ಬೆಳಗಾವಿ: ಪ್ರೀತಿಸಿದ ತಪ್ಪಿಗೆ ಯುವಕನನ್ನು ಅಪಹರಿಸಿ ಮಾರಣಾಂತಿಕ ಹಲ್ಲೆ ನಡೆಸಿ ಶಾಕ್ ಟ್ರೀಟ್ಮೆಂಟ್ ಕೊಟ್ಟು ಹಿಂಸಿಸಿದ್ದು, ಇದರಿಂದ ಕಿಡ್ನಿ ಕಳೆದುಕೊಂಡ ಯುವಕ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಧಾರವಾಡ ತಾಲೂಕಿನ ಗರಗ ಗ್ರಾಮದ ಮಡಿವಾಳ ರಾಯಬಾಗಕರ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮಾಜಿ ಸಚಿವ ವಿನಯ ಕುಲಕರ್ಣಿ ಕಡೆಯವರು ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ. ಶಾಕ್ ಟ್ರಿಟ್ಮೆಂಟ್ ಕೊಟ್ಟಿದ್ದರಿಂದ ಯುವಕನ ಎರಡೂ ಕಿಡ್ನಿ ಹಾಳಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.ಘಟನೆ ವಿವರ: ಮಡಿವಾಳ ಎರಡು ವರ್ಷದ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಈ ವಿಷಯ ಯುವತಿಯ ಮನೆಯಲ್ಲಿ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಕುಟುಂಬದವರು ಯುವಕನನ್ನು ಹೆದರಿಸಿ ಊರು ಬಿಡಿಸಿದ್ದರು. ಇದಾದ ನಂತರ ಬೆಳಗಾವಿಯಲ್ಲಿ ನೆಲೆಸಿದ್ದ ಯುವಕ ಯುವತಿಯೊಂದಿಗೆ ಸಂಪರ್ಕದಲ್ಲಿದ್ದನು. ಈ ವಿಷಯ ಗೊತ್ತಾದ ನಂತರ ಬೆಳಗಾವಿಗೆ ಬಂದು ಆತನಿಗೆ ಶಾಕ್ ಟ್ರೀಟ್ಮೆಂಟ್ ಕೊಟ್ಟು ಚಿತ್ರಹಿಂಸೆ ನೀಡಲಾಗಿತ್ತು ಎಂದು ಕುಟುಂಬದವರು ಆರೋಪಿಸಿದ್ದಾರೆ.
ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವಕನನ್ನು ಭೇಟಿಯಾದ ಧಾರವಾಡ ಶಾಸಕ ಅಮೃತ ದೇಸಾಯಿ ಆರೋಗ್ಯ ವಿಚಾರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಮೃತ ದೇಸಾಯಿ, ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಬೆಂಬಲಿಗ, ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಳವಯ್ಯ ಸೇರಿದಂತೆ ಇತರರು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮಡಿವಾಳ ಪ್ರೀತಿ ಮಾಡಿದ ಎಂಬ ಕಾರಣಕ್ಕೆ ಹತ್ಯೆಗೆ ಯತ್ನಿಸಿದ್ದಾರೆ. ಕಾಲಿನಲ್ಲಿ ಮೊಳೆ ಹೊಡೆದು ಅದಕ್ಕೆ ವಿದ್ಯುತ್ ಶಾಕ್ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ವಿನಯ ಕುಲಕರ್ಣಿ ಅವರ ಆಪ್ತ ಎಂ.ಬಿ. ಪಾಟೀಲ ಅವರು ಗೃಹ ಸಚಿವರಾಗಿದ್ದರಿಂದ ಯಾರೂ ಏನೂ ಮಾಡಲು ಆಗುವುದಿಲ್ಲ ಎಂದು ಆರೋಪಿಸಿದ ಅವರು, ಹಲ್ಲೆ ಮಾಡಿದ ಆರೋಪಿಗಳಿಗೆ ಗರಗ ಪೊಲೀಸ್ ಠಾಣೆ ಪಿಎಸ್‌ಐ ಆಪ್ತರಾಗಿದ್ದಾರೆ. ಹೀಗಾಗಿ ಇದರಿಂದ ಹೆದರಿದ ಮಡಿವಾಳ ಕುಟುಂಬಸ್ಥರು ಊರು ಬಿಟ್ಟಿದ್ದಾರೆ. ಅಪಹರಣ ಮಾಡಿ 18 ತಾಸು ಚಿತ್ರಹಿಂಸೆ ಮಾಡಲಾಗಿದೆ. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು. ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೇ ಯುವಕನಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು. ಬೆಳಗಾವಿ ಶಾಸಕ ಅನಿಲ ಬೆನಕೆ ಜೊತೆಯಲ್ಲಿದ್ದರು.
ಧಾರವಾಡ ತಾಲೂಕಿನ ಗರಗ ಗ್ರಾಮದ ಅಪ್ಪಾಸಾಬ ನದಾಫ, ಉಳ್ಳವಯ್ಯ ಚಿಕ್ಕಮಠ, ಉದ್ದಪ್ಪ ಮಡಿವಾಳನವರ, ಸಿದ್ದಯ್ಯ ಚಿಕ್ಕೊಪ್ಪ, ಮಡಿವಾಳಪ್ಪ ಕಾಳಿ, ಗುಲಾಬ ಪೀರಜಾದೆ ವಿರುದ್ಧ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿದೆ.