Advertisement

ಟೋನಿ, ಆಂಥೋನಿ, ರಾಕಿ, ರವಿ…

12:34 AM Feb 25, 2020 | Lakshmi GovindaRaj |

ಬೆಂಗಳೂರು: ರವಿ ಪ್ರಕಾಶ್‌ ಪೂಜಾರಿ ಅಲಿಯಾಸ್‌ ರವಿ ಪೂಜಾರಿ ಬರೋಬ್ಬರಿ ನಾಲ್ಕು ಹೆಸರುಗಳಿಂದ ಗುರುತಿಸಿಕೊಡಿದ್ದಾನೆ! ಮುಂಬೈನ ಭೂಗತ ಪಾತಕಿ ಛೋಟಾ ರಾಜನ್‌ ಈತನನ್ನು ಆಂಥೋಣಿ ಫ‌ರ್ನಾಂಡಿಸ್‌ ಎಂದು ಕರೆದರೆ, ಈತ ತನ್ನನ್ನು ಟೋನಿ ಫ‌ರ್ನಾಂಡಿಸ್‌ ಎಂದು ಗುರುತಿಸಿಕೊಂಡಿದ್ದ.

Advertisement

ಇನ್ನು ಸೆನಗಲ್‌ ಮತ್ತು ಬುರ್ಕಿನೋ ಫಾಸೋದಲ್ಲಿ ರಾಕಿ ಫ‌ರ್ನಾಂಡಿಸ್‌ ಎಂಬ ಹೆಸರು ಇಟ್ಟುಕೊಂಡಿದ್ದು, ಈ ಸಂಬಂಧ ಎರಡು ಪಾಸ್‌ಪೋರ್ಟ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ತನ್ನ ಹುಟ್ಟಿದ ವರ್ಷವನ್ನು ಜ.25 1961 ಎಂದು ಉಲ್ಲೇಖೀಸಿಕೊಂಡಿದ್ದಾನೆ. ಈ ಪಾಸ್‌ಪೋಟ್‌ನಿಂದ ಅಮೆರಿಕ, ಇಂಡೋನೇಷಿಯಾ, ಮಲೇಶಿಯಾ, ಕೆನಡಾ ದೇಶಗಳಲ್ಲಿ ಸಂಚರಿಸಿದ್ದಾನೆ!

ಹೀಗೆಂದು ರವಿ ಪೂಜಾರಿ ಕುರಿತು ಮಾಹಿತಿ ನೀಡಿದವರು, ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮರ್‌ ಕುಮಾರ್‌ ಪಾಂಡೆ. ಸುದ್ದಿಗೋಷ್ಠಿಯಲ್ಲಿ ಅವರು ವಿವರ ನೀಡಿದ್ದು ಹೀಗೆ:

ಕರ್ನಾಟಕ ಪೊಲೀಸರು ಆತನ ವಿರುದ್ಧ ನಾನಾ ಪ್ರಕರಣಗಳ ಸಂಬಂಧ ಹೊರಡಿಸುತ್ತಿದ್ದ ರೆಡ್‌ಕಾರ್ನ್ರ್‌ ನೋಟಿಸ್‌ ಮೇರೆಗೆ ಕಾರ್ಯಾಚರಣೆಗಿಳಿದ ಸೆನಗಲ್‌ ಪೊಲೀಸರು, ಸುಮಾರು ಎರಡೂವರೆ ದಶಕಗಳ ಈತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ಮಧ್ಯೆ ಹೋಟೆಲ್‌ ಹೆಸರು ಹಾಗೂ ಈತನ ವ್ಯವಾರದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದ ಸೆನಗಲ್‌ ಇಂಟರ್‌ಪೋಲ್‌ ಪೊಲೀಸರು ಒಮ್ಮೆ ಈತನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು.

ಆದರೆ, ಈತ ನಾನು ರಾಕಿ ಫ‌ರ್ನಾಂಡಿಸ್‌ ಎಂದು ಸುಳ್ಳು ದಾಖಲೆಗಳನ್ನು ಸಲ್ಲಿಸಿ ತಪ್ಪಿಸಿಕೊಂಡಿದ್ದ. ಈ ಮಧ್ಯೆ 2018ರ ಜುಲೈ 18ರಂದು ರಾಜ್ಯ ಸರ್ಕಾರ ರವಿ ಪೂಜಾರಿ ಬಂಧನಕ್ಕೆ ಎಡಿಜಿಪಿ ಅಮರ್‌ ಕುಮಾರ್‌ ಪಾಂಡೆ ಅವರಿಗೆ ಸೂಚಿಸಿತ್ತು. ಅವರು ತಮ್ಮದೆ ತಂಡ ಕಟ್ಟಿಕೊಂಡು ವಿಶೇಷ ಕಾರ್ಯಾಚರಣೆ ನಡೆಸಿ 2018ರ ಡಿಸೆಂಬರ್‌16ರಂದು ಸೆನಗಲ್‌ ಪೊಲೀಸರಿಗೆ ಕೆಲವೊಂದು ದಾಖಲೆಗಳನ್ನು ಸಲ್ಲಿಸಿತ್ತು.

