Advertisement

ನಾಳೆಯ ಕನಸು

03:45 AM Apr 28, 2017 | |

ಕನಸು ಎಂಬ ಸಂಕಲ್ಪ
ತಿರುಕನೋರ್ವನೂರ ಮುಂದೆ
ಮುರುಕು ಧರ್ಮ ಶಾಲೆಯಲ್ಲಿ 
ಒರಗಿರುತ್ತಲೊಂದು ಕನಸಾ ಕಂಡನೆಂತೆನೆ…
ಇದು ಬಹುಶಃ ನಾವೆಲ್ಲರೂ ಸಣ್ಣವರಿದ್ದಾಗ ಹಾಡಿದ ಪದ್ಯ. ಈ ಪದ್ಯದೊಂದಿಗೆ ನಮ್ಮ ಎಷ್ಟೋ ನೆನಪುಗಳು ಮರುಕಳಿಸಲೂ ಸಾಕು. ನಮಗೆಲ್ಲರಿಗೆ ಕನಸು ಕಾಣಲು ಅಥವಾ ಕನಸಿನೆಡೆಗೆ ನಮ್ಮ ಆಲೋಚನೆಯನ್ನು ವಿಸ್ತರಿಸಿದ ಪದ್ಯ ಎಂದರೂ ತಪ್ಪಾಗಲಾರದು. 

Advertisement

ತಿರುಕ ಕನಸು ಕಾಣುತ್ತಾನೆ, ಅದು ರಾಜನಾಗುವ ಕನಸು. ಸ್ವಾರಸ್ಯವೆಂದರೆ ರಾಜನಾಗುವುದಕ್ಕೆ ಕಾರಣಗಳನ್ನು ಸೃಷ್ಟಿ ಮಾಡಿಕೊಳ್ಳುತ್ತ ಬಾರದ ಅದೃಷ್ಟವನ್ನು ತವಕಿಸುತ್ತ ಸಾಗುವ ಪದ್ಯ ಬಹಳ ಕುತೂಹಲಕಾರಿಯಾದದ್ದು. ಇವೆಲ್ಲವೂ ಆಗಲಾರದು ಎಂಬ ಎಚ್ಚರ ತಿರುಕನಲ್ಲಿ ಇದ್ದರೂ ಸಹ ಕನಸು ಕಾಣುವಾಗ  ಮುದಗೊಳ್ಳುವ ಪ್ರಕ್ರಿಯೆ ಆಕರ್ಷಕವಾದದ್ದು ಎನಿಸುತ್ತದೆ. ಬಹುಶ‌ಃ ಇಂತಹ ಕನಸುಗಳೇ ನಮ್ಮ ನಾಳೆಗಳ ಕತೃì ಮತ್ತು ಇಂತಹ ಕನಸುಗಳೇ ನಮ್ಮ ಬದುಕಿನ ಆಧಾರ ಸ್ತಂಭಗಳು. 

“ಒಳ್ಳೆಯ ನಾಳೆಗಳು’ ಈಗ ಸವಕಲು ಪದ. ಅದೇನೆ ಇದ್ದರೂ ಆ ನಾಳೆಗಳೇ ನಮ್ಮ ಬದುಕು. ವಿಚಿತ್ರವೆಂದರೆ, ನಾಳೆಗಳ ಒಳಿತಿಗೆ, ಇಂದು ನಾವು ಕಷ್ಟಪಡುತ್ತೇವೆ. ಆದರೆ, ಮರುದಿನ ಮತ್ತೆ ನಾಳೆಗಳ ಕನಸಲ್ಲಿ ಕಷ್ಟಪಡುತ್ತೇವೆ. ಒಟ್ಟಿನಲ್ಲಿ ನಮ್ಮ ನಾಳೆಗಳು ಎನ್ನುವುದು ಕನಸಿನ ಗಂಟು. ಕೈಗೆ ಸಿಕ್ಕಿತು ಎನ್ನುವಷ್ಟರಲ್ಲಿ ನಮ್ಮಿಂದ ಗಾವುದ ದೂರ ಓಡುತ್ತದೆ, ಮರೆಯಾಗುತ್ತದೆ. 

ನಮ್ಮ ಕನಸಿನ ಸಮಾಜ ಎಂಥದ್ದು, ಅದು ಕೋಮುದಳ್ಳುರಿಯ, ಅಶಾಂತತೆಯ ಕಿಡಿ ಹಬ್ಬಿಸುವ, ಕೆಟ್ಟ ರಾಜಕಾರಣದ, ಉಗ್ರವಾದದ ಭ್ರಷ್ಟ ಸಮಾಜವೋ ಅಥವಾ ಶಾಂತಿಯ, ಸಹಬಾಳ್ವೆಯ, ಪ್ರೀತಿ ಕರುಣೆ ಪರಸ್ಪರ ಗೌರವಾದರಗಳ ಸಮಾಜವೋ? ಉತ್ತರ ಸ್ಪಷ್ಟ. ನಮಗೆ ಬೇಕಾಗಿರುವುದು ಶಾಂತಿಯ ಸಮಾಜ, ನಮ್ಮೆಲ್ಲಾ ಹಿರಿಯರು ಬಯಸಿದ ಸಮಾಜ. ಈ ನಾಳೆಗಳನ್ನು ನಮ್ಮದಾಗಿಸುವ ಪ್ರಯತ್ನ ನಮ್ಮದಾಗಬೇಕು. ಹಾಗಾಗಿ ನಮ್ಮ ಸಂಕಲ್ಪ ಕೇವಲ ಸ್ವಾರ್ಥದ ಸೆಲೆಯಾಗದೆ ಅದು ಸಮಷ್ಟಿ ಪ್ರಜ್ಞೆಯೊಂದಿಗಿನ ನಾಳೆಗಳ ಕನಸಾಗಬೇಕು. 

ಸುಕೃತ್‌
ದ್ವಿತೀಯ ಪತ್ರಿಕೋದ್ಯಮ
ಎಸ್‌ಡಿಎಂ ಕಾಲೇಜು, ಉಜಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next