Advertisement

ನಾಳೆ ವಿವಿ ಘಟಿಕೋತ್ಸವ: 28 ಸಾವಿರ ಮಂದಿಗೆ ಪದವಿ

07:38 AM Mar 16, 2019 | Team Udayavani |

ಮೈಸೂರು: ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಎಂಬ ಹಿರಿಮೆ ಹೊಂದಿರುವ ಮೈಸೂರು ವಿವಿಯ 99ನೇ ವಾರ್ಷಿಕ ಘಟಿಕೋತ್ಸವ ಮಾ.17ರಂದು ಬೆಳಗ್ಗೆ 11 ಗಂಟೆಗೆ ವಿಶ್ವವಿದ್ಯಾನಿಲಯದ ಕಾರ್ಯಸೌಧ ಕ್ರಾಫ‌ರ್ಡ್‌ ಭವನದಲ್ಲಿ ನಡೆಯಲಿದೆ.

Advertisement

18,127 ಮಹಿಳಾ ಹಾಗೂ 10,036 ಪುರುಷ ಅಭ್ಯರ್ಥಿಗಳು ಸೇರಿದಂತೆ ಒಟ್ಟು 28,163 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು, ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಡಾ.ಅನಿಲ್‌ ಡಿ.ಸಹಸ್ರಬುಧೆ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

166 ಮಹಿಳಾ ಹಾಗೂ 218 ಪುರುಷ ಅಭ್ಯರ್ಥಿಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ 384 ಅಭ್ಯರ್ಥಿಗಳಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗುವುದು. ಜೊತೆಗೆ ಒಟ್ಟು 368 ಪದಕಗಳು ಮತ್ತು 182 ನಗದು ಬಹುಮಾನಗಳನ್ನು 206 ಅಭ್ಯರ್ಥಿಗಳು ಪಡೆದುಕೊಂಡಿದ್ದಾರೆ. ಈ ಪೈಕಿ 135 ಮಹಿಳಾ ಅಭ್ಯರ್ಥಿಗಳಿದ್ದಾರೆ ಎಂದರು. 4928 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 8,241 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿ, 13,033 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 19,538 ಅಭ್ಯರ್ಥಿಗಳಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಮಾ.18ರಂದು ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ರಾಜ್ಯಪಾಲರು ಘಟಿಕೋತ್ಸವಕ್ಕೆ ಬರುತ್ತಿಲ್ಲ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಧ್ಯಕ್ಷತೆ ವಹಿಸಬೇಕಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ. ಘಟಿಕೋತ್ಸವದಲ್ಲಿ ಸಚಿವರು ಭಾಷಣ ಮಾಡದಿರುವುದರಿಂದ ಭಾಗವಹಿಸಲು ಅನುಮತಿ ದೊರೆಯುವ ಸಾಧ್ಯತೆ ಇದೆ ಎಂದು ಅವರು ಹೇಳಿದರು. ವಿವಿ ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಪರೀಕ್ಷಾಂಗ ಕುಲಸಚಿವ ಪ್ರೊ.ಮಹದೇವನ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕಾಗಿ ತಜ್ಞರ ಸಮಿತಿ ರಚನೆ
ಮೈಸೂರು:
ಪದವಿ ನಂತರ ಸಾಕಷ್ಟು ಮಂದಿ ಉದ್ಯೋಗ ಅರಸಿ ಹೋಗುತ್ತಿರುವುದರಿಂದ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಸ್ನಾತಕೋತ್ತರ ಪದವಿಗಳ ಪಠ್ಯಕ್ರಮದ ಗುಣಮಟ್ಟ ಹೆಚ್ಚಳ, ಸಮಸ್ಯೆಗಳೇನು ಎಂಬುದನ್ನು ತಿಳಿದು ಮಾರ್ಪಾಡು ಮಾಡಲು ತಜ್ಞರ ಸಮಿತಿ ರಚಿಸುವುದಾಗಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ತಿಳಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ನಾತಕೋತ್ತರ ಪದವಿಯ ಕೆಲ ವಿಭಾಗಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಕೆಲಸ ಸಿಗದ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳು ಪ್ರವೇಶಕ್ಕೆ ಬರಲ್ಲ, ಬಿಎಸ್‌ಸಿ ನಂತರ ಎಂಎಸ್‌ಸಿಗೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ ಎಂದರು. 

2020ರೊಳಗೆ ಮೈಸೂರು ವಿವಿಯನ್ನು ಡಿಜಿಟಲೀಕರಣಗೊಳಿಸಲು ಉದ್ದೇಶಿಸಿದ್ದು, ವಿವಿಯಲ್ಲಿ ಕಂಪ್ಯೂಟರ್‌, ವೈಫೈ ಎಲ್ಲವೂ ಇದೆ. ಆದರೆ, ಅದನ್ನು ಬಳಸಲು ಜನ ಬೇಕಿದೆ. ಇದಕ್ಕಾಗಿ ಏಪ್ರಿಲ್‌ 15ರಿಂದ ತರಬೇತಿ ಆರಂಭಿಸುತ್ತಿದ್ದು, ತಲಾ 30 ಜನರ ತಂಡಗಳಂತೆ 600 ಜನರಿಗೆ ತರಬೇತಿ ನೀಡಿ, ಮುಂದಿನ 6 ತಿಂಗಳಲ್ಲಿ ಡಿಜಿಟಲೀಕರಣ ಆರಂಭಿಸುವುದಾಗಿ ಹೇಳಿದರು.
 
ಬೋಧಕ ಹುದ್ದೆ ಭರ್ತಿಗೆ ಕ್ರಮ: 2007ರ ನಂತರ ವಿವಿಯಲ್ಲಿ ಕಾಯಂ ಬೋಧಕರ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಜೊತೆಗೆ ಐದು ವರ್ಷಗಳಲ್ಲಿ ವಿವಿಯಲ್ಲಿ ಸುಮಾರು 150 ಮಂದಿ ಬೋಧಕರು ನಿವೃತ್ತರಾಗಲಿದ್ದಾರೆ. 2020ಕ್ಕೆ ವಿವಿ ನ್ಯಾಕ್‌ ಮಾನ್ಯತೆ ಪಡೆಯಬೇಕಿರುವುದರಿಂದ ಬೋಧಕ ಹುದ್ದೆ ಭರ್ತಿ ಮಾಡಬೇಕಿದೆ. ವಿವಿಯಲ್ಲಿ ಕಟ್ಟಡ, ಮೂಲಸೌಕರ್ಯ ಎಲ್ಲವೂ ಉತ್ತಮವಾಗಿದೆ.

ಆದರೆ, ನ್ಯಾಕ್‌ ಮಾನ್ಯತೆಗೆ ಪರಿಗಣಿಸಲು ವಿದ್ಯಾರ್ಥಿ ಮತ್ತು ಬೋಧಕರ ಅನುಪಾತ ನೋಡುವುದರಿಂದ ಸುಮಾರು 320 ಬೋಧಕ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದ್ದು, ಈಗಾಗಲೇ ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಚುನಾವಣೆ ನಂತರ ಹುದ್ದೆ ಭರ್ತಿಗೆ ಕ್ರಮವಹಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next