Advertisement

ರಾಜ್ಯಕ್ಕೆ ಮತ್ತೆ ತಬ್ಲಿಘಿ ಕಂಟಕ ; ಧಾರ್ಮಿಕ ಪ್ರವಾಸಿಗರಿಂದ ದಾಖಲೆ ಸೋಂಕು

02:03 AM May 13, 2020 | Hari Prasad |

ಬೆಂಗಳೂರು: ಅಹ್ಮದಾಬಾದ್‌ನ ತಬ್ಲಿಘಿ ಜಮಾತ್‌ ಮರ್ಕಜ್‌ನಲ್ಲಿ ಭಾಗವಹಿಸಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಿಂದಿರುಗಿದವರಲ್ಲಿ ಕೋವಿಡ್ ವೈರಸ್‌ ಸೋಂಕು ಹೆಚ್ಚಳವಾಗಿದೆ.

Advertisement

ಇದರಿಂದಾಗಿ ರಾಜ್ಯದಲ್ಲಿ ಮಂಗಳವಾರ ದಾಖಲೆಯ 63 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ರಾಜ್ಯದ ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 925ಕ್ಕೆ ಏರಿಕೆಯಾಗಿದೆ. ಇನ್ನು ಕೋಲಾರ, ಯಾದಗಿರಿ ಜಿಲ್ಲೆಗೂ ಕೋವಿಡ್ ವೈರಸ್‌ ಪ್ರವೇಶಿಸಿದೆ.

ಮಂಗಳವಾರ ಸೋಂಕು ದೃಢಪಟ್ಟ 63 ಮಂದಿ ಪೈಕಿ 33 ಮಂದಿ ಗುಜರಾತಿನ ಅಹ್ಮದಾಬಾದ್‌ಗೆ ತೆರಳಿ ಲಾಕ್‌ಡೌನ್‌ ವಿನಾಯಿತಿ ಬಳಿಕ ರಾಜ್ಯದ ವಿವಿಧ ಜಿಲ್ಲೆಗಳಿಗೆ ಹಿಂದಿರುಗಿದ್ದ ತಬ್ಲಿಘಿಗಳು. 33 ಮಂದಿಯ ಪೈಕಿ ಬಾಗಲಕೋಟೆ – 15, ಧಾರವಾಡ – 9, ದಾವಣಗೆರೆ – 6, ಯಾದಗಿರಿ – 2, ಗದಗದ ಒಬ್ಬರು ಸೇರಿದ್ದಾರೆ.

ಇನ್ನು ಅಹ್ಮದಾಬಾದ್‌ನ ತಬ್ಲಿಘಿ ಜಮಾತ್‌ ಮರ್ಕಜ್‌ನಿಂದ ರವಿವಾರ 17 ಮಂದಿಯಲ್ಲಿ, ಸೋಮವಾರ ಒಬ್ಬರಲ್ಲಿ ಸೋಂಕು ದೃಢಪಟ್ಟಿತ್ತು. ಒಟ್ಟಾರೆ ಎರಡನೇ ಹಂತದ ತಬ್ಲಿಘಿ ಜಮಾತ್‌ ಮರ್ಕಜ್‌ನಿಂದ ಇಲ್ಲಿಯವರೆಗೂ ರಾಜ್ಯಕ್ಕೆ ಮರಳಿದ್ದ 51 ಮಂದಿಯಲ್ಲಿ ಸೋಂಕು ದೃಢಪಟ್ಟಂತಾಗಿದೆ.

ಮತ್ತೆರಡು ಜಿಲ್ಲೆಗಳಿಗೆ ಸೋಂಕು
ಮಂಗಳವಾರ ರಾಜ್ಯದ ಕೋಲಾರ ಮತ್ತು ಯಾದಗಿರಿ ಜಿಲ್ಲೆಗೆ ಕೋವಿಡ್ ವೈರಸ್‌ ಪ್ರವೇಶಿಸಿದೆ. ಕೋಲಾರದಲ್ಲಿ ಚೆನ್ನೈನಿಂದ ಬಂದ ಇಬ್ಬರು ಪುರುಷರು, ಒಡಿಶಾದಿಂದ ಬಂದ ಪುರುಷ ಮತ್ತು ಸ್ಥಳೀಯ ಇಬ್ಬರು ಮಹಿಳೆಯರಲ್ಲಿ ಸೋಂಕು ಕಾಣಿಸಿಕೊಂಡಿದೆ.

Advertisement

ಯಾದಗಿರಿಗೆ ಅಹ್ಮದಾಬಾದ್‌ನ ತಬ್ಲಿಘಿ ಜಮಾತ್‌ ಮರ್ಕಜ್‌ನಲ್ಲಿ ಭಾಗವಹಿಸಿ ಬಂದ ಇಬ್ಬರು ಸದಸ್ಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ರಾಜ್ಯದ ಸೋಂಕಿತ ಜಿಲ್ಲೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಮಂಗಳವಾರ ಚನ್ನರಾಯಪಟ್ಟಣಕ್ಕೆ ಮುಂಬಯಿಯಿಂದ ಬಂದಿದ್ದ ಐದು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ದಾವಣಗೆರೆಯಲ್ಲೂ ಹೆಚ್ಚಿದ ಆತಂಕ
ದಾವಣಗೆರೆಯಲ್ಲಿ ಅಹ್ಮದಾಬಾದ್‌ ತಬ್ಲಿಘಿ ಜಮಾತ್‌ ಮರ್ಕಜ್‌ನಲ್ಲಿ ಭಾಗವಹಿಸಿ ಜಿಲ್ಲೆಗೆ ವಾಪಸಾಗಿದ್ದ ಆರು ಮಂದಿ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜತೆಗೆ ಸ್ಥಳೀಯ ಸೋಂಕಿತರ (ಪಿ-695 ಹಾಗೂ ಪಿ -696) ಸಂಪರ್ಕದಿಂದ ಇಬ್ಬರು ಬಾಲಕಿಯರು ಮತ್ತು ನಾಲ್ವರು ಪುರುಷರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆಯಾಗಿದ್ದು, 77 ಸಕ್ರಿಯ ಪ್ರಕರಣಗಳಿವೆ.

ಧಾರವಾಡದಲ್ಲಿ 9 ಮಂದಿಗೆ ಸೋಂಕು
ಧಾರವಾಡ ಜಿಲ್ಲೆಯಲ್ಲಿ ತಬ್ಲಿಘಿ ಸದಸ್ಯರ ಸೋಂಕು ಪ್ರಕರಣಗಳಿಂದ ಮತ್ತೆ ಸೋಂಕು ಹೆಚ್ಚಳವಾಗಿದೆ. 9 ಮಂದಿ ಪುರುಷರಲ್ಲಿ ಸೋಂಕು ಪತ್ತೆಯಾಗಿದ್ದು, ಈ ಎಲ್ಲ ಸೋಂಕಿತರನ್ನು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು, 14 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next