Advertisement

ಈ ಹಿನ್ನೆಲೆಯಲ್ಲಿ ಹೋಟೆಲ್‌ ಮಹಾರಾಜದಲ್ಲಿ ರವಿಯನ್ನು ಬಂಧನಕ್ಕೆ ಮುಂದಾಗಿದ್ದರು. ಆದರೆ, ಸಾವಿರಾರು ಜನರು ಇದ್ದರಿಂದ ಶಾಂತಿ ಸುವ್ಯವಸ್ಥೆಗೆ ತೊಡಕಾಗಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು. 2019ರಂದು ಜನವರಿ 19ರಂದು ತನ್ನ ಹೋಟೆಲ್‌ನ ಕೂಗಳತೆ ದೂರದಲ್ಲಿರುವ ಹೇರ್‌ ಸಲೂನ್‌ಗೆ ತಲೆ ಕೂದಲಿಗೆ ಬಣ್ಣ ಹಚ್ಚಿಸಿಕೊಳ್ಳಲು ಬಂದಾಗ ಆತನನ್ನು ಬಂಧಿಸಿ, ಬೆರಳಚ್ಚು ಆಧರಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು .ಜಾಮೀನು ನೀಡುವಂತೆ ಸ್ಥಳೀಯ ನ್ಯಾಯಾಲಯಕ್ಕೆ ಆರೋಪಿ ಮನವಿ ಮಾಡಿದ್ದ. ಆದರೆ, ಜಾಮೀನು ನಿರಾಕರಿಸಿತ್ತು.

ಇದೇ ವೇಳೆ ಕರ್ನಾಟಕ ಪೊಲೀಸರು ಕೂಡಲೇ ಆತನ ವಿರುದ್ಧ ತಮ್ಮಲ್ಲಿ ದಾಖಲಾಗಿರುವ ಪ್ರಕರಣಗಳ ದಾಖಲೆ ನೀಡಿ ಹಸ್ತಾಂತರಿಸುವಂತೆ ಕೋರಿದ್ದರು. ಆದರೆ, ಸೆನಗಲ್‌ ಮತ್ತು ಭಾರತದ ನಡುವೆ ಹಸ್ತಾಂತರ ಒಪ್ಪಂದ ಇಲ್ಲದರಿಂದ ಕಾನೂನು ಪ್ರಕ್ರಿಯೆಗೆ ತೊಡಕಾಗಿತ್ತು. ಹದಿಮೂರು ತಿಂಗಳು ಜೈಲಿನಲ್ಲಿದ್ದ ರವಿ ಪೂಜಾರಿಯನ್ನು 2020ರ ಫೆ.19ರಂದು ಅಲ್ಲಿನ ಸುಪ್ರೀಂ ಕೋರ್ಟ್‌ ದ್ವಿಪಕ್ಷೀಯ ಒಪ್ಪಂದ ಮೇರೆಗೆ ವಿಶೇಷ ಆದ್ಯತೆ ನೀಡಿ ಭಾರತಕ್ಕೆ ಹಸ್ತಾಂತರಿಸಿದೆ ಎಂದು ಅಮರ್‌ ಕುಮಾರ್‌ ಪಾಂಡೆ ಹೇಳಿದರು.

ಪಾತಕಿ ಪೂಜಾರಿ ವಿರುದ್ಧ ಮಂಗಳೂರಲ್ಲಿ 34 ಪ್ರಕರಣ
ಮಂಗಳೂರು: ಪೊಲೀಸರು ಬಂಧಿಸಿರುವ ಕುಖ್ಯಾತ ಭೂಗತ ಪಾತಕಿ ರವಿ ಪೂಜಾರಿ ವಿರುದ್ಧ 2007ರಿಂದ ತೊಡಗಿ 2018ರ ತನಕ ಮಂಗಳೂರಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಒಟ್ಟು 34 ಪ್ರಕರಣಗಳು ದಾಖಲಾಗಿವೆ. ಆ ಪೈಕಿ ಹಫ್ತಾಕ್ಕಾಗಿ ಮಾಡಿದ ಬೆದರಿಕೆ ಕರೆಗಳೇ ಅಧಿಕ!

