ದಾವಣಗೆರೆ: ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯದ ನಿರ್ಲಕ್ಷ, ಮೌಲ್ಯಮಾಪನ ವಿಳಂಬ ನೀತಿ ಖಂಡಿಸಿ ಸೆ.1ರಂದು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ಮೆರವಣಿಗೆ, ಬೈಕ್ ರ್ಯಾಲಿ ನಡೆಸಲಾಯಿತು.
ನಗರದ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಯುಬಿಡಿಟಿ ಕಾಲೇಜಿನಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ವಿದ್ಯಾರ್ಥಿ ಭವನ, ಜಯದೇವ ವೃತ್ತ, ಗಾಂಧಿ ವೃತ್ತದ ಮೂಲಕ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ಈ ಸಂಬಂಧ ಮನವಿ ಸಲ್ಲಿಸಿದರು. ಜಯದೇವ ವೃತ್ತದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆ ಉದ್ದೇಶಿಸಿ, ಮಾತನಾಡಿದ ಸಂಘಟನೆಯ ಮುಖಂಡರು, ಕೆಲವು ತಿಂಗಳಿಂದ ವಿಟಿಯು ಇಂಜಿನಿಯರಿಂಗ್
ವಿದ್ಯಾರ್ಥಿಗಳು ತಳಮಳ ಗೊಂಡಿದ್ದಾರೆ. ಡಿಸೆಂಬರ್ 2016ರ ಫಲಿತಾಂಶ ಪ್ರಕಟಗೊಳ್ಳುವುದು 5 ತಿಂಗಳು ವಿಳಂಬವಾಗಿ ಹಲವಾರು ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು.
ಪರೀಕ್ಷೆಗೆ ತೆರಳುವ ಕೆಲವು ಗಂಟೆಗಳ ಹಿಂದೆ ಮರುಮೌಲ್ಯಮಾಪನ ಫಲಿತಾಂಶ, ತಡೆಹಿಡಿಯಲಾಗಿದ್ದ ಫಲಿತಾಂಶ ಪ್ರಕಟಿಸಲಾಗಿತ್ತು. ಫಲಿತಾಂಶದಲ್ಲಿನ ಅನಿಶ್ಚಿತತೆ ಮತ್ತು ಮೌಲ್ಯಮಾಪನ ಪ್ರಕ್ರಿಯೆಯಲ್ಲಿನ ಗೊಂದಲಗಳು ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿವೆ ಎಂದರು. ಇನ್ನು ಕ್ಯಾಷ್ ಸೆಮಿಸ್ಟರ್‌ನವಿದ್ಯಾರ್ಥಿಗಳು ಕೇವಲ 50 ದಿನಗಳಲ್ಲಿ 16 ರಿಂದ 20 ವಿಷಯಗಳ ಪರೀಕ್ಷೆ ಬರೆಯುವ ಸ್ಥಿತಿ ನಿರ್ಮಾಣ ಆಗಿತ್ತು. ಕೆಲವು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ದಿನಕ್ಕೆರಡು ಪರೀಕ್ಷೆಗಳನ್ನು ಬರೆಯುವಂತೆ ಆಗಿತ್ತು. ಒಂದು ವರ್ಷ ಕಳೆದು ಕೊಳ್ಳಬೇಕಾಗುತ್ತದೆಯೇ ಎಂಬ ಭಯ ವಿದ್ಯಾರ್ಥಿಗಳನ್ನು ಆವರಿಸಿತು ಎಂದು ಆರೋಪಿಸಿದರು.
ವಿವಿಯ ನಿರ್ಲಕ್ಷ, ಮೌಲ್ಯಮಾಪನ ವಿಳಂಬ ನೀತಿ ಖಂಡಿಸಿ ಸೆ.1ರಂದು ಸಂಘಟನೆಯ ನೇತೃತ್ವದಲ್ಲಿ ರಾಜ್ಯಾದ್ಯಂತ ವಿಟಿಯುನ ಎಲ್ಲಾ ಕಾಲೇಜುಗಳ ಬಂದ್ ಗೆ ಕರೆ ನೀಡಲಾಗಿದೆ ಎಂದು ತಿಳಿಸಿದರು. ಸಂಘಟನೆಯ ಜಂಟಿ ಕಾರ್ಯದರ್ಶಿ ನಾಗಸ್ಮಿತಾ, ಮಧು, ಪ್ರಮೋದ್, ಪವನ್, ಪುನೀತ್, ಹರ್ಮನ್, ತರುಣ್, ನಾಗಾರ್ಜುನ್, ಭಾರತಿ, ಬನಶ್ರೀ, ಸೌಮ್ಯ ಮೆರವಣಿಗೆ ನೇತೃತ್ವ ವಹಿಸಿದ್ದರು.