Advertisement

ನಾಳೆ ಅಮೆರಿಕ ಸಂಸತ್‌ಗೆ ಮಧ್ಯಂತರ ಚುನಾವಣೆ

07:16 PM Nov 06, 2022 | Team Udayavani |

ಅಮೆರಿಕ ಸಂಸತ್‌ಗೆ ನ.8ರಂದು ಮಧ್ಯಂತರ ಚುನಾವಣೆ ನಡೆಯಲಿದೆ. ಅದರ ಫ‌ಲಿತಾಂಶ ಮುಂದಿನ ಎರಡು ವರ್ಷಗಳ ಕಾಲ ಹಾಲಿ ಅಧ್ಯಕ್ಷ ಡೆಮಾಕ್ರಾಟ್‌ ಪಕ್ಷದ ಜೋ ಬೈಡೆನ್‌ ಅವರ ಆಡಳಿತ, 2024ರ ಅಧ್ಯಕ್ಷೀಯ ಚುನಾವಣೆಯ ಫ‌ಲಿತಾಂಶದ ಬಗ್ಗೆ ಸುಳಿವು ಕೊಡಲಿದೆ. ಗಮನಾರ್ಹ ಅಂಶವೆಂದರೆ ಭಾರತೀಯ ಮೂಲದ ಐವರು ಈ ಬಾರಿಯ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

Advertisement

ಮಧ್ಯಂತರ ಚುನಾವಣೆ ಎಂಬ ಹೆಸರೇಕೆ?
ಅಮೆರಿಕ ಸಂಸತ್‌ ಕಾಂಗ್ರೆಸ್‌ನ ಮೇಲ್ಮನೆ(ಸೆನೆಟ್‌) ಮತ್ತು ಕೆಳಮನೆ (ಹೌಸ್‌ ಆಫ್ ರೆಪ್ರಸೆಂಟೆಟೀವ್ಸ್‌)ಗೆ ಪ್ರತಿ ಎರಡು ವರ್ಷಗಳಿಗೆ ಒಮ್ಮೆ ಚುನಾವಣೆ ನಡೆಯುತ್ತದೆ. ಅಮೆರಿಕ ಅಧ್ಯಕ್ಷರ ನಾಲ್ಕು ವರ್ಷದ ಅವಧಿಯ ನಡುವಲ್ಲಿ ಅಂದರೆ ಎರಡನೇ ವರ್ಷದಲ್ಲಿ ನಡೆಯುವ ಚುನಾವಣೆಯನ್ನು ಮಧ್ಯಂತರ ಚುನಾವಣೆ ಎಂದು ಕರೆಯಲಾಗುತ್ತದೆ.

ಸದಸ್ಯರ ಅವಧಿ ಎಷ್ಟು?
ಅಮೆರಿಕದ ಪ್ರತಿ ಪ್ರಾಂತ್ಯದಿಂದ 2 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಅವರ ಸದಸ್ಯತ್ವದ ಅವಧಿ ಆರು ವರ್ಷಗಳು. ಹೌಸ್‌ ಆಫ್ ರೆಪ್ರಸೆಂಟೇಟಿವ್ಸ್‌ನ ಎಲ್ಲಾ ಸ್ಥಾನಗಳಿಗೆ ಮತ್ತು ಸೆನೆಟ್‌ನ ಮೂರನೇ ಒಂದರಷ್ಟು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಯಾರಿಗೆ ಜಯ ಸಾಧ್ಯತೆ?
ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸುವ ಸಾಧ್ಯತೆ ಅಧಿಕವಾಗಿದೆ ಎಂಬ ಬಗ್ಗೆ ಸದ್ಯದ ವರ್ತಮಾನಗಳಿವೆ. ಎರಡು ವರ್ಷಗಳಿಂದ ಡೆಮಾಕ್ರಾಟಿಕ್‌ ಪಾರ್ಟಿಯ ಸದಸ್ಯರು ಎರಡೂ ಸದನಗಳಲ್ಲಿ ಪ್ರಾಬಲ್ಯ ಸಾಧಿಸಿವೆ.

