ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನಿತ್ಯವೂ 150ರಿಂದ 200 ಪಾಸಿಟಿವ್ ಪ್ರಕರಣಗಳು ಮತ್ತು ಎರಡ್ಮೂರು ಸಾವು ಸಂಭವಿಸುತ್ತಲೇ ಇವೆ. ಆದರೂ, ಸಾರ್ವಜನಿಕರು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏ.10ರಿಂದ 10 ದಿನಗಳ ಕಾಲ ಸರ್ಕಾರ ನೈಟ್ ಕರ್ಫ್ಯೂ ಜಾರಿಗೆ ಮುಂದಾಗಿದೆ. ಪ್ರತಿ ದಿನ ರಾತ್ರಿ 10ರಿಂದ ಬೆಳಗಿನ ಜಾವ 5 ಗಂಟೆ ವರೆಗೆ ನೈಟ್ ಕರ್ಫ್ಯೂ ಇರಲಿದೆ.
ದೇಶದಲ್ಲೇ ಮೊದಲು ಕೊರೊನಾದಿಂದ ಸಾವು ಸಂಭವಿಸಿದ್ದು ಕಲಬುರಗಿ ನಗರದಲ್ಲೇ. 2020ರ ಮಾ.10ರಂದು ವೃದ್ಧನ ಸಾವಿನ ಮೂಲಕ ಮಹಾಮಾರಿ ರೋಗ ಕಾಲಿಟ್ಟಿತ್ತು. ವೃದ್ಧ ಕೊರೊನಾದಿಂದ ಮೃತಪಟ್ಟಿದ್ದು ದೃಢಪಡುತ್ತಿದ್ದಂತೆ ದೇಶದಲ್ಲಿ ಮೊದಲು ಲಾಕ್‌ಡೌನ್ ಆಗಿದ್ದು ಸಹ ಕಲಬುರಗಿಯಲ್ಲಿಯೇ.ನಂತರ ನಿರಂತರವಾಗಿ ಜಿಲ್ಲಾದ್ಯಂತ ರೋಗದ ಹಾವಳಿ ಹೆಚ್ಚಾಗಿತ್ತು.
ಈ ನಡುವೆ ಆರೇಳು ತಿಂಗಳಲ್ಲಿ ಕೊರೊನಾ ಪ್ರಮಾಣ ಕಡಿಮೆ ಆಗಿತ್ತು. ಇದೇ ಮಾರ್ಚ್ ತಿಂಗಳ ಆರಂಭದಲ್ಲಿ ದಿನಕ್ಕೆ 20ರಿಂದ 30 ಕೊರೊನಾ ಪಾಸಿಟಿವ್‌ಗಳು ಪತ್ತೆಯಾಗುತ್ತಿದ್ದವು. ಆದರೆ, ಮಾರ್ಚ್ ಮಧ್ಯದಲ್ಲೇ ಏಕಾಏಕಿ ಎರಡನೇ ಅಲೆ ಬೀಸಲು ಆರಂಭಿಸಿದೆ. ಕಳೆದ 10 ದಿನಗಳಿಂದ ನಿತ್ಯ 150ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಅಲ್ಲದೇ, ಇಬ್ಬರು, ಮೂವರು ಸೋಂಕಿತರು ಬಲಿಯಾಗುತ್ತಿದ್ದಾರೆ. ಅದರಲ್ಲೂ, ಇತ್ತೀಚೆಗೆ 10 ವರ್ಷಕ್ಕೂ ಮೇಲಟ್ಟ ವೃದ್ಧರೇ ಕೊರೊನಾದಿಂದ ಮೃತಪಡುತ್ತಿದ್ದಾರೆ.
ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸೆಕ್ಷನ್ 144ರಡಿ ನಿಷೇಧಾಜ್ಞೆ ಜಾರಿ ಮಾಡಿದೆ. ಆದರೂ, ಜನರು ಇದ್ಯಾವುದನ್ನು ಗಣನೆಗೆ ತೆಗೆದುಕೊಳ್ಳುತ್ತಲೇ ಇಲ್ಲ. ನಿತ್ಯ ಅನಗತ್ಯವಾಗಿ ರಸ್ತೆಗಳಲ್ಲಿ ಗುಂಪು-ಗುಂಪಾಗಿ ಸೇರುವುದು, ಮಾಸ್ಕ್ ಧರಿಸದೇ ಓಡಾಡುವುದನ್ನು ಮಾಡುತ್ತಲೇ ಇದ್ದಾರೆ. ಹೀಗಾಗಿ ಸರ್ಕಾರ ಏ.10ರಿಂದ ಏ.20ರ ವರೆಗೆ ನೈಟ್ ಕರ್ಫ್ಯೂ ಜಾರಿಗೆ ತೀರ್ಮಾನಿಸಿದೆ.