Advertisement

ನಾಳೆಯಿಂದ ನಾಡದೋಣಿ ಮೀನುಗಾರಿಕೆ ಆರಂಭ

11:49 PM Jun 26, 2020 | Sriram |

ಕುಂದಾಪುರ: ಗಂಗೊಳ್ಳಿ ಹಾಗೂ ಬೈಂದೂರು ವಲಯದ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ಕಡಲಿಗಿಳಿಯಲು ಸಜ್ಜಾಗಿದ್ದು, ಜೂ. 28ರಿಂದ ಅವಿಭಜಿತ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ಮೀನುಗಾರಿಕೆ ಆರಂಭವಾಗಲಿದೆ.

Advertisement

ಗಂಗೊಳ್ಳಿ ಹಾಗೂ ಬೈಂದೂರು ವಲಯದ ನಾಡದೋಣಿ ಮೀನುಗಾರರ ಸಂಘದಿಂದ ಮರ ವಂತೆಯ ವರಾಹ ದೇವಸ್ಥಾನದ ಬಳಿಯ ಸಮುದ್ರ ತೀರದಲ್ಲಿ ಜೂ.28ಕ್ಕೆ ಸಮುದ್ರ ಪೂಜೆ ನಡೆಯಲಿದ್ದು, ಇದರೊಂದಿಗೆ ಕುಂದಾಪುರ ತಾಲೂಕಿನಲ್ಲಿ ಈ ಋತುವಿನ ನಾಡದೋಣಿ ಮೀನುಗಾರಿಕೆ ಚಾಲನೆ ಪಡೆದುಕೊಳ್ಳಲಿದೆ.

ಸಮೃದ್ಧಿಗೆ ಪ್ರಾರ್ಥನೆ
ಉಭಯ ವಲಯಗಳ ಮೀನುಗಾರ ಮುಖಂಡರು, ಮೀನುಗಾರರ ಉಪಸ್ಥಿತಿಯಲ್ಲಿ ಮರವಂತೆಯ ಕಡಲ ತಡಿಯಲ್ಲಿ ಸಮುದ್ರ ದೇವತೆಯ ಲಿಂಗ ರಚಿಸಿ ಪೂಜೆ ಸಲ್ಲಿಸಿದ ಬಳಿಕ ಸುರಕ್ಷಿತ ಹಾಗೂ ಸಮೃದ್ಧ ಮೀನುಗಾರಿಕೆಗೆ ಪ್ರಾರ್ಥಿಸಿ ಸಮುದ್ರಕ್ಕೆ ಬಾಗಿನ ಅರ್ಪಿಸಲಾಗುತ್ತದೆ. ಆ ಬಳಿಕ ಈ ಋತುವಿನ ನಾಡದೋಣಿ ಮೀನುಗಾರಿಕೆ ಅಧಿಕೃತವಾಗಿ ಆರಂಭವಾಗುತ್ತದೆ.

ಎಲ್ಲೆಲ್ಲಿ ಮೀನುಗಾರಿಕೆ
ಅವಿಭಜಿತ ಕುಂದಾಪುರ ತಾಲೂಕಿನ ಕೋಡಿ, ಗಂಗೊಳ್ಳಿ, ಕಂಚುಗೋಡು, ಹೊಸಪೇಟೆ, ಮರವಂತೆ, ಕೊಡೇರಿ, ಉಪ್ಪುಂದ, ಶಿರೂರು ಭಾಗದಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆ ನಡೆಯಲಿದೆ. ಗಂಗೊಳ್ಳಿ ವಲಯದಲ್ಲಿ ಸುಮಾರು 600 ನಾಡದೋಣಿಗಳಿದ್ದರೆ, ಬೈಂದೂರು ವಲಯದಲ್ಲಿ 1,500ಕ್ಕೂ ಮಿಕ್ಕಿ ನಾಡದೋಣಿಗಳಿವೆ.

