Advertisement

‘ಹರಿದ ನೀರು, ಸರಿದ ಸಮಯ ಮರಳದು’

03:58 PM May 14, 2018 | |

ಪುತ್ತೂರು: ಸಮಯ ನದಿಯಿದ್ದಂತೆ. ಒಮ್ಮೆ ಹರಿದು ಹೋದ ನೀರು ಮತ್ತೆ ನಮ್ಮ ಬಳಿಗೆ ಬಾರದು. ಆದ್ದರಿಂದ ವಿದ್ಯಾರ್ಥಿಗಳು ಸಮಯದ ಮಹತ್ವ ಅರಿತು ಉಪಯೊಗ ಮಾಡಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಹೇಳಿದರು.

Advertisement

ಕಾಲೇಜಿನ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳ ವಿದಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಯವನ್ನು ಹಿಡಿಯಲು ಸಾಧ್ಯವಿಲ್ಲ. ಆದರೆ ಸಮಯದ ಜೊತೆಗೆ ಸಾಗಬಹುದು. ಅದುವೇ ನಿಜವಾದ ಸಾಧನೆಯ ಹಾದಿ ಯನ್ನು ತೋರಿಸಿಕೊಡುತ್ತದೆ ಎಂದರು. ಎಂ.ಕಾಂ. ವಿಭಾಗ ಸಂಯೋಜಕಿ ಡಾ| ವಿಜಯ ಸರಸ್ವತಿ ಮಾತನಾಡಿ, ವಿದ್ಯಾರ್ಥಿ ಗಳಲ್ಲಿ ಆತ್ಮಸ್ಥೈರ್ಯ ಅತಿ ಮುಖ್ಯ. ಅದು ಜೀವನದ ಅತಿ ಕಠಿನ ಹಾದಿಯನ್ನೂ ಕ್ರಮಿಸಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬ ಸಾಧಕನ ಹಿಂದೆ ಇರುವ ಗುರುವನ್ನು ಗೌರವಿಸಬೇಕು. ಆಗ ಜೀವನ ಸಾರ್ಥಕವಾಗುತ್ತದೆ ಎಂದರು.

ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಸಂಯೋಜಕಿ ಸವಿತಾ ಕೆ. ಮಾತನಾಡಿ, ಉದಾಸೀನ ಹಾಗೂ ಆನಾಸಕ್ತಿ ನಮ್ಮ ಸಾಧನೆಗೆ ಅಡ್ಡಿಯಾಗುತ್ತದೆ. ಇದನ್ನು ಸರಿಯಾಗಿ ತಿಳಿದುಕೊಂಡಲ್ಲಿ ವಿದ್ಯಾರ್ಥಿಗಳ ಜೀವನ ಸುಗಮವಾಗುತ್ತದೆ ಎಂದರು. ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕ ಡಾ| ವಿಜಯ ಗಣಪತಿ ಸ್ವಾಗತಿಸಿ, ಉಪನ್ಯಾಸಕಿ ಲಕ್ಷ್ಮೀ ಭಟ್‌ ವಂದಿಸಿದರು. ಉಪನ್ಯಾಸಕಿ ಅನನ್ಯಾ ವಿ. ಕಾರ್ಯಕ್ರಮ ನಿರ್ವಹಿಸಿದರು.

ನಿಜವಾದ ಶಿಕ್ಷಣ
ಸಿಕ್ಕ ಅವಕಾಶವನ್ನು ಉತ್ತಮವಾಗಿ ಬಳಸಿ ಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ. ಬದುಕಿನಲ್ಲಿ ಪ್ರತಿಯೊಬ್ಬರೂ ತುಂಬಾ ಕಲಿಯುವುದಿದೆ. ಕಲಿಕೆಗೆ ಅಂತ್ಯವಿಲ್ಲ ಎಂಬುದನ್ನು ಅರ್ಥ ಮಾಡಿ ಕೊಳ್ಳಬೇಕು. ನಾವು ಕಲಿತ ವಿಚಾರವನ್ನು ಇತರರಿಗೆ ಹಂಚಬೇಕು. ಅದುವೆ ನಿಜವಾದ ಶಿಕ್ಷಣ ಎಂದು ಡಾ| ಪೀಟರ್‌ ವಿಲ್ಸನ್‌ ಪ್ರಭಾಕರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next