ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ 9ನೇ ಪದವಿ ಪ್ರದಾನ ಸಮಾರಂಭ ಜೂ. 8ರಂದು ಬೆಳಗ್ಗೆ 11 ಗಂಟೆಗೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಾಚಾರ್ಯ ಡಾ|ಎಸ್.ಬಿ. ವಣಕುದರೆ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಮುಖ್ಯ ಅತಿಥಿಯಾಗಿ ಜೈಪುರ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಡಾ| ಉದಯ ಯರಗಟ್ಟಿ ಆಗಮಿಸಲಿದ್ದು, ಎಸ್‌ಡಿಎಂ ಸೊಸೈಟಿ ಅಧ್ಯಕ್ಷ ಡಾ|ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ 543 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು ಎಂದರು. ಕಾಲೇಜಿನಲ್ಲಿ ಒಟ್ಟು ಏಳು ವಿಭಾಗಗಳಿದ್ದು, ಪ್ರತಿ ವಿಭಾಗದಲ್ಲಿ ಹೆಚ್ಚಿಗೆ ಅಂಕ ಗಳಿಸಿದ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ರ್‍ಯಾಂಕ್ ನೀಡಲಾಗುತ್ತದೆ. ಅತಿ ಹೆಚ್ಚು ಅಂಕ ಗಳಿಸಿದ (ಸಿಜಿಪಿಎ 9.70) ಇನ್‌ಫಾರ್ಮೇಶನ್ ಸೈನ್ಸ್ ವಿಭಾಗದ ವಿದ್ಯಾರ್ಥಿನಿ ಶಿರಸಿಯ ರಾಜಶ್ರೀ ಭಟ್ ಈ ಬಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಚಿನ್ನದ ಪದಕ ಪಡೆದಿದ್ದಾಳೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಕೆ. ಗೋಪಿನಾಥ, ಡಾ| ಜಿ.ಡಿ. ಕಮಲಾಪುರ, ಪ್ರೊ| ವಿ.ಕೆ. ಪರ್ವತಿ, ಎಂ.ಬಿ. ದೊಡ್ಡಮನಿ ಇದ್ದರು.