ಆನಂದನಿಗೆ ಮೂಗಿನ ತುದಿಯಲ್ಲೇ ಕೋಪ. ಅಮ್ಮ ಅಡುಗೆ ಮಾಡುವುದು ತಡವಾಯಿತೆಂದು ಅಮ್ಮನ ಜೊತೆ ಠೂ ಬಿಟ್ಟ. ಮುಂದೇನಾಯ್ತು?
ಒಂದೂರಿನಲ್ಲಿ ಚಿಕ್ಕ ಮನೆಯಿತ್ತು. ಅಲ್ಲಿ ಅಮ್ಮ ನಿರ್ಮಲಾ ಮತ್ತು ಮಗ ಆನಂದ ಇಬ್ಬರೇ ವಾಸಿಸುತ್ತಿದ್ದರು. ಅಪ್ಪ ರಮಾನಂದ ದೂರದೂರಿನ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಗೀಗ ಊರಿಗೆ ಬಂದು ಹೋಗುತ್ತಿದ್ದ. ಅಮ್ಮ ಗಾರ್ಮೆಂಟ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಮಗ ಹೈಸ್ಕೂಲ್ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ. ಆದರೆ, ಅವನಿಗೆ ಸಿಟ್ಟು ಜಾಸ್ತಿ. ಅಮ್ಮ ಎಷ್ಟು ಬುದ್ಧಿವಾದ ಹೇಳಿದರೂ ಕೇಳುತ್ತಿರಲಿಲ್ಲ. ಒಂದು ದಿನ ಸಂಜೆ ಅಮ್ಮ ಗಾರ್ಮೆಂಟ್ ಶಾಪಿನಿಂದ ತಡಾವಗಿ ಬಂದಳು. ಹಾಗಾಗಿ ಅಡುಗೆ ಮಾಡುವುದು ತಡವಾಯಿತು.
ಮೊದಲೇ ಹಸಿದಿದ್ದ ಆನಂದನಿಗೆ ಅಮ್ಮನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಅವನು “ನನಗೆ ಹಸಿವೆಯಾಗಿ ಕಣ್ಣುಗತ್ತಲೆ ಬರುವಂತಾಯಿತು. ನೀನು ಇನ್ನೂ ಅಡುಗೆಯನ್ನೇ ಮಾಡಿಲ್ಲ. ನಿನಗೆ ಗಾರ್ಮೆಂಟ್ ಕೆಲಸವೇ ದೊಡ್ಡದಾಯಿತು’ ಎಂದು ಎಗರಾಡಿದ. ಅಮ್ಮ ಯಾವಾಗಲೂ ಸಹನೆಯಿಂದಲೇ ಅವನನ್ನು ಸಂಭಾಳಿಸುತ್ತಿದ್ದಳು. ಆದರೆ ಆ ದಿನ ಅವಳಿಗೂ ಸಿಟ್ಟು ಬಂತು. “ಕೆಲಸ ಮಾಡುವವರ ಕಷ್ಟ,, ಮಾಡುವವರಿಗೇ ಗೊತ್ತಾಗುತ್ತದೆ. ನಿನಗೆ ಹೇಗೆ ಗೊತ್ತಾಗುತ್ತದೆ? ಡಬ್ಬದಲ್ಲಿ ತಿಂಡಿಯಿತ್ತಲ್ಲ. ತಿನ್ನಬೇಕಾಗಿತ್ತು’ ಎಂದಳು. ಆನಂದನ ಕೋಪ ಹೆಚ್ಚಾಯಿತು. ಅಂದು ರಾತ್ರಿ ಅವನು ಊಟ ಮಾಡದೆಯೇ ಮಲಗಿದ. ಆವತ್ತಿನಿಂದ ಅವನು, ಅಮ್ಮನೊಡನೆ ಒಂದು ಮಾತೂ ಆಡಲಿಲ್ಲ. ಅಮ್ಮನಿಗೆ ದುಃಖವಾಯಿತು.