ಒಂದು ಕೊಲೆ ಪ್ರಕರಣ, ಮೂರು ಶೂಟೌಟ್‌ ಪ್ರಕರಣಗಳು, ಒಂದು ಅಪಹರಣ, ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿದ್ದ ತನ್ನ ಸಹಚರರಿಗೆ ಹಣ ಪೂರೈಕೆ ಮಾಡಿದ ಒಂದು ಪ್ರಕರಣ ಹಾಗೂ 28 ಬೆದರಿಕೆ ಪ್ರಕರಣಗಳಾಗಿರುತ್ತವೆ. ಒಟ್ಟು 28 ಬೆದರಿಕೆ ಕರೆಗಳ ಪೈಕಿ 17 ಪ್ರಕರಣಗಳಲ್ಲಿ ಪೊಲೀಸರು ಸಿ’ ರಿಪೋರ್ಟ್‌ ಹಾಗೂ ಒಂದು ಪ್ರಕರಣದಲ್ಲಿ ಬಿ’ ರಿಪೋರ್ಟ್‌ ಸಲ್ಲಿಸಿದ್ದಾರೆ. 10 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ.

ಕೊಲೆ ಪ್ರಕರಣ: ವಕೀಲ ನೌಶಾದ್‌ ಕಾಶಿಮ್‌ಜಿ ಕೊಲೆಯನ್ನು (2009) ಈತ ನಡೆಸಿದ್ದು, ರವಿ ಪೂಜಾರಿಗೆ ನ್ಯಾಯಾಲಯದಿಂದ ಶಿಕ್ಷೆ ಆಗಿದೆ. ಆದರೆ ಆತ ಇದುವರೆಗೆ ಪತ್ತೆ ಆಗಿರಲಿಲ್ಲ.

ಶೂಟೌಟ್‌ ಪ್ರಕರಣಗಳು: ಹಫ್ತಾ ಹಣ ನೀಡಲು ನಿರಾಕರಿಸಿದ ಆರೋಪದ ಮೇಲೆ ಬಿಲ್ಡರ್ಗೆ (ಕದ್ರಿ ಠಾಣೆ-2008), ಕೂಳೂರಿನ ಶಿಪಿಂಗ್‌ ಕಂಪೆನಿ (ಕಾವೂರು ಠಾಣೆ- 2008), ಬಿಜೈಯ ಬಿಲ್ಡರ್ (ಉರ್ವ ಠಾಣೆ- 2014) ಒಬ್ಬರ ಮೇಲೆ ಶೂಟೌಟ್‌ ನಡೆಸಿದ್ದನು.

ವಿಚಾರಣೆ ಹಂತದಲ್ಲಿ 10 ಬೆದರಿಕೆ ಕರೆಗಳು: ಉದ್ಯಮಿಗಳಿಗೆ ಬೆದರಿಕೆ ಕರೆ ಮಾಡಿದ ಸಂಬಂಧ ಬರ್ಕೆ ಠಾಣೆ- 2010, ಉರ್ವ ಠಾಣೆ- 2013, ಬರ್ಕೆ ಠಾಣೆ-2013, ಮೂಡುಬಿದಿರೆ ಠಾಣೆ- 2013, ಬರ್ಕೆ ಠಾಣೆ-2014, ಕಾವೂರು ಠಾಣೆ-2014, ಕದ್ರಿ ಠಾಣೆ- 2018, ಕದ್ರಿ ಠಾಣೆ- 2018, ಬರ್ಕೆ ಠಾಣೆ-2018, ಕೊಣಾಜೆ ಠಾಣೆ- 2018ರಲ್ಲಿ ಪ್ರಕರಣ ದಾಖಲಾಗಿತ್ತು.

