Advertisement

ಬಲು ದೊಡ್ಡದೀ ಚಿಕ್ಕಪೇಟೆ!

12:10 PM Jun 04, 2018 | |

“ಚಿಕ್ಕಪೇಟೆ’! ಇದು ರಾಜಧಾನಿಯ ಹೃದಯ ಭಾಗದಲ್ಲಿರುವ ಮಾಯಾನಗರಿ. ಅಷ್ಟೇ ಅಲ್ಲ, ಸಿಲಿಕಾನ್‌ ಸಿಟಿಯ “ಬಿಸಿನೆಸ್‌ ಹಬ್‌’.
“ಊರಿಗೆ ಬಂದವರು ನೀರಿಗೆ ಬರಲೇಬೇಕು’ ಎಂಬಂತೆ ಬೆಂಗಳೂರಿಗೆ ಬಂದವರು ಚಿಕ್ಕಪೇಟೆಯಲ್ಲೊಮ್ಮೆ ಸುತ್ತು ಹಾಕಿ ಬರಲೇಬೇಕು. ಇನ್ನೂ ಒಂದು ವೈಶಿಷ್ಟವೇನೆಂದರೆ ಇದು ಜನವಸತಿ ಪ್ರದೇಶವೂ ಹೌದು. ಸುಮಾರು ನಾಲ್ಕು ನೂರು ವರ್ಷಗಳಷ್ಟು ಇತಿಹಾಸವಿರುವ ಚಿಕ್ಕಪೇಟೆಯಲ್ಲಿ ಇನ್ನೂ ಹತ್ತಾರು ಪೇಟೆಗಳಿವೆ.

Advertisement

ತಿಗಳಪೇಟೆ, ಮಾಮೂಲ್‌ಪೇಟೆ, ನಗರ್ತಪೇಟೆ, ಅಕ್ಕಿಪೇಟೆ, ಬಿನ್ನಿಪೇಟೆ ಸೇರಿದಂತೆ ಹಲವು ಪೇಟೆಗಳ ಸಂಗಮವೇ ಈ ಚಿಕ್ಕಪೇಟೆ. ಯಾವ ಪೇಟೆ ಎಲ್ಲಿಗೆ ಆರಂಭವಾಗಿ ಎಲ್ಲಿಗೆ ಮುಗಿಯುತ್ತದೆ ಎನ್ನುವುದನ್ನು ಗೊತ್ತು ಮಾಡಿಕೊಳ್ಳುವುದೇ ಕಷ್ಟ. ಒಂದು ಸುತ್ತು ಓಡಾಡಿ  ಬಂದರೆ, ಪ್ರಪಂಚವನ್ನೇ ಸುತ್ತಿಬಂದ ಅನುಭವ ಆಗುವಂತಿದೆ. ಎಲ್ಲಾ ವರ್ಗದವರ ವಾಣಿಜ್ಯ ಕೇಂದ್ರವಾಗಿರುವ ಚಿಕ್ಕಪೇಟೆ ಸಹಸ್ರಾರು ಕುಟುಂಬಗಳ “ಅಕ್ಷಯಪಾತ್ರೆ’ ಎನ್ನುವುದೂ ಗಮನಾರ್ಹ.

ದಕ್ಷಿಣ ಭಾರತವಷ್ಟೇ ಅಲ್ಲ, ಗುಜರಾತ್‌, ಪಂಜಾಬ್‌, ಕೋಲ್ಕತಾ, ದೆಹಲಿ ಹಾಗೂ ವಾಣಿಜ್ಯ ರಾಜಧಾನಿ ಮುಂಬೈ ನಗರಗಳಿಗೂ ಚಿಕ್ಕಪೇಟೆಗೂ ಅವಿನಾಭಾವ ಸಂಬಂಧವಿದೆ. ಅಷ್ಟೇ ಅಲ್ಲ, ಚಿರಪರಿಚಿತ ಮತ್ತು ವ್ಯಾಪಾರಿ ಸ್ನೇಹಿ ಸ್ಥಳವೂ ಆಗಿದೆ. ಇನ್ನೊಂದು ವಿಶೇಷ ಏನೆಂದರೆ, ಇಲ್ಲಿನ ಫ‌ೂಟ್‌ಪಾತ್‌ ನೂರಾರು ಸಣ್ಣ-ಪುಟ್ಟ ವ್ಯಾಪಾರಿಗಳಿಗೆ ಜೀವನಾಧಾರ. ಕಾರಣ, ದಿನ ಬೆಳಗಾದರೆ ಇಲ್ಲಿಯೇ ವ್ಯಾಪಾರ ಮಾಡಿಕೊಂಡು ಬದುಕು ಸಾಗಿಸುತ್ತಾರೆ.