ಪ್ರಮುಖ ಭಾರತೀಯರು
ಅಮಿ ಬೆರಾ:
ಹಾಲಿ ಭಾರತೀಯ ಮೂಲದ ಸದಸ್ಯರ ಪೈಕಿ ಅಮಿ ಬೆರಾ(57) ಹಿರಿಯ ರಾಜಕಾರಣಿ. ಈಗಾಗಲೇ ಐದು ಬಾರಿ ಸ್ಪರ್ಧಿಸಿ ಜಯಶೀಲರಾಗಿರುವ ಅವರು ಆರನೇ ಬಾರಿ ಹೌಸ್‌ ಆಫ್ ರೆಪ್ರಸೆಂಟೆಟೀವ್ಸ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ. ಅವರು ತಮ್ಮ ಸ್ವಕ್ಷೇತ್ರ 13ನೇ ಕಾಂಗ್ರೆಷನಲ್‌ ಡಿಸ್ಟ್ರಿಕ್ಟ್ ಆಫ್ ಕ್ಯಾಲಿಫೋರ್ನಿಯಾದಿಂದ ಸ್ಪರ್ಧಿಸಿದ್ದಾರೆ.

Advertisement

ರೋ ಖನ್ನಾ:
ಮೂರು ಬಾರಿ ಅಮೆರಿಕದ ಕೆಳಮನೆಗೆ ಆಯ್ಕೆಯಾಗಿರುವ ರೋ ಖನ್ನಾ(46), ನಾಲ್ಕನೇ ಬಾರಿ ತಮ್ಮ ಅದೃಷ್ಟ ಪರೀಕ್ಷಿಸುತ್ತಿದ್ದಾರೆ. ಕ್ಯಾಲಿಫೋರ್ನಿಯಾದಿಂದ ಸ್ಪರ್ಧಾ ಕಣದಲ್ಲಿದ್ದಾರೆ.

ರಾಜಾ ಕೃಷ್ಣಮೂರ್ತಿ:
8ನೇ ಕಾಂಗ್ರೆಷನಲ್‌ ಡಿಸ್ಟ್ರಿಕ್ಟ್ ಆಫ್ ಇಲಿನಾಯ್ಸ ಕ್ಷೇತ್ರವನ್ನು ಮೂರು ಬಾರಿ ಪ್ರತಿನಿಧಿಸಿರುವ ರಾಜಾ ಕೃಷ್ಣಮೂರ್ತಿ(49) ಅವರು ನಾಲ್ಕನೇ ಬಾರಿ ಅಮೆರಿಕ ಹೌಸ್‌ ಆಫ್ ರೆಪ್ರಸೆಂಟೆಟೀವ್ಸ್‌ ಪ್ರವೇಶಿಸುವ ಕನಸು ಕಾಣುತ್ತಿದ್ದಾರೆ.

ಪ್ರಮೀಳಾ ಜಯಪಾಲ್‌:
ಚೆನ್ನೈನಲ್ಲಿ ಜನಸಿದ ಪ್ರಮೀಳಾ ಜಯಪಾಲ್‌(57) ಅವರು ಮೂರು ಬಾರಿ 7ನೇ ಕಾಂಗ್ರೆಷನಲ್‌ ಡಿಸ್ಟ್ರಿಕ್ಟ್ ಆಫ್ ವಾಷಿಂಗ್ಟನ್‌ ಸ್ಟೇಟ್‌ ಕ್ಷೇತ್ರದಿಂದ ಜಯಗಳಿಸಿದ್ದಾರೆ. ಸತತ ನಾಲ್ಕನೇ ಬಾರಿ ಅಮೆರಿಕ ಕೆಳಮನೆ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದಾರೆ.

ಶ್ರೀ ಥಾಣೆದಾರ್‌:
ಕರ್ನಾಟಕ ಮೂಲದ ಉದ್ಯಮಿಯಾಗಿರುವ ಶ್ರೀ ಥಾಣೆದಾರ್‌(67) ಮೊದಲನೇ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಡೆಮಾಕ್ರಟಿಕ್‌ ಪಕ್ಷದಿಂದ ಟಿಕೆಟ್‌ ಪಡೆದಿರುವ ಅವರು, ಡೆಟ್ರಾಯಿಟ್‌ನಿಂದ ಕಣಕ್ಕೆ ಇಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next