Advertisement

ನಾಳೆ ಮತದಾನ-ಸಕಲ ಸಜ್ಜು: ದೀಪಾ

10:57 AM Apr 22, 2019 | Team Udayavani |

ಧಾರವಾಡ: ಧಾರವಾಡ ಲೋಕಸಭಾ ಚುನಾವಣೆಗೆ ಏ.23ರಂದು ಮತದಾನ ನಡೆಯಲಿದ್ದು, ಅದಕ್ಕಾಗಿ ಜಿಲ್ಲೆಯಲ್ಲಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಯಾದ ಡಿಸಿ ದೀಪಾ ಚೋಳನ್‌ ಹೇಳಿದರು.

Advertisement

ನಗರದಲ್ಲಿ ರವಿವಾರ ಡಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 8,75,479 ಪುರುಷ, 8,49,750 ಮಹಿಳೆಯರು ಮತ್ತು 106 ತೃತೀಯ ಲಿಂಗಿಗಳು ಸೇರಿ ಒಟ್ಟು 17,25,335 ಮತದಾರರಿದ್ದು, 1872 ಮತಗಟ್ಟೆಗಳಿವೆ. ಈ ಮತಗಟ್ಟೆಗಳಲ್ಲಿ 2208 ಕಂಟ್ರೋಲ್ ಯುನಿಟ್, 2820 ವಿವಿಪ್ಯಾಟ್ ಹಾಗೂ 4408 ಮತಯಂತ್ರಗಳನ್ನು ಬಳಸಲಾಗುತ್ತಿದೆ ಎಂದರು.

18-19 ವರ್ಷ ವಯೋಮಾನದ 19549 ಪುರುಷ ಹಾಗೂ 13595 ಮಹಿಳೆಯರು ಸೇರಿ ಒಟ್ಟು 33144 ನವ ಭಾರತೀಯ ಪ್ರಜೆಗಳು ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮತದಾನ ಮಾಡಲಿದ್ದಾರೆ. ವಿವಿಧ ಸೇನಾ-ಅರೆಸೇನಾ ಪಡೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2051 ಪುರುಷ ಮತ್ತು 54 ಮಹಿಳೆಯರು ಸೇರಿ ಒಟ್ಟಾರೆ 2105 ಸೇವಾ ಮತದಾರರು ಇದ್ದಾರೆ. ಚುನಾವಣೆಗೆ ನಿಯೋಜಿಸಲ್ಪಟ್ಟಿರುವ ಎಲ್ಲ 10,109 ಸಿಬ್ಬಂದಿ, 3268 ಸ್ವಯಂ ಸೇವಕರು ಹಾಗೂ 1872 ಮತಗಟ್ಟೆ ಮಟ್ಟದ ಅಧಿಕಾರಿಗಳು, ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಚುನಾವಣೆ ಯಶಸ್ವಿಗೊಳಿಸಲು ಅಗತ್ಯ ಸಿದ್ಧತೆ ಪೂರ್ಣಗೊಂಡಿವೆ ಎಂದರು.

19 ಅಭ್ಯರ್ಥಿಗಳು ಕಣದಲ್ಲಿ: ಒಟ್ಟು 19 ಅಭ್ಯರ್ಥಿಗಳು ಕಣದಲ್ಲಿದ್ದು, ರಾಷ್ಟ್ರೀಯ ಪಕ್ಷಗಳಿಂದ 3, ನೋಂದಾಯಿತ ಪಕ್ಷಗಳಿಂದ 6, ಪಕ್ಷೇತರ ಅಭ್ಯರ್ಥಿಗಳು-10 ಜನ ಕಣದಲ್ಲಿದ್ದಾರೆ. ಶೇ.18 ರಿಸರ್ವ್‌ ಒಳಗೊಂಡಂತೆ ಮತದಾನಕ್ಕೆ ಅವಶ್ಯವಿರುವ 4408 ಮತಯಂತ್ರಗಳು, ಶೇ.18 ರಿಸರ್ವ್‌ ಒಳಗೊಂಡಂತೆ 2208 ಕಂಟ್ರೋಲ್ ಯುನಿಟ್ ಹಾಗೂ ಶೇ.28 ರಿಸರ್ವ್‌ ಒಳಗೊಂಡಂತೆ 2820 ವಿ.ವಿ.ಪ್ಯಾಟ್ ವಿದ್ಯುನ್ಮಾನ ಮತಯಂತ್ರಗಳನ್ನು ಪ್ರಥಮ ಹಂತದ ರ್‍ಯಾಂಡ್‌ಮೈಸೇಷನ್‌ ಮೂಲಕ ಎಲ್ಲ ವಿಧಾನಸಭಾ ಮತಕ್ಷೇತ್ರಗಳಿಗೆ ಮರು ಹಂಚಿಕೆ ಮಾಡಲಾಗಿರುತ್ತದೆ. ಹೆಚ್ಚುವರಿಯಾಗಿ ಅವಶ್ಯವಿರುವ 2247 ವಿದ್ಯುನ್ಮಾನ ಮತಯಂತ್ರ ಗಳನ್ನು ಮುಖ್ಯ ಚುನಾವಣಾ ಆಯೋಗದಿಂದ ಹಂಚಿಕೆ ಮಾಡಲಾಗಿದೆ ಎಂದರು.