ಈಗಲೂ ಹಳೆಯ ಸೊಗಡು: ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ ಚಿಕ್ಕಪೇಟೆ, ಹಲವು ವಿಚಾರಗಳಲ್ಲಿ ಇನ್ನೂ ತನ್ನ ಹಳೆಯ ಸಂಸ್ಕೃತಿಯನ್ನೇ ಉಳಿಸಿಕೊಂಡಿದೆ. ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದಿಂದ ಸನಿಹದಲ್ಲಿರುವ ಚಿಕ್ಕಪೇಟೆ ಇನ್ನೂ ಆಧುನಿಕ ಸ್ಪರ್ಶ ಪಡೆದುಕೊಳ್ಳದೇ, ಹಳೆಯ ಸೊಗಡನ್ನೇ ಉಳಿಸಿಕೊಂಡಿದ್ದನ್ನು ಕಾಣಬಹುದು. ಇಕ್ಕಟ್ಟಾದ ಗಲ್ಲಿಗಳಲ್ಲಿ ಬಗೆ ಬಗೆಯ ವಸ್ತುಗಳ ಅಂಗಡಿಗಳು ತಳವೂರಿರುತ್ತವೆ.

ಒಂದು ಅಂಗಡಿಗಿಂಥ ಇನ್ನೊಂದು ಅಂಗಡಿ ಅತ್ಯುತ್ತಮ ಎನ್ನುವ ರೀತಿಯಲ್ಲಿ ಸಿಂಗಾರಗೊಂಡಿರುತ್ತವೆ. ಅಲ್ಲಿ ಸಿಗದಿರುವುದು ಇಲ್ಲಾದರೂ ಸಿಕ್ಕೀತು ಎನ್ನುವ ವಿಶ್ವಾಸ ಮೂಡಿಸುವಂತೆ ಆಹ್ವಾನಿಸುತ್ತಿರುತ್ತವೆ. ಈ ಪರಿಯಾಗಿ ವ್ಯಾಪಾರ ನಡೆಸುವುದನ್ನು ನೋಡುವುದೇ ಹಬ್ಬ. ಬೆಳಗ್ಗೆಯಿಂದ ರಾತ್ರಿ 8 ಗಂಟೆ ತನಕವೂ ಜನಜಂಗುಳಿ ಇರುತ್ತದೆ. ಮಾಮೂಲಿ ಪೇಟೆ, ಬಳೆ ಪೇಟೆ, ನಗರ್ತಪೇಟೆ, ಅಕ್ಕಿ ಪೇಟೆ,

Advertisement

ಬಿನ್ನಿ ಪೇಟೆ ಒ.ಕೆ.ವಿ. ರಸ್ತೆ. ಬಿ.ವಿ.ಕೆ.ಅಯ್ಯಂಗರ್‌ ರಸ್ತೆ, ಚನ್ನಕೇಶವ ದೇವಸ್ಥಾನ ರಸ್ತೆಗಳು ಸೇರಿ ಹೆಚ್ಚಿನ ಗಲ್ಲಿಗಳಲ್ಲಿ ಇಂಥ ಸನ್ನಿವೇಶಗಳನ್ನು ಕಾಣುತ್ತೇವೆ. ಕಿರಿದಾದ ರಸ್ತೆಯನ್ನೇ ಆಕ್ರಮಿಸಿಕೊಂಡಿರುವ ವಾಹನಗಳು, ಪಾರ್ಕಿಂಗ್‌ ತಾಣಗಳಾಗಿರುವ ಕಿಷ್ಕಿಂದೆ ರಸ್ತೆಗಳು, ವಾಹನಗಳೊಂದಿಗೆ ಪೈಪೋಟಿಗೆ ಇಳಿದವರಂತೆ ಹೆಜ್ಜೆ ಹಾಕುವ ಪಾದಚಾರಿಗಳು, ಗ್ರಾಹಕರ ಓಡಾಟ ಇಲ್ಲಿನ ಸಾಮಾನ್ಯ ದೃಶ್ಯಗಳಾಗಿವೆ.