ಮಗ ಮಾತುಬಿಟ್ಟರೂ ಅಮ್ಮ ಅವನನ್ನು ಮಾತಾಡಿಸುತ್ತಲೇ ಇದ್ದಳು. ಪ್ರೀತಿಯಿಂದ ಎಲ್ಲ ರೀತಿಯ ಉಪಚಾರ ಮಾಡುತ್ತಿದ್ದಳು. ಮಗನ ಮೇಲಿನ ಮಮತೆಯಿಂದ ಸೇವೆ ಮಾಡುತ್ತಿದ್ದಳು. ಅದು ಹೃಯಾಂತರಾಳದ ಪ್ರೀತಿ- ಮಮತೆ. ಇಷ್ಟಾದರೂ ಆನಂದ ಮಾತಾಡುತ್ತಿರಲಿಲ್ಲ. ಕೋಪ ನಿಂತ ಮೇಲೆ ಅವನೇ ಮಾತಾಡಿಸುತ್ತಾನೆ ಎಂದು ಅಮ್ಮನೂ ಸುಮ್ಮನಾದಳು. ಅದೊಂದು ದಿನ, ಸ್ಕೂಲಿಗೆ ಹೋದ ಆನಂದ ಆಟದ ಮೈದಾನದಲ್ಲಿ ಆಡುವಾಗ ಬಿದ್ದು ಪೆಟ್ಟುಮಾಡಿಕೊಂಡ. ಮನೆಗೆ ಬಂದು ಅಮ್ಮನಿಗೂ ಹೇಳಲಿಲ್ಲ. ಆದರೆ ಅದು ಅವಳಿಗೆ ಗೊತ್ತಾಯಿತು. ಆನಂದ ಬೇಡವೆಂದರೂ ಕೇಳದೆ ತಾನಾಗಿಯೇ ಅವನ ಕಾಲಿಗೆ ಔಷಧ ಹಾಕಿ ಬ್ಯಾಂಡೇಜ್ ಕಟ್ಟಿದಳು. ಆ ದಿನ ರಾತ್ರಿ ಆನಂದನಿಗೆ ಜ್ವರಬಂತು.
ನಿದ್ರೆಯಲ್ಲಿ ಅವನು ನರಳುತ್ತಿದ್ದುದನ್ನು ಕಂಡು ಅಮ್ಮನೇ ಹತ್ತಿರ ಬಂದು ಹಣೆ ಮುಟ್ಟಿ ನೋಡಿದಾಗ ವಿಪರೀತ ಜ್ವರ ಇದ್ದದ್ದು ತಿಳಿದದ್ದು. ಕೂಡಲೆ ಅವನನ್ನು ಹೊರಡಿಸಿಕೊಂಡು ಹತ್ತಿರದ ವೈದ್ಯರ ಬಳಿಗೆ ಕರೆದೊಯ್ದಳು. ಆನಂದನನ್ನು ಪರೀಕ್ಷಿಸಿದ ಡಾಕ್ಟರು “ಅಡ್ಮಿಟ್ ಮಾಡಬೇಕು. ದೇಹದಲ್ಲಿ ನಿಶ್ಯಕ್ತಿಯಾಗಿದೆ’ ಎಂದರು. ಆನಂದ ನಾಲ್ಕೈದು ದಿವಸಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು. ಅಷ್ಟು ದಿನವೂ ಅಮ್ಮ, ಹಗಲು ರಾತ್ರಿಯೆನ್ನದೆ ಮಗನ ಉಪಚಾರದಲ್ಲೇ ಸಮಯ ಕಳೆದಳು.
ಆ ವೇಳೆಗೆ ಡಾಕ್ಟರರಿಗೆ ಆನಂದ ತನ್ನ ತಾಯಿಯೊಡನೆ ಮಾತು ಬಿಟ್ಟಿರುವ ಸಂಗತಿ ತಿಳಿಯಿತು. ಆನಂದ ಗುಣಮುಖನಾಗಿ ಮನೆಗೆ ಹಿಂದಿರುಗುವ ದಿನ ಡಾಕ್ಟರ್ “ಅಮ್ಮನಿಗೆ ಬೇರೆ ಯಾರೂ ಸಾಟಿಯಲ್ಲ. ಹಗಲು ರಾತ್ರಿ ನಿನ್ನನ್ನು ನೋಡಿಕೊಂಡಳು, ಉಪಚರಿಸಿದಳು. ಅವರಿಲ್ಲದೇ ಇರುತ್ತಿದ್ದರೆ ನಿನ್ನ ಪರಿಸ್ಥಿತಿ ತುಂಬ ಗಂಭೀರವಾಗುತ್ತಿತ್ತು.’ ಎಂದು ಬುದ್ಧಿವಾದ ಹೇಳಿದರು. ಆನಂದನಿಗೂ ತನ್ನ ತಪ್ಪಿನ ಅರಿವಾಗಿತ್ತು. ಹಗಲೂ ರಾತ್ರಿಯೆನ್ನದೆ ತನ್ನನ್ನು ಉಪಚರಿಸಿದ, ಮುದ್ದು ಮಾಡಿದ ಅಮ್ಮ ಅವನಿಗೆ ದೇವತೆಯಂತೆ ಕಂಡಳು. ಅವನು “ತಪ್ಪಾಯ್ತಮ್ಮಾ…’ ಎಂದು ಅಳುತ್ತ ಅಮ್ಮನ ಕೈ ಹಿಡಿದನು. ತನ್ನ ಮಗನ ಮುಗ್ಧ ಮಾತನ್ನು ಕೇಳಿ ಅಮ್ಮನ ಕಣ್ಣಾಲಿಗಳೂ ತುಂಬಿಬಂದವು. “ನೀನಿನ್ನೂ ಚಿಕ್ಕ ಹುಡುಗ…’ ಎಂದು ಅವಳು ಮಗನನ್ನು ಅಪ್ಪಿಕೊಂಡು ಮುದ್ದಿಸಿದಳು.
– ವನರಾಗ ಶರ್ಮಾ