Advertisement

ಪ್ರವಾಹದಿಂದ ರಾಜ್ಯಕ್ಕೆ 8071 ಕೋಟಿ ರೂ.ಗಳ ನಷ್ಟ: ಕೇಂದ್ರ ಅಧ್ಯಯನ ತಂಡಕ್ಕೆ BSY ಮಾಹಿತಿ

07:44 PM Sep 07, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ವಿವಿಧ ಜಿಲ್ಲೆಗಳಲ್ಲಿ ಪ್ರವಾಹದಿಂದ ಉಂಟಾಗಿರುವ ಹಾನಿಯ ಸಮೀಕ್ಷೆಗೆಂದು ಕೇಂದ್ರ ಗೃಹ ಮಂತ್ರಾಲಯದ ಕೆ.ವಿ.ಪ್ರತಾಪ್ ಅವರ ನೇತೃತ್ವದಲ್ಲಿ ಆಗಮಿಸಿರುವ ತಂಡವು ಇಂದು ಮುಖ್ಯಮಂತ್ರಿಗಳನ್ನು ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿತು.

Advertisement

ರಾಜ್ಯದಲ್ಲಿ ಈ ಬಾರಿಯ ಪ್ರವಾಹದಿಂದ ಒಟ್ಟಾರೆ 8071 ಕೋಟಿ ರೂ.ಗಳ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಕೇಂದ್ರ ಅಧ್ಯಯನ ತಂಡಕ್ಕೆ ವಿವರಿಸಿದರು.

2018 ಮತ್ತು 2019 ರಲ್ಲಿಯೂ ರಾಜ್ಯದಲ್ಲಿ ಭಾರಿ ಪ್ರವಾಹ ಮತ್ತು ಭೂ ಕುಸಿತ ಉಂಟಾಗಿ 22 ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿದ್ದವು. ಈ ಬಾರಿಯ ಪ್ರವಾಹದಲ್ಲಿ ಸುಮಾರು 4.03 ಲಕ್ಷ  ಹೆಕ್ಟೇರ್ ಪ್ರದೇಶದಲ್ಲಿ ಬೆಳೆಗಳು ಹಾನಿಗೊಳಗಾಗಿವೆ. ರಸ್ತೆ, ಸೇತುವೆ, ವಿದ್ಯುತ್ ಪರಿವರ್ತಕಗಳು, ಶಾಲೆ, ಅಂಗನವಾಡಿ ಮತ್ತು ಸರ್ಕಾರಿ ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದರು.

‘ಉತ್ತಮವಾಗಿ ಮರುನಿರ್ಮಿಸು’ ತತ್ವವನ್ನು ಆಧರಿಸಿ ವಿಕೋಪವನ್ನು ತಡೆಯಬಲ್ಲ ಮನೆಗಳನ್ನು ನಿರ್ಮಿಸುವ ಬಹು ದೊಡ್ಡ ಪುನರ್ ನಿರ್ಮಾಣ ಯೋಜನೆಗಳಿಗೆ ರಾಜ್ಯ ಸರ್ಕಾರವು ಆರ್ಥಿಕ ನೆರವು ನೀಡುತ್ತಿದೆ ಎಂದ ಮುಖ್ಯಮಂತ್ರಿಗಳು, ಸಂಪೂರ್ಣ ಹಾಳಾದ ಮನೆಗಳಿಗೆ ರೂ. 5 ಲಕ್ಷ, ತೀವ್ರ ಹಾನಿಗೊಳಗಾದ ಮನೆಗಳಿಗೆ ರೂ.3 ಲಕ್ಷ, ಭಾಗಶ: ಹಾನಿಗೊಳಗಾದ ಮನೆಗಳಿಗೆ ರೂ. 50,000ಗಳಂತೆ ಧನ ಸಹಾಯ ನೀಡುತ್ತಿದೆ. ಕಳೆದ ವರ್ಷ 1500 ಕೋಟಿ ರೂ.ಗಳನ್ನು ವೆಚ್ಚ ಮಾಡಿದೆ. ಈ ವರ್ಷವೂ ಸಹ ಕೋವಿಡ್ ಸಂಕಷ್ಟದ ನಡುವೆಯೂ 200 ಕೋಟಿ ರೂ.ಗಳನ್ನು ಸರ್ಕಾರ ಭರಿಸಲಿದೆ ಎಂದರು.