ಸರ್ಕಾರಕ್ಕೆ ಹೆಚ್ಚಿನ ಆದಾಯ ತೆರಿಗೆ ವಿಚಾರಕ್ಕೆ ಬಂದರೆ ರಾಜ್ಯ ಸರ್ಕಾರಕ್ಕೆ ಆದಾಯ ತಂದು ಕೊಡುವ ಚಿನ್ನದ ಕೋಳಿ. ಅಧಿಕ ಆದಾಯವನ್ನು ಸಂದಾಯ ಮಾಡುವುದರಲ್ಲಿ ಚಿಕ್ಕಪೇಟೆ ಮೊದಲ ಸ್ಥಾನದಲ್ಲಿದೆ. ಎಂ.ಜಿ.ರಸ್ತೆ, ಜಯನಗರ, ರಾಜಾಜಿನಗರ, ಕೋರಮಂಗಲ, ಮೆಜೆಸ್ಟಿಕ್‌ ಸೇರಿ ನಗರದ ಇನ್ನಿತರ ಪ್ರದೇಶಗಳಲ್ಲಿ ಪ್ರತಿನಿತ್ಯ ವ್ಯಾಪಾರ ವಹಿವಾಟು ನಡೆದರೂ, ಚಿಕ್ಕಪೇಟೆಯಲ್ಲಿ ನಡೆಯುವಷ್ಟು ವ್ಯವಹಾರ ನಡೆಯುವುದಿಲ್ಲ.

ವ್ಯವಹಾರಕ್ಕೆ ತಂಕ್ಕಂತೆ ವಹಿವಾಟು: ಚಿಕ್ಕಪೇಟೆಯಲ್ಲಿ ಬಟ್ಟೆ ಅಗಂಡಿಗಳು ಸಾವಿರಾರು. ಒಂದು ಅಂದಾಜಿನ ಪ್ರಕಾರ ಸುಮಾರು 3ರಿಂದ 4 ಸಾವಿರ ಬಟ್ಟೆ ಅಂಗಡಿಗಳಿವೆ. ರಿಟೇಲ್‌ ವ್ಯಾಪಾರಿಗಳು ದಿನಕ್ಕೆ 10ರಿಂದ 20 ಸಾವಿರ ರೂ. ವ್ಯಾಪಾರ ಮಾಡಿದರೆ, ಇತರರು 40ರಿಂದ 50 ಸಾವಿರ ರೂ.ಗಳ ವಹಿವಾಟು ನಡೆಸುತ್ತಾರೆ.

ಹೋಲ್‌ ಸೇಲ್‌ ಮಾರಾಟಗಾರರು ಕೂಡ ದಿನಕ್ಕೆ ಹೆಚ್ಚು ಕಡಿಮೆ 2 ಲಕ್ಷ ಸಂಪಾದನೆ ಮಾಡುತ್ತಾರೆ. ಹೋಲ್‌ಸೇಲ್‌ ಬಟ್ಟೆ ಮಾಲೀಕರ ವ್ಯಾಪಾರ ದಿನಕ್ಕೆ ಕೋಟಿ ಕೋಟಿಗಳ ಲೆಕ್ಕಗಳಲ್ಲಿ ಇರುತ್ತವೆ. ಸಾಬೂನುಗಳಿಗೆ ಭಾರೀ ಬೇಡಿಕೆ ಇದ್ದು, ಆರ್ಥಿಕ ವಹಿವಾಟಿನ ಕೇಂದ್ರವಾಗಿ ಹೆಮ್ಮರವಾಗಿ ಬೆಳೆದಿರುವ ಚಿಕ್ಕಪೇಟೆ ಆದಾಯದ ದೃಷ್ಟಿಯಲ್ಲೂ ದೊಡ್ಡ ಪೇಟೆ.