ಶೇ.98 ಸ್ಲಿಪ್‌ ಹಂಚಿಕೆ: ಧಾರವಾಡ ಲೋಕಸಭಾ ವ್ಯಾಪ್ತಿಗೆ ಬರುವ ಶಿಗ್ಗಾಂವ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಸರಕಾರಿ ಕನ್ನಡ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲೆಯ ಹೊಸ ಕಟ್ಟಡದಲ್ಲಿ ಮಾದರಿ ಮತಗಟ್ಟೆ ಸ್ಥಾಪಿಸಲಾಗುತ್ತಿದೆ. ಒಟ್ಟು 17,25,335 ಮತದಾರರಿಗೆ ವೋಟರ್ ಸ್ಲಿಪ್‌ ಹಂಚಿಕೆ ಕಾರ್ಯ ಪ್ರಗತಿಯಲ್ಲಿರುತ್ತದೆ. ಶೇ.98ಹಂಚಿಕೆ ಕಾರ್ಯ ಪೂರ್ಣಗೊಂಡಿರುತ್ತದೆ. ಜಿಲ್ಲೆಯಲ್ಲಿರುವ ಒಟ್ಟು 3,82,700 ಕುಟುಂಬಗಳಿಗೆ, ಪ್ರತಿ ಕುಟುಂಬಕ್ಕೆ ಒಂದರಂತೆ ಮತದಾರರ ಮಾರ್ಗದರ್ಶಿ ಪುಸ್ತಕ ಹಂಚಿಕೆ ಕಾರ್ಯ ಪ್ರಗತಿಯಲ್ಲಿರುತ್ತದೆ. ಹೊಸದಾಗಿ ನೋಂದಾಯಿತರಾದ ಒಟ್ಟು 42,172 ಮತದಾರರಿಗೆ ಗುರುತಿನ ಚೀಟಿ ಹಂಚಿಕೆ ಮಾಡಲಾಗಿರುತ್ತದೆ ಎಂದರು.

Advertisement

ಮಸ್ಟರಿಂಗ್‌ ಸ್ಥಳದಿಂದ ಎಲ್ಲ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿಗಳನ್ನು ಕರೆದೊಯ್ಯಲು 363 ಮಾರ್ಗಗಳನ್ನು ಗುರುತಿಸಲಾಗಿದೆ. 167 ಜೀಪು, 180 ಸಾರಿಗೆ ಬಸ್‌ಗಳು, 184 ಖಾಸಗಿ ಮ್ಯಾಕ್ಸಿಕ್ಯಾಬ್‌ಗಳು ಹಾಗೂ 21 ಇತರೆ ವಾಹನಗಳು ಸೇರಿ ಒಟ್ಟು 552 ವಾಹನಗಳನ್ನು ನಿಯೋಜಿಸಲಾಗಿದೆ. ಎಲ್ಲಾ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗಿದೆ. ಮತದಾರರ ಸಹಾಯ ಕೇಂದ್ರ ತೆರೆಯಲಾಗುತ್ತಿದೆ. ಈ ಬೂತ್‌ಗಳಲ್ಲಿ ಎಲ್ಲ ಮತಗಟ್ಟೆ ಮಟ್ಟದ ಅಧಿಕಾರಿಗಳು ಮತದಾರರ ಯಾದಿಯೊಂದಿಗೆ ಹಾಜರಿರುತ್ತಾರೆ ಎಂದರು.

