ಬೆಂಗಳೂರು: ಮಲ್ಲೇಶ್ವರಂನ 11ನೇ ಮುಖ್ಯರಸ್ತೆಯಲ್ಲಿರುವ ಆದಿ ಶಂಕರಾಚಾರ್ಯರ ಉದ್ಯಾನವನದಲ್ಲಿ “ಶ್ರೀ ಆದಿ ಶಂಕರಾಚಾರ್ಯರ ಜಯಂತಿ ಮಹೋತ್ಸವ ನಾಳೆ (ಏ.20) ಏರ್ಪಡಿಸಲಾಗಿದೆ.
ಶ್ರೀ ಆದಿಶಂಕರಾಚಾರ್ಯ ಮಹೋತ್ಸವ ಸೇವಾ ಸಮಿತಿ ವತಿಯಿಂದ ಮಲ್ಲೇಶ್ವರದ ಆದಿ ಶಂಕರಾಚಾರ್ಯ ಉದ್ಯಾನವನದಲ್ಲಿ ನಡೆಯಲಿರುವ ಮಹೋತ್ಸವದಲ್ಲಿ ವಿಶೇಷ ಪೂಜೆ, ಲಲಿತ ಸಹಸ್ರನಾಮ ಪಾರಾಯಣ, ಗುರುನಮನ, ಭಕ್ತಿ ಗಾಯನ, ಮಹಾ ಪ್ರಸಾದ ವಿನಿಯೋಗ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏ. 20ರಂದು ಬೆಳಿಗ್ಗೆ 9ಗಂಟೆಗೆ ಆದಿಶಂಕರಾಚಾರ್ಯರ ಮೂರ್ತಿಗೆ ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ, ಸಂಜೆ 4ಕ್ಕೆ ಮಹಾಗಣಪತಿ ಪ್ರಾರ್ಥನೆ, ಸಾಮೂಹಿಕ ಲಲಿತ ಸಹಸ್ರನಾಮ ಪಾರಾಯಣ, 4.30ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ, 5 ಗಂಟೆಗೆ ಸಾಂದೀಪಿನಿ ಗುರುಕುಲದ ರೋಹಿಣಿ ಚಕ್ರವರ್ತಿ ತಂಡದವರಿಂದ ಸೌಂದರ್ಯ ಲಹರಿ ಪಾರಾಯಣ ನಡೆಯಲಿದೆ.
ಸಂಜೆ 5.30ಕ್ಕೆ ಸಂಗೀತ ವಿಷಯದಲ್ಲಿ ಚಿನ್ನದ ಪದಕ ಪಡೆದ ಸ್ನಾತಕೋತ್ತರ ಪದವೀಧರೆ ಎಸ್. ಸೌಮ್ಯಶರ್ಮಾ ಮತ್ತು
ತಂಡದಿಂದ “”ದೇವಿ ಕೃತಿ ” ಹಾಗೂ “”ದೇವರ ನಾಮ” ಗಾಯನ ನಡೆಯಲಿದೆ. ಸಂಜೆ.6ಕ್ಕೆ ವೇದ ಪಂಡಿತರು ಚತುರ್ವೇದ ಪಾರಾಯಣ ನಡೆಸಿಕೊಡಲಿದ್ದಾರೆ.
ಗುರುನಮನ: ಸಂಜೆ 7ಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಧಾಳಿ ನರಸಿಂಹ ಭಟ್ಟರು, ವಿದ್ವಾಂಸರಾದ ಇಂಜುಕುಳೈ ಸಾರನಾಥ, ಡಾ. ಎಸ್.ಆರ್ ಶೇಷಾದ್ರಿಭಟ್ಟರ್, ಮಲ್ಲೇಶ್ವರದ ಆಂಜನೇಯ ರಾಘವೇಂದ್ರ ಸ್ವಾಮಿ ಮಠದ ಪ್ರಧಾನ ಅರ್ಚಕ ಜಯತೀರ್ಥಾಚಾರ್, ಮೇಲುಕೋಟೆ ಶ್ರೀ ರಾಮಾನುಜ ವಿಶ್ವವಿದ್ಯಾ ಪ್ರತಿಷ್ಠಾನದ ಡೀನ್ ವಿದ್ವಾನ್ ಎಂ.ಎಂ ಲಕ್ಷ್ಮೀ ತಾತಾಚಾರ್, ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯದ ಕೈಂಕರ್ಯಂ ಶ್ರೀನಿವಾಸ ಅಯ್ಯಂಗಾರ್, ಕಂಚಿ ಕಾಮಕೋಟಿ ಮಠದ ಮಹಾಲಿಂಗಂ, ಬಾದಾಮಿ ಬನಶಂಕರಿಯ ಅಶೋಕ ಭಟ್ಟ ಶಂಕರ ಭಟ್ಟ ಪೂಜಾರ್, ಆರ್ಟ್ ಆಫ್ ಲಿವಿಂಗ್ ಗುರುಕುಲದ ಗಣಪತಿ ಭೈರವೇಶ್ವರ ಭಟ್ಟರಿಗೆ ಗುರುನಮನ ಸಲ್ಲಿಸಲಾಗುವುದು.
ಸ್ಥಪತಿಗಳಿಗೆ ಸನ್ಮಾನ: ರಾತ್ರಿ. 8ಕ್ಕೆ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸ್ವಾಮಿನಾಥನ್, ರಾಜ್ಯಪ್ರಶಸ್ತಿ ಪುರಸ್ಕೃತ ಖ್ಯಾತ ಶಿಲ್ಪ ಕಲಾವಿದ ಗಣೇಶ ಲಕ್ಷ್ಮೀನಾರಾಯಣ ಭಟ್ಟರಿಗೆ ಸನ್ಮಾನ ಹಾಗೂ ಗೌರವ ಸಮರ್ಪಣೆ ನಡೆಯಲಿದೆ.
ವಿಶೇಷ ಸೂಚನೆ: ಸಾಮೂಹಿಕ ಲಲಿತ ಸಹಸ್ರನಾಮ, ವಿಷ್ಣು ಸಹಸ್ರನಾಮ, ಪಾರಾಯಣದಲ್ಲಿ ಪಾಲ್ಗೊಳ್ಳುವ ಭಕ್ತರು ಮುಂಚಿತವಾಗಿ ತಿಳಿಸಬಹುದು ಮಾಹಿತಿಗೆ ದೂ. 95350 76165 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.