ರಾಜ್ಯ ವಿಕೋಪ ಅಪಾಯ ನಿರ್ವಹಣಾ ನಿಧಿಯಡಿ, ನಾಲ್ಕು ಪ್ರತ್ಯೇಕ ನಿಧಿ ಗವಾಕ್ಷಿಗಳನ್ನು  ಕೇಂದ್ರ ಸರ್ಕಾರ ಸೃಜಿಸಿದೆ. ಆದರೆ ಕೋವಿಡ್ ನಿಂದಾಗಿ ನಮ್ಮ ಪ್ರಯತ್ನಗಳಿಗೆ ತಡೆಯುಂಟಾಗಿದೆ.

Advertisement

ಕರ್ನಾಟಕ ರಾಜ್ಯ ಪ್ರಕೃತಿ ವಿಕೋಪ ಪ್ರಾಧಿಕಾರವು ರಾಜ್ಯ ವಿಕೋಪ ನಿರ್ವಹಣಾ ಯೋಜನೆ 2020 ನ್ನು ಅನುಮೋದಿಸಿದ್ದು, ಯೋಜನೆಯು ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ  ಪುನರ್ ನಿರ್ಮಾಣದ ಯೋಜನೆಗಳನ್ನು ಹೊಂದಿದೆ.

ಕೋವಿಡ್ 19 ನಿಯಂತ್ರಣಕ್ಕೆ ಹಾಗೂ ಪ್ರವಾಹಕ್ಕಾಗಿ ರಾಜ್ಯ ವಿಕೋಪ ಪರಿಹಾರ ನಿಧಿಯಡಿ 460 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳ ಹೆಚ್ಚಳ ಹಾಗೂ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು  ಹೆಚ್ಚಿನ ಮೊತ್ತದ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ರಾಜ್ಯ ವಿಕೋಪ ಪರಿಹಾರ ನಿಧಿ/ ರಾಷ್ಟ್ರೀಯ ವಿಕೋಪ ಪರಿಹಾರ ನಿಧಿಯಡಿ ನೆರವು ಒದಗಿಸುವ ಮಾರ್ಗಸೂಚಿಗಳು ಈ ವರ್ಷವೇ ಪರಿಷ್ಕರಣೆಯಾಗಬೇಕಿದ್ದು, ಕೂಡಲೇ ಇದನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ, ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ಹೆಚ್ಚಿನ ಮೊತ್ತವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು ಕೇಂದ್ರ ತಂಡಕ್ಕೆ ಮನವಿ ಮಾಡಿದರು.

ಕೇಂದ್ರ ಆರ್ಥಿಕ ಇಲಾಖೆಯ ನಿರ್ದೇಶಕ ಡಾ| ಭರತೇಂದು ಕುಮಾರ್ ಸಿಂಗ್, ಕೃಷಿ ಮತ್ತು ರೈತರ ಸಹಕಾರ ಸಚಿವಾಲಯದ ನಿರ್ದೇಶಕ ಡಾ| ಮನೋಹರನ್, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧೀಕ್ಷಕ ಅಭಿಯಂತರ ಸದಾನಂದ ಬಾಬು, ಕೇಂದ್ರ ಜಲಶಕ್ತಿ ಸಚಿವಾಲಯದ ಅಧೀಕ್ಷಕ ಅಭಿಯಂತರ ಗುರುಪ್ರಸಾದ್ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧೀನ ಕಾರ್ಯದರ್ಶಿ ವಿ.ಪಿ.ರಾಜ್ ವೇದಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ. ಕೃಷಿ ಸಚಿವರಾದ ಬಿ.ಸಿ ಪಾಟೀಲ್. ವಸತಿ ಸಚಿವರಾದ ವಿ. ಸೋಮಣ್ಣ. ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಗೋಪಲಯ್ಯ. ಮಾನ್ಯ ಕಾನೂನು ಸಂಸದೀಯ ವ್ಯವಹಾರಗಳು ಹಾಗೂ ಸಣ್ಣ ನೀರಾವರಿ ಸಚಿವರಾದ ಮಾಧುಸ್ವಾಮಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಸೇರಿಂದತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next