ಪೊಲೀಸ್‌ ಸಿಬ್ಬಂದಿ ನಿಯೋಜನೆ: ಏ.23 ರಂದು ಮತದಾನ ದಿನದಂದು ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಆಯುಕ್ತಾಲಯ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಕಚೇರಿಯಿಂದ ಒಟ್ಟಾರೆ 3334 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಒಟ್ಟು 391 ಕ್ರಿಟಿಕಲ್ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಮತಗಟ್ಟೆಗಳ ಪೈಕಿ 208 ಮತಗಟ್ಟೆಗಳಿಗೆ ಮೈಕ್ರೋ ಆಬ್ಸರ್ವರ್ಗಳನ್ನು, 102 ಮತಗಟ್ಟೆಗಳಿಗೆ ವೆಬ್‌ ಕಾಸ್ಟಿಂಗ್‌, 64 ಮತಗಟ್ಟೆಗಳಿಗೆ ಸಿಎಪಿಎಫ್‌ ಪೊಲೀಸ್‌ ´ೋರ್ಸ್‌ ಮತ್ತು 17 ಮತಗಟ್ಟೆಗಳಿಗೆ ವಿಡಿಯೋಗ್ರಾಫಿ ವ್ಯವಸ್ಥೆ ಕಲ್ಪಿಸಿ ನಿಗಾ ವಹಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

ಕೃವಿವಿಯಲ್ಲಿ ಭದ್ರತಾ ಕೊಠಡಿ: ಮತದಾನ ನಂತರ ಎಲ್ಲ ಮತಯಂತ್ರಗಳನ್ನು ಕೃಷಿ ವಿವಿಯಲ್ಲಿ ನಿರ್ಮಿಸಲಾಗಿರುವ ಜಿಲ್ಲಾ ಭದ್ರತಾ ಕೊಠಡಿಗೆ ಅಂದೇ ಸೂಕ್ತ ಪೊಲೀಸ್‌ ಭದ್ರತೆಯೊಂದಿಗೆ ತಂದು ಭದ್ರತಾ ಕೊಠಡಿಯಲ್ಲಿರಿಸಿ ಭದ್ರಪಡಿಸಲಾಗುವುದು ಎಂದರು.

ರಾಜ್ಯಕ್ಕೆ ದ್ವಿತೀಯ ಸ್ಥಾನ: ಮತದಾರರ ಸಹಾಯವಾಣಿ 1950 ಅಥವಾ 0836-1950ಸಂಖ್ಯೆಗೆ ಒಟ್ಟು 1231 ಕರೆಗಳು ಸ್ವೀಕೃತವಾಗಿವೆ. ಇವುಗಳಲ್ಲಿ ಮತದಾರರ ಯಾದಿಗೆ ಸಂಬಂಧಿಸಿದ 08 ದೂರುಗಳು, ಉಳಿದ 1223 ಕರೆಗಳು ಮತದಾರರ ಯಾದಿ ಹಾಗೂ ಇನ್ನಿತರೆ ವಿಷಯಗಳಿಗೆ ಸಂಬಂಧಿಸಿದ ಕರೆಗಳು ಸ್ವೀಕೃತವಾಗಿರುತ್ತವೆ. ಸಿವಿಜಿಲ್ ದೂರು ನಿರ್ವಹಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 218 ದೂರುಗಳು ಸ್ವೀಕೃತವಾಗಿದ್ದು, ಎಲ್ಲಾ ದೂರುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗಿದೆ. ತುರ್ತು ದೂರು ನಿರ್ವಹಣೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ ಸ್ಥಾನದಲ್ಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಅಪರ ಡಿಸಿ ಡಾ|ಸುರೇಶ ಇಟ್ನಾಳ, ಎನ್‌ಐಸಿ ಜಿಲ್ಲಾ ಅಧಿಕಾರಿ ಮೀನಾಕುಮಾರಿ, ಜಿಲ್ಲಾ ವಿವಿಧ ಸಮಿತಿಗಳ ವರದಿ ನೋಡಲ್ ಅಧಿಕಾರಿ ಕವಿತಾ ಇದ್ದರು.

