ಗಜೇಂದ್ರಗಡ: ನಾಡಿನ ಆರಾಧ್ಯ ದೈವ ಎನಿಸಿರುವ ದಕ್ಷಿಣ ಕಾಶಿ ಪ್ರಸಿದ್ಧಿ ಕಾಲಕಾಲೇಶ್ವರನ ಸನ್ನಿಧಾನದಲ್ಲಿ ಇಂದಿನ ಆಧುನಿಕ ವೈಜ್ಞಾನಿಕ ಯುಗದಲ್ಲೂ ಅಚ್ಚರಿ ಮೂಡಿಸುವಂತಹ ಹಲವು ವಿಸ್ಮಯಗಳ ಗೋಚರಿಕೆಗೆ ಯುಗಾದಿ ಮುನ್ನುಡಿಯಾಗಲಿದೆ.
ಜೀವನದಲ್ಲಿ ಹೊಸ ಭರವಸೆ ಮತ್ತು ಸಂತಸ ತರುವ ನಿರೀಕ್ಷೆಯೊಂದಿಗೆ ಪ್ರತಿಯೊಬ್ಬರೂ ಯುಗಾದಿ ಆಚರಿಸುತ್ತಾರೆ. ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಕವಿ ವಾಣಿಯಂತೆ ಯುಗಾದಿ ಮತ್ತೂಮ್ಮೆ ಮರಳಿದೆ. ಸಕಲ ಜೀವರಾಶಿಗಳ ಬದುಕಿನಲ್ಲಿ ಹೊಸತನ್ನು ತರುತಿದೆ. ಈ ಯುಗಾದಿಯು ಕಾಲಕಾಲೇಶ್ವರ ಜಾತ್ರೆಗೆ ಚಾಲನೆ ದೊರೆಯಲಿದೆ.
ಸುಣ್ಣ-ಸುರುಮಗಳ ಲೀಲೆ, ಮಳೆ ಮುನ್ಸೂಚನೆಯಂತಹ ಹಲವು ವಿಸ್ಮಯ, ವೈಶಿಷ್ಟತೆ ಸೃಷ್ಟಿಸುವುದನ್ನು ಕಾಣಲು ಅಪಾರ ಭಕ್ತ ಸಮೂಹ ಕಾತರರಾಗಿದ್ದಾರೆ. ಹಿಂದು ಪಂಚಾಂಗದ ನೂತನ ವರ್ಷಾರಂಭವಾದ ಯುಗಾದಿಯಂದು ಕಾಲಭೈರವನ ಸನ್ನಿಧಾನದಲ್ಲಿ ನಡೆಯುವ ಚಮತ್ಕಾರ ಬೆರಗುಗೊಳಿಸಿದೆ. ಇಂತಹ ವಿಸ್ಮಯಕಾರಿ ಘಟನೆ ನಡೆಯುವುದನ್ನು ವೀಕ್ಷಿಸಲು ಜನ ಕಾತರರಾಗಿದ್ದಾರೆ.
ಪ್ರತಿ ವರ್ಷ ದವನದ ಹುಣ್ಣಿಮೆ ದಿನ ನಡೆಯುವ ಕಾಲಕಾಲೇಶ್ವರ ಜಾತ್ರೆಯ ಚಟುವಟಿಕೆಗಳು ಆರಂಭಗೊಳ್ಳುವುದು ಯುಗಾದಿ ಪಾಡೆಯಿಂದ. ಹೀಗಾಗಿ ಯುಗಾದಿ ದಿನದಂದು ಅಪಾರ ಸಂಖ್ಯೆಯ ಭಕ್ತರು ದೇಗುಲಕ್ಕೆ ಬಂದು ಕಾಲಕಾಲೇಶ್ವರನ ದರ್ಶನ ಪಡೆದುಕೊಳ್ಳುತ್ತಾರೆ.
ಯುಗಾದಿಯಂದು ಮಳೆಯ ಕುರುಹು ಲಭಿಸಲಿದೆ. ಪ್ರತಿ ವರ್ಷ ಚಂದ್ರಮಾನ ಯುಗಾದಿ ದಿನ ಸುರ್ಯೋದಯದ ನಂತರ ದೇವಸ್ಥಾನದ ಅಂತರಗಂಗೆಯ ಸನಿಹ ವರ್ತುಲಾಕಾರದಲ್ಲಿರುವ ಒಂದು ಪುಟ್ಟ ಸ್ಥಳದಲ್ಲಿ ತನ್ನಿಂದ ತಾನೇ ನೀರು ಹರಿದು ಬರುತ್ತದೆ. ಅದರ ಆಧಾರದ ಮೇಲೆ ಆ ವರ್ಷದ ಮಳೆಯ ಪ್ರಮಾಣ ಅಂದಾಜಿಸಲಾಗುತ್ತದೆ. ಇನ್ನು ಆ ಪುಟ್ಟ ಸ್ಥಳದಿಂದ ನೀರು ಹರಿದು ಬಂದರೇ ಉತ್ತಮ ಮಳೆಗಾಲ. ಇಲ್ಲದಿದ್ದಲ್ಲಿ ಬರಗಾಲ ಎಂಬ ನಂಬಿಕೆ ರೈತ ಸಮೂಹದ್ದಾಗಿದೆ.