ಸಾಲು ಸಾಲು ಸಾಬೂನು ಅಂಗಡಿಗಳು: ಚಿಕ್ಕಪೇಟೆಯಲ್ಲಿ ಸುಮಾರು 15 ಸಾವಿರ ಸಾಬೂನು ಅಗಂಡಿಗಳಿವೆ. ಒಬ್ಬೊಬ್ಬ ವ್ಯಾಪಾರಿಯೂ 25ರಿಂದ 40 ಸಾವಿರ ರೂ. ಸಂಪಾದಿಸುತ್ತಾರೆ. ರಾಜ್ಯದ ಎಲ್ಲ ಭಾಗಗಳಿಗೂ ಸಾಬೂನುಗಳನ್ನು ಪೂರೈಕೆ ಮಾಡುವ ಹೆಗ್ಗಳಿಕೆ ಚಿಕ್ಕಪೇಟೆಯದು. ನೆರೆಯ ತಮಿಳುನಾಡು, ಆಂಧ್ರಪ್ರದೇಶ, ಗೋವಾ ಮತ್ತು ಮುಂಬೈ ಸೇರಿ ಇನ್ನಿತರ ರಾಜ್ಯಗಳಿಗೂ ಚಿಕ್ಕಪೇಟೆಯಿಂದಲೇ ಸಾಬೂನುಗಳು ರವಾನೆಯಾಗುತ್ತವೆ ಎಂದು ಅಸೋಚಾಮದ ಸಂಚಾಲಕ ರಾಜ್‌ ಪುರೋಹಿತ್‌ ಹೇಳುತ್ತಾರೆ.

ಜೈಪುರ, ಗುಜರಾತ್‌ ನಂಟು: ಜೈಪುರದಿಂದ ಕಾಟನ್‌ ಉತ್ಪನ್ನಗಳು ಫ್ಯಾಶನ್‌ ಫ್ಯಾಬ್ರಿಕ್‌ (ಚೂಡಿಧಾರ, ಟಾಪ್ಸ್‌, ಲಗ್ಗಿನ್ಸ್‌), ಗುಜುರಾತ್‌ನ ಅಹಮದಾಬಾದ್‌ನಿಂದ ಪೂರೈಕೆಯಾಗುತ್ತವೆ. ಬಾಂಬೆ, ರಾಜಸ್ಥಾನದ ಜೈಪುರದಿಂದ ಅಲ್ಪ ಪ್ರಮಾಣದಲ್ಲಿ ರವಾನೆಯಾಗುತ್ತದೆ. ಕಾಟನ್‌ ಬಟ್ಟೆಗಳು ಹೆಚ್ಚಾಗಿ ಜೈಪುರದಿಂದ ಬೆಂಗಳೂರು ಸೇರುತ್ತವೆ.

ನೆರೆಯ ತಮಿಳುನಾಡಿನ ತಿರ್‌ಪುರ್‌ನಿಂದ ಟೀ ಶರ್ಟುಗಳು ಬರುತ್ತವೆ. ಅಧಿಕ ಬೆಲೆಯ ಟೀ ಶರ್ಟ್‌ಗಳು ಪಂಜಾಬಿನ ಲೂಧಿಯಾನ ಮತ್ತು ದೆಹಲಿಯಿಂದ‌ ಪೂರೈಕೆಯಾಗುತ್ತವೆ. ಕಡಿಮೆ ಬೆಲೆಯ ಟೀ ಶರ್ಟ್‌ಗಳು ಮತ್ತು ಬಾಂಡ್‌ ಬೇಬಿ ಸೇರಿ ಇನ್ನಿತರ ಪುಟಾಣಿಗಳ ಉತ್ಪನ್ನಗಳು ಚಿಕ್ಕಪೇಟೆಯಲ್ಲಿ ಲಭ್ಯವಿರುತ್ತವೆ. ರಾಜಸ್ಥಾನ, ಲೂದಿಯಾನದಿಂದ ಗೃಹಾಲಂಕಾರದ ವಿಶೇಷ ಸಾಮಗ್ರಿಗಳು ಚಿಕ್ಕಪೇಟೆಗೆ ಪೂರೈಕೆಯಾಗುತ್ತವೆ.

ಜೀನ್ಸ್‌ ಮಾರಾಟದಲ್ಲಿ ನಂ.1: ಪಂಜಾಬ್‌ನ ಲೂಧಿಯಾನ ಬಾಬಾ ಸೂಟ್ಸ್‌ಗೆ ಹೆಚ್ಚು ಹೆಸರುವಾಸಿ. ಇಲ್ಲಿಂದ ವಿಭಿನ್ನ ಶೈಲಿಯ ಸೂಟ್ಸ್‌ಗಳನ್ನು ಆಮದು ಮಾಡಿ ಕೊಳ್ಳಲಾಗುತ್ತದೆ. ಮುಂಬೈನ ಉಲ್ಲಾಸ್‌ ನಗರ ಜೀನ್ಸ್‌ ಉತ್ಪನ್ನಗಳಿಗೆ ಹೆಚ್ಚು ಪ್ರಸಿದ್ಧವಾಗಿದೆ. ಈ ಪ್ರದೇಶದಿಂದ ಹೆಚ್ಚು, ಹೆಚ್ಚು ಜೀನ್ಸ್‌ ಉತ್ಪನ್ನಗಳು ಬೆಂಗಳೂರಿಗೆ ಆಮದಾಗುತ್ತದೆ.

