ನವದೆಹಲಿ: 2004ರಲ್ಲಿ ಆಂಧ್ರಪ್ರದೇಶ ಸರ್ಕಾರದ ಜೊತೆ ಶಾಂತಿ ಮಾತುಕತೆಗೆ ಕಾರಣಕರ್ತನಾಗಿದ್ದ ನಿಷೇಧಿತ ಮಾವೋವಾದಿ ಸಂಘಟನೆಯ ಉನ್ನತ ಮುಖಂಡ ಅಕ್ಕಿರಾಜು ಹರಗೋಪಾಲ್ ಅಲಿಯಾಸ್ ರಾಮಕೃಷ್ಣ ಅನಾರೋಗ್ಯದಿಂದ ಛತ್ತೀಸ್ ಗಢದಲ್ಲಿ ನಿಧನರಾಗಿರುವುದಾಗಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಮುಂದುವರಿದ ಉಗ್ರರ ಅಟ್ಟಹಾಸ: ಭಯೋತ್ಪಾದಕರ ದಾಳಿಗೆ ಸೇನಾ ಅಧಿಕಾರಿ, ಯೋಧ ಹುತಾತ್ಮ
ಮೂಲಗಳ ಪ್ರಕಾರ, ಆರ್ ಕೆ ಎಂದೇ ಕುಖ್ಯಾತಿ ಪಡೆದಿದ್ದ 58 ವರ್ಷದ ನಕ್ಸಲ್ ಮುಖಂಡ ದೀರ್ಘಕಾಲದ ಅನಾರೋಗ್ಯದಿಂದ ದಕ್ಷಿಣ ಬಸ್ತಾರ್ ನಲ್ಲಿ ಬುಧವಾರ ಸಾವನ್ನಪ್ಪಿರುವುದಾಗಿ ಹೇಳಿದೆ. ಆರ್ ಕೆ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ-ಮಾವೋವಾದಿ ಕೇಂದ್ರ ಸಮಿತಿಯ ಸದಸ್ಯ ಮತ್ತು ನಿಷೇಧಿತ ಸಂಘಟನೆಯ ಆಂಧ್ರ-ಒಡಿಶಾ ಗಡಿ ವಿಶೇಷ ವಲಯ ಸಮಿತಿಯ ಉಸ್ತುವಾರಿಯಾಗಿ ಕಾರ್ಯನಿರ್ವಹಿಸಿರುವುದಾಗಿ ವರದಿ ವಿವರಿಸಿದೆ.
ಮಾವೋವಾದಿ ಸಂಘಟನೆಯಲ್ಲಿ ಪ್ರಮುಖ ವಿಚಾರವಾದಿಯಾಗಿದ್ದ ಆರ್ ಕೆ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು, ಅಷ್ಟೇ ಅಲ್ಲ ಆರ್ ಕೆ ಬಗ್ಗೆ ಮಾಹಿತಿ ಕೊಟ್ಟವರಿಗೆ 97 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಪೊಲೀಸ್ ಇಲಾಖೆ ಘೋಷಿಸಿತ್ತು.
ಮಾವೋವಾದಿ ಉನ್ನತ ನಾಯಕನ ನಿಧನದ ಸುದ್ದಿಯನ್ನು ಚತ್ತೀಸ್ ಗಢ್ ಪೊಲೀಸರು ಖಚಿತಪಡಿಸಿದ್ದಾರೆ. ಗುಪ್ತಚರ ಇಲಾಖೆ ಕೂಡಾ ಸ್ಪಷ್ಟಪಡಿಸಿರುವುದಾಗಿ ವರದಿ ತಿಳಿಸಿದೆ. ಏತನ್ಮಧ್ಯೆ ಸಿಪಿಐ(ಮಾವೋವಾದಿ) ಆರ್ ಕೆ ಸಾವಿನ ಕುರಿತು ಯಾವುದೇ ಪ್ರಕಟಣೆ ನೀಡಿಲ್ಲ.
2016ರ ಅಕ್ಟೋಬರ್ ನಲ್ಲಿ ಒಡಿಶಾ ಮಲ್ಕಾನ್ ಗಿರಿ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಆರ್ ಕೆ ಗಾಯಗೊಂಡಿದ್ದು, ಈ ಸಂದರ್ಭದಲ್ಲಿ ನಡೆದ ಎನ್ ಕೌಂಟರ್ ನಲ್ಲಿ 30 ಮಂದಿ ಮಾವೋವಾದಿಗಳು ಸಾವನ್ನಪ್ಪಿದ್ದರು. ಅಂದು ಪ್ರಾಥಮಿಕ ವರದಿಯ ಪ್ರಕಾರ ಆರ್.ಕೆ ನಾಪತ್ತೆಯಾಗಿರುವುದಾಗಿ ವರದಿಯಾಗಿತ್ತು.
ಮಾವೋವಾದಿ ಪರ ಸಹಾನುಭೂತಿ ಹೊಂದಿದ ಗುಂಪು ಮತ್ತು ಮಾನವ ಹಕ್ಕು ಹೋರಾಟಗಾರರು ಆರ್ ಕೆ ಪೊಲೀಸ್ ವಶದಲ್ಲಿದ್ದಾರೆ ಎಂದು ಆರೋಪಿಸಿದ್ದರು. ಆರ್ ಕೆ ಪತ್ನಿ ಶಿರೀಷಾ ಹೈದರಾಬಾದ್ ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕೊನೆಗೆ ಮಾವೋವಾದಿ ಸಂಘಟನೆ ಆರ್ ಕೆ ಸುರಕ್ಷಿತರಾಗಿರುವುದಾಗಿ ಪ್ರಕಟಣೆ ಹೊರಡಿಸಿತ್ತು.