ಕಲಬುರಗಿ: ದೇಶದಲ್ಲೇ ಪ್ರಥಮ ಕೋವಿಡ್ ಸಂಬಂಧಿ ಸಾವಿನ ಪ್ರಕರಣ, ರಾಜ್ಯದ ಕೋವಿಡ್ ಹಾಟ್ ಸ್ಪಾಟ್, ಐವರು ಸೋಂಕಿತರ ಸಾವು.. ಹೀಗೆ ಕೋವಿಡ್ ವಿರುದ್ಧ ಹೋರಾಟದಲ್ಲಿ ವ್ಯತಿರಿಕ್ತ ಫಲಿತಾಂಶವನ್ನೇ ಕಾಣುತ್ತಿದ್ದ ರಾಜ್ಯದ ಕಲಬುರಗಿ ಜಿಲ್ಲೆಯಿಂದ ಶುಭಸುದ್ದಿ ಬಂದಿದೆ.
ಕೋವಿಡ್-19 ಸೋಂಕಿನ ಹಾಟ್ ಸ್ಪಾಟ್ ಆಗಿರುವ ಕಲಬುರಗಿ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಇಬ್ಬರು ಮಕ್ಕಳು ಸೇರಿ ಐವರು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುಣಮುಖರಾದ ಮಕ್ಕಳು ಒಂದು ಮತ್ತು ಎರಡು ವರ್ಷದವರಾಗಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದ ಪಿಲ್ಕಂ ಪ್ರದೇಶದ ಎರಡು ವರ್ಷದ ಗಂಡು ಮಗು (ಪಿ-227) ಮತ್ತು ಕಲಬುರಗಿ ತಾಲೂಕಿನ ಕವಲಗಾ ಗ್ರಾಮದ ಒಂದು ವರ್ಷದ ಗಂಡು ಮಗು (ಪಿ-274) ಹಾಗೂ ಕವಲಗಾ ಗ್ರಾಮದ ಮಗುವಿನಿಂದ ಸೋಕಿತಳಾಗಿದ್ದ 23 ವರ್ಷದ ಯುವತಿ (ಪಿ-302) ಕೋವಿಡ್-19 ಸೋಂಕು ಮುಕ್ತರಾಗಿದ್ದಾರೆ.
ಅದೇ ರೀತಿ ಕಲಬುರಗಿ ನಗರದ ಸಂತ್ರಾಸವಾಡಿ ಬಡಾವಣೆಯ ನಿವಾಸಿ, 65 ವರ್ಷದ ಮೃತ ಹಣ್ಣಿನ ವ್ಯಾಪಾರಿ (ಪಿ-177) ಸಂಪರ್ಕದಿಂದ ಸೋಂಕಿತರಾದ ಇಬ್ಬರು ಮಹಿಳೆಯರು ಸಹ ಗುಣಮುಖರಾಗಿದ್ದಾರೆ.
ಮೃತನ 24 ವರ್ಷದ ಸೊಸೆ (ಪಿ-220) ಮತ್ತು ಬಹಮನಿ ಆಸ್ಪತ್ರೆಯಲ್ಲಿ ಆಯಾ ಆಗಿ ಕಾರ್ಯನಿರ್ವಹಿಸುತ್ತಿದ್ದ ಆದರ್ಶ ನಗರದ 38 ವರ್ಷದ ಮಹಿಳೆ (ಪಿ-222) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 53 ಜನ ಸೋಂಕಿತರಲ್ಲಿ ಇದುವರೆಗೆ 12 ಜನ ರೋಗಿಗಳು ಕೋವಿಡ್-19 ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತೆ ಆಗಿದೆ. ಐವರು ಸೋಂಕಿನಿಂದ ಮೃತಪಟ್ಟಿದ್ದು, ಉಳಿದಂತೆ 36 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.