ಅಪಹರಣ, ಜೈಲಿನಲ್ಲಿದ್ದ ಸಹಚರರಿಗೆ ಹಣ: ಕಿನ್ನಿಗೋಳಿಯ ಉದ್ಯಮಿಗೆ ಬೆದರಿಕೆ ಮತ್ತು ಅಪಹರಣ ಸಂಬಂಧ ಮೂಲ್ಕಿ ಠಾಣೆ-2012ರಲ್ಲಿ ಹಾಗೂ ಜೈಲಿನಲ್ಲಿದ್ದ ತನ್ನ ಸಹಚರರಿಗೆ ಹಣ ಪೂರೈಕೆ ಮಾಡಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. 17 ಪ್ರಕರಣಗಳಲ್ಲಿ ಸಿ’ ರಿಪೋರ್ಟ್‌ ಹಾಗೂ ಒಂದು ಪ್ರಕರಣದಲ್ಲಿ ಬಿ’ ರಿಪೋರ್ಟ್‌ ಸಲ್ಲಿಕೆಯಾಗಿದೆ.

ಸಿ ರಿಪೋರ್ಟ್‌ ಪ್ರಕರಣಗಳು: ಬಂದರು ಹಾಗೂ ಕದ್ರಿ ಪೊಲೀಸ್‌ ಠಾಣೆಯಲ್ಲಿಯಲ್ಲಿ ರವಿ ಪೂಜಾರಿ ಬೆದರಿಕೆ ಹಾಕಿದ್ದ 2007, 2008, 2012, 2013 ಮತ್ತು 2015, 2016ರಲ್ಲಿ ದಾಖಲಾಗಿದ್ದ ಒಟ್ಟು 17 ಪ್ರಕರಣಗಳಲ್ಲಿ ಪೊಲೀಸರು ಸಿ’ ರಿಪೋರ್ಟ್‌ ಸಲ್ಲಿಸಿದ್ದಾರೆ.

ಬಿ ರಿಪೋರ್ಟ್‌ ಪ್ರಕರಣ: ಬರ್ಕೆ ಠಾಣೆಯಲ್ಲಿ 2011ರಲ್ಲಿ ಉದ್ಯಮಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ “ಬಿ’ ರಿಪೋರ್ಟ್‌ ಸಲ್ಲಿಕೆಯಾಗಿದೆ.

ಕ್ರಿಕೆಟ್‌ ಫೋಟೋ ವೈರಲ್‌: ಈ ಮಧ್ಯೆ ರವಿ ಪೂಜಾರಿ 2019 ಜನವರಿಯಲ್ಲಿ ಸೆನಗಲ್‌ನಲ್ಲಿ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಿದ್ದು, ಆಟಗಾರರ ಜತೆ ಫೋಟೋ ತೆಗೆಸಿಕೊಂಡಿದ್ದ. ಈ ಪೋಟೋಗಳು ಮತ್ತು ಆತನ ಪುತ್ರಿಯ ಮದುವೆ ವಿಡಿಯೋಗಳು ಹಾಗೂ ಭಾರತದಲ್ಲಿದ್ದ ಆತನ ಫೋಟೋಗಳನ್ನು ಪರಿಶೀಲಿಸಿದಾಗ ಈತ‌ ರವಿ ಪೂಜಾರಿ ಎಂಬುದು ಖಚಿತವಾಗಿದೆ ಎಂದು ಪೊಲೀಸರು ಹೇಳಿದರು.

ಮೊದಲ ಬಾರಿಗೆ ನೋಡಿದೆ: ಇದುವರೆಗೂ ನಾವು ರವಿ ಪೂಜಾರಿಯನ್ನು ನೇರವಾಗಿ ನೋಡಿಯೇ ಇರಲಿಲ್ಲ. ಆತ ಸೆನಗಲ್‌ ಜೈಲಿನಿಂದ ಹೊರಗಡೆ ಬರುವಾಗ ನೋಡಿ ಅಚ್ಚರಿ ಆಯಿತು. ಬಳಿಕ ಈತನೇ ರವಿ ಪೂಜಾರಿಯಾ? ಎಂಬ ಅನುಮಾನ ಮೂಡಿತು. ಬಳಿಕ ಕೆಲವೊಂದು ಕಾನೂನು ಪ್ರಕ್ರಿಯೆಗಳನ್ನು ನಡೆಸಿದ ನಂತರ ಈತನೇ ಪಾತಕಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಭಾರತಕ್ಕೆ ಕರೆ ತರಲಾಯಿತು. ಈ ವೇಳೆ ಎಲ್ಲಿಯೂ ಆತ ತೊಂದರೆ ನೀಡಲಿಲ್ಲ. ಪೊಲೀಸರಿಗೆ ಸಂಪೂರ್ಣ ಸಹಕಾರ ನೀಡಿದ ಎಂದು ಅಮರ್‌ ಕುಮಾರ್‌ ಪಾಂಡೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next