Advertisement

ಟೋಪೋಗ್ರಫಿ ಕಲೆ -ಕಲಿತರೆ ಜೀವನೋಪಾಯ 

06:00 AM Apr 13, 2018 | Team Udayavani |

 ಟೋಪೋಗ್ರಫಿ ಕಲೆ ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ಅವಿಭಾಜ್ಯ ಅಂಗವಾಗಿದೆ. ಟೋಪೋಗ್ರಫಿ ಕಲೆಯನ್ನೇ ಚೆನ್ನಾಗಿ ಕಲಿತರೂ ಅದೇ ಉದ್ಯೋಗ ಮಾಡಿ ಜೀವನ ಸಾಗಿಸಬಹುದು. ಇದಕ್ಕೆ ಜಾಣ್ಮೆ ಹಾಗೂ ಕಲಾತ್ಮಕ ಮನಸ್ಸು ಇದ್ದರೆ ಸಾಕು. ಒಂದು ಭೂಭಾಗದ ಪಕ್ಷಿನೋಟದ ಮಾದರಿಯನ್ನು ರೂಪಿಸುವುದಕ್ಕೆ ಟೋಪೋಗ್ರಫಿ ಕಲೆ ಎನ್ನುತ್ತಾರೆ. ಇದರಲ್ಲಿ ಕಟ್ಟಡಗಳು, ನಗರ ಪ್ರದೇಶ, ನದಿ ಬೆಟ್ಟಗುಡ್ಡ ಪ್ರದೇಶ, ಜಲಪಾತ, ಕರಾವಳಿ ತೀರದ ನೋಟಗಳು ಬರುತ್ತವೆ. ಈ ನೋಟಗಳನ್ನು ಎತ್ತರದಿಂದ ನೋಡಿದ ಹಾಗೆ ವಿವಿಧ ಕಚ್ಛಾವಸ್ತುಗಳನ್ನು ಬಳಸಿ ಮಾದರಿ ತಯಾರಿಸುವುದು. ಅಂದರೆ ಪಕ್ಷಿನೋಟದಿಂದ ಕಾಣುವಾಗ ಭೂಭಾಗದ ಎತ್ತರ ಕಡಿಮೆ ಕಾಣುತ್ತದೆ ಹಾಗೂ ಭೂಪ್ರದೇಶದಲ್ಲಿ ಹರಡಿರುವ ಅಥವಾ ನಿರ್ಮಿಸಿರುವ ವಸ್ತುಗಳು ವಿವರವಾಗಿ ಕಾಣುತ್ತವೆ. . ಒಂದು ಪ್ರದೇಶದ ಗುರುತಿಸುವಿಕೆಗೆ ಇದು ಸಹಾಯಕವಾಗುತ್ತದೆ. 

