Advertisement

ಜಿಲ್ಲೆಯಲ್ಲೇ ಅತೀ ಹೆಚ್ಚು ಮಕ್ಕಳು: ಶಿಕ್ಷಕರ ಕೊರತೆ 

08:31 PM Sep 19, 2021 | Team Udayavani |

ತೆಕ್ಕಟ್ಟೆ:   ಕುಂದಾಪುರ ತಾಲೂಕಿನ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಶಾಲೆಯು 1892ರಲ್ಲಿ ಸ್ಥಾಪನೆಗೊಂಡಿದೆ. ಶತಮಾನೋತ್ತರ ಬೆಳ್ಳಿ ಹಬ್ಬ ಪೂರೈಸಿದ ಈ ಶಾಲೆಗೆ ಉತ್ತಮ ಶಾಲಾ ರಾಜ್ಯ ಪ್ರಶಸ್ತಿ ಲಭಿಸಿದೆ. ಗುಣಾತ್ಮಕ ಶಿಕ್ಷಣಕ್ಕಾಗಿ ಇಲಾಖೆಯಿಂದ “ಎ’ ಗ್ರೇಡ್‌ ಪಡೆದಿದ್ದು, ರಾಜ್ಯದಲ್ಲಿಯೇ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ಕನ್ನಡ ಶಾಲೆಯೊಂದು ಕೋವಿಡ್‌ ಆತಂಕದ ನಡುವೆಯೂ ಕೂಡ ದಾಖಲಾತಿಯಲ್ಲಿ ದಾಖಲೆ ಬರೆದದ್ದು ವಿಶೇಷ.

Advertisement

253 ವಿದ್ಯಾರ್ಥಿಗಳ ದಾಖಲಾತಿ :

ತೆಕ್ಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಈ ಸರಕಾರಿ  ಶಾಲೆಯಲ್ಲಿ  ಪ್ರಸ್ತುತ 778 ವಿದ್ಯಾರ್ಥಿಗಳಿದ್ದಾರೆ. 2021-22ನೇ ಶೈಕ್ಷಣಿಕ ವರ್ಷದಲ್ಲಿ ಈಗಾಗಲೇ ಸುಮಾರು 253 ವಿದ್ಯಾರ್ಥಿಗಳು ಹೊಸದಾಗಿ ದಾಖಲಿಸಿಕೊಂಡಿದ್ದಾರೆ. 1ನೇ ತರಗತಿಗೆ ಸುಮಾರು 112 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 2ರಿಂದ 7ನೇ ತರಗತಿಗೆ  141 ಮಂದಿ ಹೊಸದಾಗಿ ದಾಖಲಾಗುವುದರೊಂದಿಗೆ ಈ ತರಗತಿಗಳಲ್ಲಿನ  ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 566 ಆಗಿದೆ.

ವರ್ಷದಿಂದ ವರ್ಷಕ್ಕೆ ಏರಿಕೆ :

2016-17ರಲ್ಲಿ 397, 2017-18ರಲ್ಲಿ 467,  2019-20ರಲ್ಲಿ 555, 2020- 21ರಲ್ಲಿ 630 ವಿದ್ಯಾರ್ಥಿಗಳಿದ್ದರು.

Advertisement

2017-18ನೇ ಶೈಕ್ಷಣಿಕ ವರ್ಷ ದಲ್ಲಿ ಇಂಗ್ಲಿಷ್‌ ಮಾಧ್ಯಮ ವಿಭಾಗ ಆರಂಭವಾಗಿದೆ.  ಶಾಲೆಯಲ್ಲಿ  ಚಿಲ್ಡ್ರನ್‌ ಪಾರ್ಕ್‌, ಕಂಪ್ಯೂಟರ್‌ ಹಾಗೂ ಚಿತ್ರಕಲೆ ತರಬೇತಿ, ವಿಜ್ಞಾನ ಕಲಿಕೆಗೆ ಸುಸಜ್ಜಿತ ಪ್ರತ್ಯೇಕ ಪ್ರಯೋಗಾಲಯ ವ್ಯವಸ್ಥೆ ಇದೆ. ಶಾಲೆಯಲ್ಲಿ ಯೋಗ ಶಿಕ್ಷಣ, ಪ್ರತೀ ತರಗತಿಗೂ ರೇಡಿಯೋ ಬ್ರಾಡ್‌ ಕಾಸ್ಟಿಂಗ್‌ ವ್ಯವಸ್ಥೆ, ಹೆಚ್ಚಿನ ಕಲಿಕೆಗಾಗಿ ಎಲ್‌ಸಿಡಿ ಪ್ರಾಜೆಕ್ಟರ್‌ನ ಅಳವಡಿಕೆ, ಎಜ್ಯುಸ್ಯಾಟ್‌ಗಳನ್ನು ಹೊಂದಿದೆ.