ವಿಶೇಷ ಏನೆಂದರೆ, ಜೀನ್ಸ್‌ ಬಟ್ಟೆಗಳ ಮಾರಾಟದಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ನೆರೆ ರಾಜ್ಯದ ಮಂದಿಯೂ ಶುಭ ಕಾರ್ಯಕ್ಕಾಗಿ ಬಟ್ಟೆ ಹಾಗೂ ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೆ, ಮದುವೆ ಮತ್ತು ಇತರೆ ಶುಭ ಸಮಾರಂಭಗಳ ಜವಳಿ ಖರೀದಿಗೆ ರಾಜ್ಯದ ಇತರೆ ಜಿಲ್ಲೆಗಳಿಂದಲೂ ಇಲ್ಲಿಗೆ ಬರುವವರಿದ್ದಾರೆ.

ಇಲ್ಲಿವೆ ಶತಮಾನದ ಅಂಗಡಿಗಳು: ಚಿಕ್ಕಪೇಟೆಯಲ್ಲಿ ಇಂದಿಗೂ ಕೂಡ ಶತಮಾನದಷ್ಟು ಹಳೆಯ ಅಂಗಡಿಗಳಿವೆ. ಮಾರುಕಟ್ಟೆ ಪ್ರದೇಶದ ಮೂಲಕ ಅವೆನ್ಯೂ ರಸ್ತೆಗೆ ಹೆಜ್ಜೆ ಇರಿಸಿದರೆ ಆರಂಭದಲ್ಲಿ ಶತಮಾನ ಪೂರೈಸಿದ ಅಂಗಡಿಗಳು ಸಿಗುತ್ತವೆ. ಇದರಲ್ಲಿ ಕೊಡೆ ಮಾರ್ಕ್‌ ಮದ್ರಾಸ್‌ ಸನ್ಸ್‌ನ ನಶೆ ಅಂಗಡಿ ಕೂಡ ಒಂದು. ಈಗ ಈ ಅಂಗಡಿಯನ್ನು ನಾಲ್ಕನೇ ತಲೆ ಮಾರಿನವರು ನಡೆಸುತ್ತಿದ್ದಾರೆ. ಈ ಹಿಂದೆ ನಮ್ಮ ತಂದೆ ಆಣೆ ಲೆಕ್ಕದಲ್ಲಿ ವ್ಯಾಪಾರ ಮಾಡುತ್ತಿದ್ದರು. ಈಗ ಅಪ್ಪ, ಅಜ್ಜನ ವೃತ್ತಿಯನ್ನೇ ಮುಂದುವರಿಸಿದ್ದೇನೆ ಎನ್ನತ್ತಾರೆ ಹಿರಿಯ ಜೀವಿ ಕಲೀಂವುಲ್ಲಾ ಶರೀಫ್.

ಇಲ್ಲಿಂದ ಮತ್ತೆರಡು ಹೆಜ್ಜೆ ಸಾಗಿದರೆ ನಾಗರಾಜ್‌ ಟೆಕ್ಸ್‌ಟೈಲ್ಸ್‌ ಅಂಗಡಿ ಇದೆ. ಈ ಅಂಗಡಿಗೂ ನೂರರ ಹರೆಯ. ಈ ಹಿಂದೆ ನಾಗರಾಜ್‌ ಅವರು ನಡೆಸುತ್ತಿದ್ದರು. ಈಗ ಅವರ ಮಗ ಟಿ.ಎಸ್‌. ಮುಂಜುನಾಥ್‌ ನಡೆಸಿಕೊಂಡು ಹೋಗುತ್ತಿದ್ದಾರೆ. ಹಿಂದೆ ಈ ಪ್ರದೇಶದಲ್ಲಿ ಇಷ್ಟೊಂದು ಜನ ಸಂದಣಿ ಇರಲಿಲ್ಲ. ಎತ್ತಿನ ಗಾಡಿ, ಕುದುರೆ ಗಾಡಿನಗಳ ಕಾರು ಬಾರು ಹೆಚ್ಚಾಗಿತ್ತು. ಆದರೆ ಅವೆಲ್ಲ ಮಾಯಾವಾಗಿ ಆಟೋ, ಗೂಡ್ಸ್‌ ಗಳು ಚಿಕ್ಕಪೇಟೆ ರಸ್ತೆಗೆ ಎಂಟ್ರಿ ಕೊಟ್ಟಿವೆ ಎನ್ನುತ್ತಾರೆ ನಾಗರಾಜ್‌.