ಸುಣ್ಣ-ಸುರುಮಗಳ ಲೀಲೆ: ದೇಗುಲದ ಅಂತರ ಗಂಗೆಯ ಮೇಲ್ಭಾಗದ ಅತ್ಯಂತ ರೋಮಾಂಚನ ಜತೆ ಯಾರೂ
ಹತ್ತಲಾಗದಂತ ಸ್ಥಳದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಸುಣ್ಣ-ಸುರುಮ ತಾನೇ ಹಚ್ಚಿಕೊಳ್ಳುತ್ತದೆ ಎಂಬ ನಂಬಿಕೆ ಇಲ್ಲಿನ ಭಕ್ತರದ್ದಾಗಿದೆ.
ಹೀಗಾಗಿ ಯುಗಾದಿ ದಿನದ ಸಂಜೆ ದೇವಸ್ಥಾನದ ಒಂದೆಡೆ ಸುಣ್ಣ ಸುರುಮ ಇಟ್ಟು ಬರುತ್ತಾರೆ. ಬೆಳಗಾಗುವಷ್ಟರಲ್ಲಿ ಗುಡ್ಡದ ಪಡಿಯಲ್ಲಿ ಸುಣ್ಣ ಸುರುಮದ ಕುರುಹು ಕಾಣಿಸುತ್ತದೆ. ಸುಣ್ಣ ಸುರುಮ ಕಾಣಿಸುವ ಆಧಾರದ ಮೇಲೆ ವರ್ಷದ ಬೆಳೆ ಬರುವ ಅಂದಾಜನ್ನು ರೈತರು ಮಾಡುತ್ತಾರೆ.
ಬೆಳೆಗಳ ಅಂದಾಜು: ಸುಣ್ಣ ಬಹಳ ಲೇಪನವಾಗಿದ್ದರೆ ಎರೆ ಭೂಮಿಯಲ್ಲಿ ಉತ್ತಮ ಬೆಳೆ ಮತ್ತು ಸುರುಮ ಹೆಚ್ಚು ಹತ್ತಿದ್ದರೆ ಮಸಾರಿ ಭೂಮಿಯಲ್ಲಿ ಹೆಚ್ಚು ಬೆಳೆ ಬರುತ್ತದೆನ್ನುವುದು ಭಕ್ತರು ಹೇಳುವ ಮಾತು ರಾತ್ರಿ ನಡೆಯುವ ಸುಣ್ಣ ಸುರುಮಗಳ ಲೀಲೆ ನೋಡಲು ಹೋದರೆ ಕಣ್ಣುಗಳು ಹೋಗುತ್ತವೆ ಎನ್ನುವ ಮಾತು ಕೇಳಿ ಬರುತ್ತದೆ.
ಯುಗಾದಿಗೆ ಜಾತ್ರೆ ಮುನ್ನುಡಿ: ದವನದ ಹುಣ್ಣಿಮೆಯಂದು ನಡೆಯುವ ಜಾತ್ರೆಗೆ ಯುಗಾದಿ ಹಬ್ಬದ ದಿನ ಸೂರ್ಯೋದಯದ ಮುಂಚೆ ರಥದ ಆಲಯದಿಂದ ತೇರನ್ನು ಹೊರತರಲಾಗುವುದು. ದೇವಸ್ಥಾನದಲ್ಲಿ ಅಭಿಷೇಕ. ಪೂಜೆ, ಬೇವು-ಬೆಲ್ಲ ನೈವೇದ್ಯ ಮಾಡಿ ನಂತರ ರಥದ ಪೂಜಾ ಕಾರ್ಯಕ್ರಮ ನಡೆಸುವುದು ಸಂಪ್ರದಾಯ.
ದೇಶದಲ್ಲಿ ಪ್ರಚಾರದಲ್ಲಿರುವ 12 ಜ್ಯೋತಿರ್ಲಿಂಗಗಳ ಪೈಕಿ ಅಷ್ಟೆ ಅತ್ಯಂತ ಪ್ರಚಾರದಲ್ಲಿರುವ ಉಪ ಜ್ಯೋತಿರ್ಲಿಂಗಗಳು
ಉಂಟು. ಅಂತಹುದೇ ಉಪ ಜ್ಯೋತಿರ್ಲಿಂಗಗಳ ಸಾಲಿಗೆ ಸೇರುವ ದಕ್ಷಿಣ ಕಾಶಿ ಪ್ರಸಿದ್ಧಿ ಸ್ವಯಂಭು ಲಿಂಗ ಕಾಲಕಾಲೇಶ್ವರ ಲಿಂಗವು ಒಂದಾಗಿದೆ.
ಡಿ.ಜಿ. ಮೋಮಿನ್