸಿಎಂಐಇ) ನೀಡಿದ ಮಾಹಿತಿಯ ಪ್ರಕಾರ, ಭಾರತದಲ್ಲಿನ ಉದ್ಯೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.
ಈ ಅಕ್ಟೋಬರ್ ಮುಗಿಯುವ ಹೊತ್ತಿಗೆ ಕೊರೊನಾಪೂರ್ವ ಅವಧಿಯಲ್ಲಿ ಇದ್ದಿದ್ದಕ್ಕಿಂತ ಹೆಚ್ಚು ಮಂದಿ ಉದ್ಯೋಗಸ್ಥರಾಗಿರುತ್ತಾರೆ. ಈ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಉದ್ಯೋಗಿಗಳ ಸಂಖ್ಯೆಯಲ್ಲಿ ಆಗಿರುವ ಏರಿಕೆಯೇ ಈ ಭರವಸೆಗೆ ಕಾರಣ.
2019ರ ಡಿಸೆಂಬರ್‌ನಲ್ಲಿ ಭಾರತದಲ್ಲಿ ಉದ್ಯೋಗಿಗಳ ಸಂಖ್ಯೆ ಚೆನ್ನಾಗಿಯೇ ಇತ್ತು. ಅದಾದ ನಂತರ ಕೊರೊನಾ ಹಿನ್ನೆಲೆಯಲ್ಲಿ 2020ರಲ್ಲಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದರು. ಇದೀಗ ಪರಿಸ್ಥಿತಿ ಚೇತರಿಸುತ್ತಿದೆ.
ಬರೀ ಸೆಪ್ಟೆಂಬರ್ ತಿಂಗಳೊಂದರಲ್ಲಿ 85 ಲಕ್ಷ ಮಂದಿಗೆ ಉದ್ಯೋಗ ಸಿಕ್ಕಿದೆ. ಪರಿಣಾಮ ಉದ್ಯೋಗಿಗಳ ಸಂಖ್ಯೆ 40.62 ಕೋಟಿಗೇರಿದೆ. 2019-20ರ ಅಂಕಿಸಂಖ್ಯೆಗಳಿಗೆ ಹೋಲಿಸಿದರೆ 27 ಲಕ್ಷ ಮಂದಿ ಕಡಿಮೆ ಉದ್ಯೋಗಿಗಳಿದ್ದಾರೆ. ಈ ಅಕ್ಟೋಬರ್ ಮುಗಿಯುವ ಹೊತ್ತಿಗೆ ಪ್ರಸ್ತುತ ಕೊರತೆಯನ್ನೂ ದಾಟಿ, ಹೆಚ್ಚುವರಿ ಉದ್ಯೋಗಿಗಳಿರುವ ದಟ್ಟ ಲಕ್ಷಣಗಳಿವೆ.
ಇದನ್ನೂ ಓದಿ:ಸಿದ್ದರಾಮಯ್ಯ, ನಿಮಗೂ 2 ಡೋಸ್ ಲಸಿಕೆ ಸಿಕ್ಕಿದೆಯಲ್ಲವೇ? : ಬಿಜೆಪಿ ಪ್ರಶ್ನೆ
ಅ.17ಕ್ಕೆ ಅಂತ್ಯವಾದ ವಾರದಲ್ಲಿ ಉದ್ಯೋಗಿಗಳ ಪಾಲ್ಗೊಳ್ಳುವಿಕೆ ದರ (ಎಲ್‌ಪಿಆರ್) ಶೇ.41.6ರಷ್ಟಿತ್ತು. ಅದಕ್ಕೂ ಹಿಂದಿನ ವಾರಗಳಲ್ಲಿ ಈ ಪ್ರಮಾಣ ಇನ್ನೂ ಕಡಿಮೆಯಿತ್ತು. ಹೀಗೆ ನಿರಂತರ ಏರಿಕೆಯಾಗುತ್ತಿರುವ ಅಂಕಿಸಂಖ್ಯೆಗಳ ಪ್ರಕಾರ ಸಿಎಂಐಇ ಈ ರೀತಿಯ ಭರವಸೆಯೊಂದನ್ನು ವ್ಯಕ್ತಪಡಿಸಿದೆ.