ಬಂಗಾರ ವ್ಯವಹಾರ ಬಲು ಜೋರು: ಬಂಗಾರದ ವ್ಯಾಪಾರ, ಆಭರಣ ಕುಸುರಿ ಕೆಲಸಕ್ಕೂ ಚಿಕ್ಕಪೇಟೆ ಫೇಮಸ್‌. ಹೋಲ್‌ಸೇಲ್‌, ರೀಟೆಲ್‌ ವ್ಯಾಪಾರ ಜೋರಾಗಿದೆ. ಕೋಲ್ಕತಾ, ಮುಂಬೈ, ರಾಜ್‌ಕೋಟ್‌ ಮತ್ತು ತಮಿಳುನಾಡಿನಿಂದ ಬಂಗಾರ ಚಿಕ್ಕಪೇಟೆಗೆ ಪೂರೈಕೆಯಾಗುತ್ತವೆೆ. ಇಲ್ಲಿಂದ ಬೆಂಗಳೂರಿನ ಇತರೆ ಪ್ರದೇಶಗಳಿಗೆ ರವಾನೆಯಾಗುತ್ತವೆ. ಮಂಗಳೂರು, ಮೈಸೂರು, ಧಾರವಾಡ, ಕಲಬುರಗಿ ಸೇರಿ ರಾಜ್ಯದ ಬಹುತೇಕ ಸ್ಥಳಗಳಿಗೂ ಇಲ್ಲಿಂದ ಪೂರೈಕೆ ಮಾಡಲಾಗುತ್ತದೆ.

ಸಿಂಗಾಪುರ, ಇಟಲಿ, ಫ್ರಾನ್ಸ್‌, ಅಮೆರಿಕಾದಿಂದಲೂ ಚಿನ್ನವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಸುಮಾರು 500ಕ್ಕೂ ಹೆಚ್ಚು ಬಂಗಾರದ ಅಂಗಡಿಗಳು ಚಿಕ್ಕಪೇಟೆಯಲ್ಲಿದ್ದು, ಎಲ್ಲಾ ರೀತಿಯ ವ್ಯಾಪಾರಿಗಳು ಇಲ್ಲಿದ್ದಾರೆ. ಒಂದು ಅಂದಾಜಿನ ಪ್ರಕಾರ ಸುಮಾರು 20 ಕೋಟಿ ರೂ. ಹೋಲ್‌ಸೇಲ್‌ ವ್ಯಾಪಾರ ಮತ್ತು 10 ಕೋಟಿ ರೂ. ರಿಟೇಲ್‌ ವ್ಯಾಪಾರ ಪ್ರತಿನಿತ್ಯ ನಡೆಯುತ್ತದೆ ಎಂದು ಆಭರಣ ವ್ಯಾಪಾರಿಗಳ ಸಂಘದ ಅಧ್ಯಕ್ಷ ವೆಂಕಟೇಶ್‌ ಹೇಳುತ್ತಾರೆ. 

ರಾಜ್ಯಸರ್ಕಾರದ ಬೊಕ್ಕಸಕ್ಕೆ ಹೆಚ್ಚು ತೆರಿಗೆಯನ್ನು ಸಂದಾಯ ಮಾಡಲಾಗುತ್ತಿದೆ. ಆದರೆ ಚಿಕ್ಕಪೇಟೆಯ ವ್ಯಾಪಾರಿಗಳ ಹಲವು ಸಮಸ್ಯೆಗಳ ಬಗ್ಗೆ ಸರ್ಕಾರ ಸ್ಪಂದನೆ ಮಾಡುತ್ತಿಲ್ಲ. 
-ಅಸೋಚಾಮದ ಸಂಚಾಲಕ, ರಾಜ್‌ ಪುರೋಹಿತ್‌

* ದೇವೇಶ ಸೂರಗುಪ್ಪ 

Advertisement

Udayavani is now on Telegram. Click here to join our channel and stay updated with the latest news.

Next