ಕಡಲಾಳದಲ್ಲಿ ತೂಫಾನ್‌ ಎದ್ದ ಬಳಿಕ ಕಡಲು ಪ್ರಕ್ಷುಬ್ಧಗೊಳ್ಳುತ್ತವೆ. ಇದರಿಂದ ನದಿ, ಹೊಳೆಗಳ ನೀರು, ಅದರೊಂದಿಗೆ ತ್ಯಾಜ್ಯವೆಲ್ಲ ಸಮುದ್ರಕ್ಕೆ ಸೇರುವುದರಿಂದ ಆಹಾರಕ್ಕಾಗಿ ವಿವಿಧ ಜಾತಿಯ ಮೀನುಗಳು ಕಡಲ ತೀರದತ್ತ ಧಾವಿಸುತ್ತವೆ. ಆದರೆ ಈವರೆಗೆ ಅಷ್ಟೇನು ಉತ್ತಮ ಮಳೆ ಬಾರದ ಕಾರಣ ಇನ್ನೂ ಸಮುದ್ರದಲ್ಲಿ ತೂಫಾನ್‌ ಎದ್ದಿಲ್ಲ.

Advertisement

ತೂಫಾನ್‌ ಏಳದೇ ಮೀನುಗಾರರು ಕಡಲಿಗಿಳಿ ದರೂ, ಅದರಿಂದ ಹೇರಳವಾಗಿ ಮೀನುಗಳು ಸಿಗು ವುದಿಲ್ಲ. ಈ ಬಾರಿ ಜು. 6 ಅಥವಾ 7ರ ಅನಂತರ ತೂಫಾನ್‌ ಏಳಬಹುದು. ನಾಡದೋಣಿಗಳಿಗೆ ವಿವಿಧ ತಳಿಯ ಮೀನುಗಳಿಗಿಂತ ಚಟಿÉ (ಸಿಗಡಿ) ಸಿಕ್ಕರೆ ಹೆಚ್ಚು ಲಾಭ ಎನ್ನುತ್ತಾರೆ ಮೀನುಗಾರ ಮರವಂತೆಯ ಸಂಜೀವ ಖಾರ್ವಿ.

ದರ ದುಬಾರಿ
ಈಗ ಯಾಂತ್ರೀಕೃತ ಮೀನುಗಾರಿಕೆಗೆ ರಜೆ ಇದೆ. ಮದ್ರಾಸ್‌ ಮತ್ತಿತರ ಕಡೆಗಳಿಂದ ಮೀನು ಬರುತ್ತಿದ್ದು, ಅದು ದುಬಾರಿಯಾಗಿದೆ. ಬಂಗುಡೆ ಕೆ.ಜಿ.ಗೆ 270 ರೂ.ಗಿಂತ ಹೆಚ್ಚಿದ್ದು, ಕೊಡ್ಡಾಯಿಗೆ ಕೆ.ಜಿ.ಗೆ 250 ರೂ., ಅಡವು 250 ರೂ., ಇತರ ಮೀನುಗಳಿಗೆ ಕೆ.ಜಿ.ಗೆ 200 ರೂ., ಚಟಿÉ ಕೆ.ಜಿ.ಗೆ 350 ರೂ. ಗಿಂತ ಅಧಿಕವಿದೆ.

ನಾಳೆ ಸಮುದ್ರ ಪೂಜೆ
ಉಭಯ ವಲಯದವರು ಕೂಡ ಶೃಂಗೇರಿಗೆ ಭೇಟಿ ನೀಡಿ ಪ್ರಾರ್ಥಿಸಿಕೊಂಡಿದ್ದು, ಗುರುಗಳ ಆಶೀರ್ವಾದವನ್ನು ಪಡೆದಿದ್ದೇವೆ. ಜೂ. 28 ರಂದು ಮರವಂತೆಯಲ್ಲಿ ಸಮುದ್ರ ಪೂಜೆ ನಡೆಯಲಿದೆ. ಆ ಬಳಿಕ ನಾಡದೋಣಿ ಮೀನುಗಾರರು ಸಮುದ್ರಕ್ಕಿಳಿಯಲಿದ್ದಾರೆ.
-ಮಂಜು ಬಿಲ್ಲವ ಹಾಗೂ ಆನಂದ ಖಾರ್ವಿ, ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರು, ಗಂಗೊಳ್ಳಿ – ಬೈಂದೂರು

Advertisement

Udayavani is now on Telegram. Click here to join our channel and stay updated with the latest news.

Next