Advertisement

 ಹೊಸತೊಂದರ ನಿರ್ಮಾಣವಾಗುವಾಗ ಇಂಜಿನಿಯರ್‌ ಪ್ಲ್ರಾನ್‌ನಲ್ಲಿ ನಕ್ಷೆ ತಯಾರಿಸುತ್ತಾರೆ. ನಂತರ ನಿರ್ಮಾಣಗೊಳ್ಳುವ ಕಟ್ಟಡ, ಸೇತುವೆ, ಅಣೆಕಟ್ಟು, ಕಾಲುವೆ, ಉದ್ಯಾನವನ ಮುಂತಾದುವುಗಳು ಬದಿನೋಟ-ಎದುರುನೋಟ ಹಾಗೂ ಮೇಲ್ನೋಟದಿಂದ ಕಾಣುವಂತೆ ಚಿತ್ರರಚಿಸಿ ಹಾಕುತ್ತಾರೆ. ಅದನ್ನೇ ಟೋಪೋಗ್ರಫಿ ಕಲೆಯಲ್ಲಿ ಮಾದರಿಯನ್ನು ತಯಾರಿಸಿ ಗಾಜಿನ ಚೌಕಟ್ಟಿನೊಳಗಿಟ್ಟು ವೀಕ್ಷಕರಿಗೆ ನಿರ್ಮಿತಿಯ ಪೂರ್ಣ ಪರಿಕಲ್ಪನೆ ನೀಡುತ್ತಾರೆ. ಟೋಪೋಗ್ರಫಿ ಕಲೆಯಲ್ಲಿ ನಿರ್ಮಿತಿಯ ಚಿಕ್ಕ ಮಾದರಿಯಿದ್ದು ನೋಡಲು ಆಕರ್ಷಕವಾಗಿರುತ್ತದೆ. ಟೋಪೋಗ್ರಫಿ ಕಲಾಕೃತಿ ರಚಿಸಲು ಒಂದು ರಟ್ಟಿನ ತಳಹದಿಯ ಮೇಲೆ ನಿಯೋಜಿತ ಭೂಪ್ರದೇಶದ ಮಾದರಿಯನ್ನು ಪ್ಲಾಸ್ಟರ್‌ ಆಫ್ ಪ್ಯಾರಿಸ್‌ ಪುಡಿ, ರಟ್ಟಿನ ತುಂಡು, ನಿರುಪಯೋಗಿ ಬಾಕ್ಸ್‌ಗಳು, ರೀಲ್‌ ಕೊಳವೆಗಳು, ಸರಿಗೆ, ಕಲ್ಲು, ಮರಳು, ಹತ್ತಿ, ಬ್ಯಾಂಡೇಜ್‌ ಬಟ್ಟೆ ಇತ್ಯಾದಿಗಳನ್ನು ಅಂಟಿನೊಂದಿಗೆ ಬಳಸಿ ನಿರ್ಮಿಸುತ್ತಾರೆ. ಬೇಕಾದೆಡೆ ಬಣ್ಣಗಳನ್ನು ಕೊಟ್ಟು ಸಾದೃಶ್ಯ ರೂಪವನ್ನು ತರುತ್ತಾರೆ. ಇದನ್ನು ಸ್ವಾಗತ ಕೋಣೆಗಳಲ್ಲಿ ವೀಕ್ಷಿಸಲು ಇಡುತ್ತಾರೆ. ಕೆಲವೊಮ್ಮೆ ಉಡುಗೊರೆ ಕೊಡಲೂ ಬಳಸುತ್ತಾರೆ. ಟೋಪೋಗ್ರಫಿ ಕಲೆಯ ತರಬೇತಿ ಹಾಗೂ ನಿರ್ಮಾಣ ಶಿಬಿರ ಇತ್ತೀಚೆಗೆ ಉಡುಪಿ ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಉಡುಪಿ ಜಿಲ್ಲಾ ಡಯಟ್‌ನ ಆಶ್ರಯದಲ್ಲಿ ನಡೆಯಿತು. ಅನೇಕ ಭೂಪ್ರದೇಶಗಳ ನಿರ್ಮಾಣ ನಡೆಯಿತು. ಪಶ್ಚಿಮ ಘಟ್ಟ ತಪ್ಪಲು, ಜಲಪಾತ, ಕಾಪು ದೀಪಸ್ತಂಭ, ಕಡಲ ಕಿನಾರೆ, ಕರ್ನಾಟಕ ರಾಜ್ಯ, ಭಾರತದ ಭೂಪಟ ಇತ್ಯಾದಿ. ಒಟ್ಟಿನಲ್ಲಿ ಟೋಪೋಗ್ರಫಿ ಕಲೆ ಆಕರ್ಷಕ ಹಾಗೂ ಸಂಗ್ರಹಯೋಗ್ಯ. ಚೆನ್ನಾಗಿ ಕಲಿತರೆ ಇದು ಜೀವನ ನಿರ್ವಹಣೆಗೆ ದಾರಿಯೂ ಆಗುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಕರಕುಶಲ ಮಾದರಿ ತಯಾರಿಗೆ ಇದು ಒಂದು ಉತ್ತಮ ವಿಷಯ. ಚಿತ್ರದಲ್ಲಿ ಕಾಪು ದೀಪಸ್ತಂಭದ ಮಾದರಿಯನ್ನು ನೋಡಬಹುದು. 

ಉಪಾಧ್ಯಾಯ ಮೂಡುಬೆಳ್ಳೆ 

Advertisement

Udayavani is now on Telegram. Click here to join our channel and stay updated with the latest news.

Next