ಮಂಗಳೂರು: ಈ ವರ್ಷದ ಮೊದಲ ಚಂದ್ರಗ್ರಹಣ ಜ. 10ರಂದು ರಾತ್ರಿ 10.37ರಿಂದ 11ರ ಮುಂಜಾನೆ 2.42ರ ವೇಳೆಗೆ ಸಂಭವಿಸಲಿದ್ದು, ಗ್ರಹಣ ವೀಕ್ಷಣೆಗೆ ಪಿಲಿಕುಳದಲ್ಲಿ ಸಿದ್ಧತೆ ಮಾಡಲಾಗಿದೆ.
ಚಂದ್ರಗ್ರಹಣಗಳಲ್ಲಿ ಸಂಪೂರ್ಣ, ಭಾಗಶಃ ಮತ್ತು ಅರೆನೆರಳಿನ ಚಂದ್ರಗ್ರಹಣ ಎಂಬ ಮೂರು ವಿಧಗಳಿವೆ.
ಸಾಮಾನ್ಯವಾಗಿ ಸಂಭವಿಸುವ ಚಂದ್ರ ಗ್ರಹಣದಲ್ಲಿ ಭೂಮಿಯ ದಟ್ಟನೆರಳು ಚಂದ್ರನ ಮೇಲೆ ಬಿದ್ದು ಪೂರ್ಣ ಅಥವಾ ಭಾಗಶಃ ಚಂದ್ರಗ್ರಹಣ ನಮಗೆ ಗೋಚರವಾಗುತ್ತದೆ. ಆಗ ಚಂದ್ರನ ಬಿಂಬವು ತಾಮ್ರವರ್ಣ ಅಥವಾ ರಕ್ತವರ್ಣದಲ್ಲಿ ಕಂಗೊಳಿಸು ತ್ತದೆ. ಆದರೆ ಈ ಬಾರಿ ಸಂಭವಿಸುವ ಚಂದ್ರಗ್ರಹಣದಲ್ಲಿ ಭೂಮಿಯ ದಟ್ಟನೆರಳು ಚಂದ್ರನ ಮೇಲೆ ಬೀಳದೆ ಅರೆನೆರಳು (ತೆಳುನೆರಳು) ಚಂದ್ರನ ಮೇಲೆ ಬೀಳುವ ಕಾರಣ ಚಂದ್ರ ನಸುಗೆಂಪು ಅಥವಾ ತಾಮ್ರ ವರ್ಣಕ್ಕೆ ಬದಲಾಗಿ ಬೂದು ಬಣ್ಣದಲ್ಲಿ ಗೋಚರಿಸುತ್ತಾನೆ. ಈ ರೀತಿಯ ಅರೆನೆರಳಿನ ಚಂದ್ರಗ್ರಹಣವನ್ನು ತೋಳ ಚಂದ್ರಗ್ರಹಣ ಎಂಬು ದಾಗಿಯೂ ಕರೆಯಲಾಗುತ್ತದೆ.
2018ರ ಜನವರಿ ಮತ್ತು 2019ರ ಜುಲೈಯಲ್ಲಿ ಘಟಿಸಿದ ಚಂದ್ರಗ್ರಹಣದ ವೇಳೆ ಚಂದ್ರನು ರಕ್ತವರ್ಣದಲ್ಲಿ ಗೋಚರವಾಗಿದ್ದ.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಈ ವಿದ್ಯಮಾನವನ್ನು ವೀಕ್ಷಿಸಲು ಸಿದ್ಧತೆ ಮಾಡಲಾಗಿದೆ ಎಂದು ವಿಜ್ಞಾನ ಕೇಂದ್ರದ ಡಾ| ಕೆ.ವಿ. ರಾವ್ ತಿಳಿಸಿದ್ದಾರೆ.