ಇಲಾಖೆಯು ಶಿಕ್ಷಕರ ಕೊರತೆ, ಕ್ರೀಡಾ ಚಟುವಟಿಕೆಗಾಗಿ ವಿಶಾಲ ಮೈದಾನದ ಕೊರತೆಯನ್ನು ನೀಗಿಸಿದರೆ ಈ ಶಾಲೆಗೆ  ಅನುಕೂಲವಾಗುವುದು.

ಶಿಕ್ಷಕರ ಕೊರತೆ :

ಸದ್ಯ ಸಂಸ್ಥೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಸೇರಿ 13 ಮಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇಲಾಖೆಯ ನಿಯಮದ ಪ್ರಕಾರ ಕನಿಷ್ಠ 20 ಶಿಕ್ಷಕರ ಆವಶ್ಯಕತೆ ಇರುವುದರಿಂದ 7 ಶಿಕ್ಷಕರ ಕೊರತೆ ಕಾಡುತ್ತಿದೆ. ಈಗಾಗಲೇ ಕರ್ಣಾಟಕ ಬ್ಯಾಂಕ್‌ ವತಿಯಿಂದ ಸುಮಾರು 22 ಲಕ್ಷ ರೂ. ವೆಚ್ಚದಲ್ಲಿ ಶಾಲಾ ವಾಹನ ನೀಡಿದೆ.  ಸುಮಾರು 250ಕ್ಕೂ ಅಧಿಕ ವಿದ್ಯಾರ್ಥಿಗಳು 12 ಕಿ.ಮೀ. ದೂರದ ಗ್ರಾಮೀಣ ಪ್ರದೇಶದಿಂದ ಆಗಮಿಸಬೇಕಾದ ಅನಿವಾರ್ಯತೆ ಇದ್ದು ಇನ್ನೂ 2 ಶಾಲಾ ವಾಹನಗಳ ಅಗತ್ಯ ಇದೆ.

ಗುಣಮಟ್ಟದ ಶಿಕ್ಷಣ : ಉತ್ತಮ ಶಾಲಾ ರಾಜ್ಯ ಪ್ರಶಸ್ತಿ ಪುರಸ್ಕೃತ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಶ್ರಮಿಸುತ್ತಿದೆ. ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೆಚ್ಚಿನ ಶಿಕ್ಷಕರ ಅಗತ್ಯ ಇದೆ.ಲಲಿತಾ ಸಖಾರಾಮ್‌,  ಮುಖ್ಯ ಶಿಕ್ಷಕರು

ವಿಶಾಲ ಮೈದಾನದ ಬೇಡಿಕೆ:

ಈ ಕನ್ನಡ ಸರಕಾರಿ ಶಾಲೆಯ ದಾಖಲಾತಿ ಜಿಲ್ಲೆಯಲ್ಲೇ ಅತೀ ಹೆಚ್ಚಾಗಿದ್ದು, ವಿದ್ಯಾರ್ಥಿಗಳಿಗೆ ಕಲಿಕೆಯ ಜತೆಗೆ ಪಾಠೇತರ ಚಟುವಟಿಕೆಗಳಿಗೆ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ವಿಶಾಲ ಆಟದ ಮೈದಾನದ ಬೇಡಿಕೆ ಇದೆ.ಸಂತೋಷ್‌ ಪೂಜಾರಿ,  ಎಸ್‌ಡಿಎಂಸಿ ಅಧ್ಯಕ್ಷರು

 

 ಟಿ.ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next