ಕ್ಷೇತ್ರದಲ್ಲಿ 16 ಸಖೀ ಮತಗಟ್ಟೆ

ವಿಧಾನಸಭಾ ಮತಕ್ಷೇತ್ರಕ್ಕೆ ಎರಡರಂತೆ ಧಾರವಾಡ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 16 ಸಖೀ ಮತಗಟ್ಟೆಗಳನ್ನು ಗುರುತಿಸಲಾಗಿರುತ್ತದೆ. ಸಂಪೂರ್ಣವಾಗಿ ಮಹಿಳಾ ಸಿಬ್ಬಂದಿ ಗಳಿಂದಲೇ ಈ ಮತಗಟ್ಟೆಗಳು ನಿರ್ವಹಿಸ ಲ್ಪಡುತ್ತವೆ. ಇನ್ನೂ ಪ್ರತಿ ವಿಧಾನಸಭಾ ಮತಕ್ಷೇತ್ರದಲ್ಲಿ ಒಂದರಂತೆ ವಿಕಲಚೇತನ ಸಿಬ್ಬಂದಿಗಳಿಂದಲೇ ನಿರ್ವಹಿಸಲ್ಪಡುವ ಒಟ್ಟು 07 ವಿಕಲಚೇತನ ಮತಗಟ್ಟೆಗಳನ್ನು ಗುರುತಿಸಲಾಗಿದೆ.
ಮದ್ಯಪಾನ, ಮಾರಾಟ, ಸಾಗಣೆ, ಸಂಗ್ರಹಣೆ ನಿಷೇಧ

ಏ.21 ರಂದು ಸಂಜೆ 6 ಗಂಟೆಯಿಂದ ಏ.23 ರಂದು ಮಧ್ಯರಾತ್ರಿ 12 ಗಂಟೆಯವರೆಗೆ ಹಾಗೂ ಮತಗಳ ಎಣಿಕೆ ಸಂದರ್ಭದಲ್ಲಿ ಮೇ 22ರಂದು ಮಧ್ಯರಾತ್ರಿ 12 ಗಂಟೆಯಿಂದ ಮೇ 23 ರಂದು ಮಧ್ಯರಾತ್ರಿ 12 ಗಂಟೆವರೆಗೆ ಧಾರವಾಡ ಜಿಲ್ಲೆಯಾದ್ಯಂತ ಶುಷ್ಕ ದಿವಸಗಳೆಂದು ಘೋಷಿಸಿ ಈ ದಿನಗಳಲ್ಲಿ ಮದ್ಯಪಾನ, ಮದ್ಯ ಮಾರಾಟ, ಸಂಗ್ರಹಣೆ ಹಾಗೂ ಸಾಗಣೆಯನ್ನು ಸಂಪೂರ್ಣ ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿಯಾದ ಡಿಸಿ ದೀಪಾ ಚೋಳನ್‌ ಆದೇಶಿಸಿದ್ದಾರೆ.
ವಿಕಲಚೇತನರಿಗೆ ಸೂಕ್ತ ವ್ಯವಸ್ಥೆ
ಜಿಲ್ಲೆಯಲ್ಲಿ ಒಟ್ಟು 13,159 ವಿಕಲಚೇತನ ಮತದಾರರಿದ್ದಾರೆ. ಇವರಿಗೆ 3268 ಸ್ವಯಂ ಸೇವಕರು ನಿಯೋಜಿಸಲಾಗಿದೆ. ವಿಕಲಚೇತನ ಮತದಾರರನ್ನು ಮತಗಟ್ಟೆಗಳಿಗೆ ಕರೆ ತರಲು 789 ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಗ್ರಾಮಲೆಕ್ಕಾಧಿಕಾರಿಗಳು, ಎಮ್‌ಆರ್‌ಡಬ್ಲ್ತ್ರ್ಯೂಗಳು ಹಾಗೂ ನಗರ ಪ್ರದೇಶಗಳಲ್ಲಿ ವಿಕಲಚೇತನರಿಗೆ ಮತಗಟ್ಟೆ ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ನಿರ್ದಿಷ್ಟಪಡಿಸಿದ ಆಯ್ದ ಆಟೋ ರಿಕ್ಷಾ, ಮ್ಯಾಕ್ಸಿಕ್ಯಾಬ್‌ ಚಾಲಕರ ಸಹಾಯದಿಂದ ವಿಕಲಚೇತನರನ್ನು ಕರೆ ತರಲು ನಿಯೋಜಿಸಲಾಗಿದೆ. ಮತಗಟ್ಟೆಗಳಲ್ಲಿ ಇಬ್ಬರು ಸ್ವಯಂ ಸೇವಕರ ಸಹಾಯದಿಂದ ಮತ ಚಲಾಯಿಸಲು ಅನುಕೂಲ ಮಾಡಿಕೊಡಲಾಗಿದೆ. ವಾಹನಗಳ ವ್ಯವಸ್ಥೆಗಳ ಮಾಹಿತಿಗೆ ವಿಕಲಚೇತನ ಮತದಾರರ ನೋಡಲ್ ಅಧಿಕಾರಿಗಳಾದ ರಾಜಶ್ರೀ ಜೈನಾಪೂರ, ಮೊ:9742392362, ಅಮರನಾಥ ಮೊ:8217836083 ಸಂಪರ್ಕಿಸಬಹುದಾಗಿದೆ. ಹಿರಿಯ ನಾಗರಿಕರು, ದೃಷ್ಟಿಮಾಂಧ್ಯ ಮತದಾರರಿಗೆ ಮತ ಚಲಾಯಿಸಲು ಅನುಕೂಲವಾಗುವಂತೆ ಪ್ರತಿ ಮತಗಟ್ಟೆಗೆ ಒಂದು ಪೀನ ಮಸೂರಗಳನ್ನು ಪೂರೈಸಲಾಗುತ್ತಿದೆ ಎಂದು ಡಿಸಿ ದೀಪಾ ಚೋಳನ್‌ ಮಾಹಿತಿ ನೀಡಿದರು.
144 ಕಲಂ ಪ್ರತಿಬಂಧಕಾಜ್ಞೆ

