ಬೆಂಗಳೂರು: ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಶಸ್ತ್ರ ಪಡೆಗಳ ಕಾನ್ಸ್ಟೇಬಲ್ ಹುದ್ದೆಗಳನ್ನು, ಭರ್ತಿ ಮಾಡಲಾಗುತ್ತಿದ್ದು, ಪ್ರಥಮ ಬಾರಿಗೆ, ಪುರುಷ ತೃತೀಯ ಲಿಂಗಿ ಸಮುದಾಯದ 79 ಅಭ್ಯರ್ಥಿಗಳನ್ನು ಒಳಗೊಂಡಂತೆ ಒಟ್ಟು 3484 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಎಲ್ಲಾ ಹುದ್ದೆಗಳನ್ನು ಅತ್ಯಂತ ಪಾರದರ್ಶಕವಾಗಿ ಆಯ್ಕೆ ಮಾಡಲಾಗುತ್ತಿದ್ದು, ಅಕ್ಟೋಬರ್ ತಿಂಗಳ 31 ರಂದು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ 371J ಮೀಸಲಾತಿಯಂತ ಒಟ್ಟು 420 ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಇದರಲ್ಲಿ 11 ಪುರುಷ ತೃತೀಯ ಲಿಂಗಿಗಳಿಗೆ ಮೀಸಲಾಗಿದೆ. ರಾಜ್ಯದ ಇತರ ಭಾಗಗಳಲ್ಲಿ ಒಟ್ಟು 3064 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, 68 ಹುದ್ದೆಗಳು ತೃತೀಯ ಲಿಂಗಿ ಪುರುಷರಿಗೆ ಮೀಸಲಾತಿ ನೀಡಲಾಗಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆಯ ಎಲ್ಲಾ ವಿಭಾಗಗಳಲ್ಲಿ ಒಟ್ಟು ಒಂದು ಲಕ್ಷಕ್ಕೂ ಹೆಚ್ಚು ಹುದ್ದೆಗಳಲ್ಲಿ ಸುಮಾರು 16000 ಹುದ್ದೆಗಳು ಭರ್ತಿಯಾಗಬೇಕಿದೆ ಎಂದರು.
ಇದನ್ನೂ ಓದಿ:ಉಪ್ಪಿನಂಗಡಿ : 8,800ರೂ. ಬೆಲೆಯ ಫೋನ್ 1,785 ರೂ.ಗೆ : ಪಾರ್ಸೆಲ್ ನಂಬಿ ಹಣ ಕಳೆದುಕೊಂಡರು
ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿ ನಡೆಯಲಿದ್ದು, ಅಭ್ಯರ್ಥಿಗಳು, ಯಾವುದೇ ಅಕ್ರಮಗಳ ಅಥವಾ ವಾಮಮಾರ್ಗದ ಮೂಲಕ ಹುದ್ದೆಗಳನ್ನು ಪಡೆಯಲು ಯತ್ನಿಸಿದರೆ, ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವರು ಎಚ್ಚರಿಸಿದರು.