ಇಂದೋರ್: ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಅನಾಥಾಲಯವೊಂದರಲ್ಲಿ 21 ಮಕ್ಕಳಿಗೆ ಅಲ್ಲಿನ ಸಿಬಂದಿ ತೀವ್ರ ನಿಂದನೆ ಮತ್ತು ಚಿತ್ರಹಿಂಸೆ ನೀಡಿರುವ ಘಟನೆ ವರದಿಯಾಗಿದೆ.
ಇಂದೋರ್‌ನಲ್ಲಿ ವಾತ್ಸಲಯಪುರಂ ಜೈನ್ ಟ್ರಸ್ಟ್ ನಿರ್ವಹಿಸುವ ಅನಾಥಾಲಯಕ್ಕೆ ಕಳೆದ ವಾರ ಮಕ್ಕಳ ಕಲ್ಯಾಣ ಸಮಿತಿಯು(ಸಿಡಬ್ಲ್ಯುಸಿ) ಏಕಾಏಕಿ ಭೇಟಿ ನೀಡಿದ ಸಂದರ್ಭದಲ್ಲಿ ಈ ಕೃತ್ಯಗಳು ಬಹಿರಂಗವಾಗಿದೆ.
ಸಣ್ಣ-ಪುಟ್ಟ ತಪ್ಪುಗಳಿಗೆ ಅನಾಥಾಲಯದ ಸಿಬಂದಿ ತಮ್ಮನ್ನು ತೆಲಕೆಳಗಾಗಿ ನೇತು ಹಾಕುತ್ತಿದ್ದರು, ಬಿಸಿ ಐರನ್ ಬಾಕ್ಸ್‌ನಿಂದ ಚರ್ಮ ಸುಡುತ್ತಿದ್ದರು, ಬಟ್ಟೆ ಬಿಚ್ಚಿಸಿ ಫೋಟೋ ತೆಗೆಯುತ್ತಿದ್ದರು, ಮೆಣಸಿನಕಾಯಿ ಹೊಗೆ ಹಾಕುತ್ತಿದ್ದರು. ನಾಲ್ಕು ವರ್ಷದ ಬಾಲಕನೊಬ್ಬ ಪ್ಯಾಂಟಿನಲ್ಲೇ ಮಲ ವಿಸರ್ಜನೆ ಮಾಡಿಕೊಂಡಿದ್ದಕ್ಕೆ, ಅವನಿಗೆ ಮೂರು ದಿನ ಊಟ ನೀಡದೇ ಶೌಚಾಲಯದಲ್ಲೇ ಕೂಡಿ ಹಾಕಿದ್ದರು ಎಂದು ಅಲ್ಲಿನ ಮಕ್ಕಳು ಸಿಡಬ್ಲ್ಯುಸಿ ತಂಡದ ಬಳಿ ಅವಲತ್ತುಕೊಂಡಿದ್ದಾರೆ.
ಈ ಸಂಬಂಧ ಅನಾಥಾಲಯದ ಐವರು ಮಹಿಳಾ ಸಿಬಂದಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಜತೆಗೆ, ಅನಾಥಾಶ್ರಮಕ್ಕೆ ಬೀಗ ಜಡಿಯಲಾಗಿದೆ. ಬಾಲ ನ್ಯಾಯ ಕಾಯ್ದೆ ಅಡಿ ಈ ಅನಾಥಾಲಯ ನೋಂದಣಿಯಾಗಿಲ್ಲ ಎಂದೂ ಪೊಲೀಸರು ತಿಳಿಸಿದ್ದಾರೆ. ಇದೇ ಟ್ರಸ್ಟ್ ಬೆಂಗಳೂರು, ಸೂರತ್, ಜೋಧ್‌ಪುರ ಮತ್ತು ಕೋಲ್ಕ ತಾದಲ್ಲಿ ಅನಾಥಾಲಯಗಳನ್ನು ಹೊಂದಿ ದೆ ಎಂದು ಪೊಲೀಸರು ತಿಳಿಸಿದ್ದಾರೆ.