ಏ.21ರಂದು ಸಂಜೆ 6 ಗಂಟೆಯಿಂದ ಏ.24ರವರೆಗೆ ಸಂಜೆ 6 ಗಂಟೆವರೆಗೆ ಸಿಆರ್‌ಪಿಸಿ 1973, 144 ಕಲಂ ಮೇರೆಗೆ ಪ್ರತಿಬಂಧಕಾಜ್ಞೆಯನ್ನು ವಿಧಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಆದೇಶ ಹೊರಡಿಸಿದ್ದಾರೆ. ಈ ಅವಧಿಯಲ್ಲಿ ಐದಕ್ಕಿಂತ‌ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿಗಳು, ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚಿಸಬಹುದಾಗಿದ್ದು, ಅದರಲ್ಲಿ 10ಜನರಿಗಿಂತ ಹೆಚ್ಚು ಸಂಖ್ಯೆಯ ಜನರು ಸೇರತಕ್ಕದ್ದಲ್ಲ. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಣ್ಣೆ, ಚಾಕು ಅಥವಾ ದೇಹಕ್ಕೆ ಅಪಾಯ ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರ ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು-ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸಲು ಸೂಚಿಸಲಾಗಿದೆ.
ರಾಜಕೀಯ ಚಟುವಟಿಕೆಗಳಿಗೆ ನಿಷೇಧ
ಏ.21ರಂದು ಸಂಜೆ 6 ಗಂಟೆಯಿಂದ ಯಾವುದೇ ಬಹಿರಂಗ ಪ್ರಚಾರ ಹಾಗೂ ರಾಜಕೀಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. ಈ 48 ಗಂಟೆ ಅವಧಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಎಲ್ಲ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ, ವಾಸಿಸುವ ಅನ್ಯ ಕ್ಷೇತ್ರದ ಮತದಾರರನ್ನು ಮತಕ್ಷೇತ್ರದಿಂದ ಹೊರಹಾಕಲಾಗುವುದು. ಈ ಕುರಿತು ಕ್ಷೇತ್ರದ ಎಲ್ಲ ವಸತಿಗೃಹಗಳ ಮಾಲೀಕರಿಗೆ ಸಭೆ ಜರುಗಿಸಿ ನಿರ್ದೇಶನ ನೀಡಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next